ಹೆದ್ದಾರೀಲಿ ಕ್ಯಾಮೆರಾ ಅಳವಡಿಕೆ ವೀಕ್ಷಿಸಿದ ಎಡಿಜಿಪಿ ಅಲೋಕ್ ಕುಮಾರ

KannadaprabhaNewsNetwork |  
Published : May 14, 2024, 01:05 AM IST
ಎಡಿಜಿಪಿ ಅಲೋಕ್ ಕುಮಾರ್ ಅವರಿಂದ ಕ್ಯಾಮೆರಾ ಅಳವಡಿಕೆ ಕಾರ್ಯ ವೀಕ್ಷಣೆ | Kannada Prabha

ಸಾರಾಂಶ

ಎಕ್ಸ್ ಪ್ರೆಸ್ ವೇನಲ್ಲಿ 100 ಕಿಲೋಮೀಟರ್ ಗಿಂತಲೂ ಮೀರಿ ಚಾಲಕರು ವಾಹನಗಳ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸಿ ಸಾವು ನೋವು ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ಹೆದ್ದಾರಿಯಲ್ಲಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ

ಕನ್ನಡಪ್ರಭ ವಾರ್ತೆ ರಾಮನಗರ / ಮದ್ದೂರು

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ನಿಯಂತ್ರಿಸಲು ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪತ್ತೆಗಾಗಿ ಎಐ ಆಧಾರಿತ ಎಎನ್ ಪಿಆರ್ ಕ್ಯಾಮೆರಾ ಅಳವಡಿಸುವ ಕಾರ್ಯವನ್ನು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸೋಮವಾರ ವೀಕ್ಷಿಸಿದರು.

ಬಿಡದಿ ಬಳಿ ಕ್ಯಾಮೆರಾ ಅಳವಡಿಕೆ ಕಾರ್ಯವನ್ನು ವೀಕ್ಷಿಸಿದ ಅಲೋಕ್ ಕುಮಾರ್, ಹೆದ್ದಾರಿಯಲ್ಲಿ ವಾಹನಗಳ ಅಪಘಾತವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಕೂಡ ಪರಿಶೀಲನೆ ನಡೆಸಿದರು.

ರಾಮನಗರದ ಬಿಡದಿಯಿಂದ ಮಂಡ್ಯ ಗಡಿ ಭಾಗದ ನಿಡಘಟ್ಟವರೆಗೆ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮತ್ತು ವಾಹನಗಳ ಅಪಘಾತ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿರು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾರ್ಗದರ್ಶನ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಎಕ್ಸ್ ಪ್ರೆಸ್ ವೇನಲ್ಲಿ 100 ಕಿಲೋಮೀಟರ್ ಗಿಂತಲೂ ಮೀರಿ ಚಾಲಕರು ವಾಹನಗಳ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸಿ ಸಾವು ನೋವು ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ಹೆದ್ದಾರಿಯಲ್ಲಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಎಂದರು.

ವಾಹನಗಳ ಚಾಲಕರು ಮತ್ತು ಮುಂದಿನ ಸೀಟಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿ ಪ್ರಯಾಣ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಸೀಟ್ ಬೆಲ್ಟ್ ಧರಿಸದೆ ಪ್ರಯಾಣ ಮಾಡುವ ವಾಹನಗಳ ಚಾಲಕರನ್ನು ಸಿಸಿ ಕ್ಯಾಮೆರಾದ ಮೂಲಕ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಕ್ಸ್ ಪ್ರೆಸ್ ವೇ ನಲ್ಲಿ ನಾಲ್ಕು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಎರಡು ವಿಭಾಗಗಳಲ್ಲಿ ತಲಾ ಎರಡು ಗಸ್ತು ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚಿನ ನಿಗಾ ವಹಿಸಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಹೆದ್ದಾರಿಯಲ್ಲಿ ದ್ವಿಚಕ್ರ. ಮತ್ತು ತ್ರಿಚಕ್ರ ಹಾಗೂ ಟ್ರ್ಯಾಕ್ಟರ್ ಸೇರಿದಂತೆ ಮೋಟಾರ್ ವಾಹನಗಳ ಸಂಚಾರವನ್ನು ನಿಷೇಧಿಸುವ ಮೂಲಕ ಹೆಚ್ಚುವರಿಯಾಗಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಇದರಿಂದ ಕ್ರಮೇಣ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಎಕ್ಸ್ ಪ್ರೆಸ್ ವೇನಲ್ಲಿ ರಸ್ತೆ ಸುರಕ್ಷತೆಗಾಗಿ ಸರ್ವಿಸ್ ರಸ್ತೆಗೆ ಹೊಂದಿಕೊಂಡಂತೆ ಉಕ್ಕಿನ ತಂತಿ ಬೇಲಿಗಳನ್ನು ಅಳವಡಿಸಲಾಗಿದೆ. ಸರ್ವಿಸ್ ರಸ್ತೆಯ ಎರಡು ಬದಿಗಳಲ್ಲಿ ಕೆಲವರು ಉಕ್ಕಿನ ಬೇಲಿಗಳನ್ನು ಕತ್ತರಿಸಿ ಹಗಲು-ರಾತ್ರಿ ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಅಪಘಾತಗಳ ಜೊತೆಗೆ ದರೋಡೆ ಮತ್ತಿತರ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಸಂಚಾರ ಪೊಲೀಸ್ ಠಾಣೆ ಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ,ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಮಂಡ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ತಿಮ್ಮಯ್ಯ, ಗಂಗಾಧರ ಸ್ವಾಮಿ, ಮದ್ದೂರು ವೃತ್ತ ನಿರೀಕ್ಷಕ ಕೆ.ಆರ್. ಪ್ರಸಾದ್, ಸಂಚಾರ ಠಾಣೆ ಪಿಎಸ್ಐ ಜೆ.ಇ.ಮಹೇಶ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು