ಒಕ್ಕಲಿಗರ ಸಂಘದಿಂದ ಅದ್ಧೂರಿ ಕೆಂಪೇಗೌಡ ಜಯಂತಿ

KannadaprabhaNewsNetwork |  
Published : Jul 26, 2024, 01:32 AM IST
 ಅದ್ದೂರಿಯಿಂದ ಜರುಗಿದ  ಕೆಂಪೇಗೌಡ ಜಯಂತಿ | Kannada Prabha

ಸಾರಾಂಶ

ಪಟ್ಟಣದಲ್ಲಿ ವಿಶ್ವಮಾನವ ಒಕ್ಕಲಿಗರ ಸಂಘದ ವತಿಯಿಂದ ಶ್ರೀ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವು ವಾದ್ಯ ಮೇಳಗಳ ಜೊತೆ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದಲ್ಲಿ ವಿಶ್ವಮಾನವ ಒಕ್ಕಲಿಗರ ಸಂಘದ ವತಿಯಿಂದ ಶ್ರೀ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವು ವಾದ್ಯ ಮೇಳಗಳ ಜೊತೆ ಅದ್ಧೂರಿಯಾಗಿ ಜರುಗಿತು. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಬೆಳ್ಳಿರಥದಲ್ಲಿ ಕೂರಿಸಲಾಗಿದ್ದ ಶ್ರೀ ನಾಡಪ್ರಭು ಕೆಂಪೇಗೌಡ ಪುತ್ಥಳಿಗೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಎಂಆರ್ ಮಂಜುನಾಥ್ ಸಮಾಜದ ಹಿರಿಯ ಮುಖಂಡರು, ಮಾಜಿ ಶಾಸಕ ಆರ್ ನರೇಂದ್ರ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಜಯಂತಿಯನ್ನು ದೇಶಾದ್ಯಂತ ಮೂಲೆ ಮೂಲೆಯಲ್ಲಿ ಆಚರಣೆ ಮಾಡುತ್ತಿದ್ದೇವೆ. ಮಹನೀಯರ ಜಯಂತಿ ಆಚರಣೆ ಮಾಡುವ ನಾವು ಅವರ ಬದುಕು ಅವರ ಹೋರಾಟವನ್ನು ನಾವು ಅನುಸರಿಸಬೇಕು. ನಮ್ಮ ಪೂರ್ವಿಕರು ಕೊಟ್ಟಿರುವಂತ ಹಬ್ಬಗಳು, ಜಯಂತಿ ಮಾಡುವುದರಿಂದ ಒಗ್ಗಟ್ಟು ಬೆಳೆಯುತ್ತದೆ. ಬುದ್ಧ, ಬಸವ ಅಂಬೇಡ್ಕರ್, ಕುವೆಂಪು ಎಲ್ಲಾ ನಾಯಕರು ಕೂಡ ನಾಡಿಗೆ ಅತ್ಯಂತ ಮರೆಯಲಾಗದ ಕೊಡುಗೆ ಕೊಟ್ಟಿದ್ದಾರೆ. ಕುವೆಂಪು ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳಿದ್ದಾರೆ. ಅದನ್ನು ಅನುಸರಿಸುತ್ತ ಕೆಂಪೇಗೌಡರು ಕಟ್ಟಿದ್ದ ಬೃಹತ್ ಬೆಂಗಳೂರು ಸರ್ವ ಜನಾಂಗದ ಜನರಿಂದ ಕಂಗೊಳಿಸುತ್ತಿದೆ.ನಮ್ಮ ಪೂರ್ವಿಕರು ಅವರದ್ದೇ ಆದ ವಿಶೇಷ ಕೊಡುಗೆಯನ್ನು ನಾಡಿಗೆ ಕೊಟ್ಟಿದ್ದಾರೆ. ಅದನ್ನು ನಾವು ಅನುಸರಣೆ ಮಾಡುವ ಮೂಲಕ ಉತ್ತಮ ಜಗತ್ತನ್ನು ನಿರ್ಮಾಣ ಮಾಡುವಂತವರಾಗಬೇಕು. ನಮ್ಮ ಮಕ್ಕಳಿಗೆ ಎಲ್ಲಾ ಪೂರ್ವಿಕರ ಚರಿತ್ರೆಯನ್ನು ತಿಳಿಸುವ ಜೊತೆಗೆ ಜೀವನದಲ್ಲಿ ನಗು ನಗುತ ಬಾಳೋಣ. ಭಗವಂತ ಕೊಟ್ಟಿರೋ ಜೀವನ ಅಮೂಲ್ಯವಾದದ್ದು ಅದನ್ನು ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಸದಾ ಯೋಚನೆ ಮಾಡೋಣ ಮಾನವೀಯತೆಯನ್ನು ಜಗತ್ತಿಗೆ ಸಾರೋಣ ಎಂದು ತಿಳಿಸಿದರು.

ವಿವಿಧ ವೇಷ ಭೂಷಣಗಳ ಝಲಕ್:ಮೆರವಣಿಗೆಯಲ್ಲಿ ಕೇರಳದ ಚಂಡಿ ವಾದ್ಯ, ಡೊಳ್ಳು ಕುಣಿತ ವೀರಗಾಸೆ, ಬೊಂಬೆ ಕುಣಿತ, ದೊಣ್ಣೆ ವರಸೆ, ಹಳ್ಳಿಕಾರ್ ಜೋಡ್ ಎತ್ತುಗಳು ನೋಡುಗರ ಕಣ್ಮನ ಸೆಳೆಯಿತು. ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ ಬಂಡಳ್ಳಿ ರಸ್ತೆ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಸಾಗಿತು.

ಕಾರ್ಯಕ್ರಮದಲ್ಲಿ ಶಾಸಕ ಎಂ. ಆರ್. ಮಂಜುನಾಥ್, ಮಾಜಿ ಶಾಸಕರಾದ ಆರ್ ನರೇಂದ್ರ, ಪರಿಮಳ ನಾಗಪ್ಪ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಗಂಗಾಧರ್, ನಿರ್ದೇಶಕ ಮಂಜೇಗೌಡ, ಜಿಲ್ಲಾಧ್ಯಕ್ಷ ಎಲ್ .ನಾಗೇಂದ್ರ, ವಿಶ್ವಮಾನವ ಒಕ್ಕಲಿಗರ ಸಂಘದ ಅಧ್ಯಕ್ಷ ಲಿಂಗರಾಜುಗೌಡ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಟಿ ಹೆಚ್‌ಒ ಪ್ರಕಾಶ್, ಇಒ ಉಮೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಗೌಡ, ಜಿಪಂ ಮಾಜಿ ಅಧ್ಯಕ್ಷ ನಟರಾಜ್ ಗೌಡ, ಪಪಂ ಸದಸ್ಯರು ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ