ಆದಿಚುಂಚನಗಿರಿ, ಸುತ್ತೂರು ಹಾಗೂ ಸಿದ್ಧಗಂಗಾ ಮಠಗಳು ಶಿವನ ಮೂರು ಕಣ್ಣುಗಳು ಇದ್ದಂತೆ: ಸಿಆರ್‌ಎಸ್

KannadaprabhaNewsNetwork | Published : Feb 20, 2025 12:50 AM

ಸಾರಾಂಶ

ಭಾರತ ಜ್ಞಾನ ಮತ್ತು ಮಾನವ ಸಂಪನ್ಮೂಲತೆಯ ಸಂಪತ್ಭರಿತ ದೇಶ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ವಿಶ್ವ ಮಟ್ಟದಲ್ಲಿ ಸಾಬೀತುಗೊಳಿಸುತ್ತಿದೆ. ಇಂಥ ಮಹನೀಯರ ಸಾಲಿಗೆ ಇಂದಿನ ಯುವ ಪೀಳಿಗೆಯ ಸಾಗಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದಿಚುಂಚನಗಿರಿ, ಸುತ್ತೂರು ಹಾಗೂ ಸಿದ್ಧಗಂಗಾ ಮಠಗಳು ಶಿವನ ಮೂರು ಕಣ್ಣುಗಳಿದ್ದಂತೆ. ಶ್ರೀಮಠವು ಆಧ್ಯಾತ್ಮಕ್ಕೆ ಸೀಮಿತವಾಗದೆ ಶಿಕ್ಷಣ, ಆರೋಗ್ಯ, ಅರಣ್ಯ, ವಿಜ್ಞಾನ, ತಂತ್ರಜ್ಞಾನ ಹೀಗೆ ಅನೇಕ ಕ್ಷೇತ್ರಗಳನ್ನು ಪೋಷಿಸಿ ಮುನ್ನಡೆಯುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೊಂಡಾಡಿದರು.ಆದಿಚುಂಚನಗಿರಿ ಮಠದಲ್ಲಿ ನಡೆದ ವಿಜ್ಞಾತಂ ಉತ್ಸವದಲ್ಲಿ ಶ್ರೀಗಳ ಜೊತೆಗೂಡಿ ಸಚಿವ ಎನ್.ಚಲುವರಾಯಸ್ವಾಮಿ ವಿಜ್ಞಾತಂ ಸಂಚಯ- ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ಭಾರತ ಜ್ಞಾನ ಮತ್ತು ಮಾನವ ಸಂಪನ್ಮೂಲತೆಯ ಸಂಪತ್ಭರಿತ ದೇಶ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ವಿಶ್ವ ಮಟ್ಟದಲ್ಲಿ ಸಾಬೀತುಗೊಳಿಸುತ್ತಿದೆ. ಇಂಥ ಮಹನೀಯರ ಸಾಲಿಗೆ ಇಂದಿನ ಯುವ ಪೀಳಿಗೆಯ ಸಾಗಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕಿದೆ ಎಂದರು.

ಹಲವು ಸಾಧನೆಗಳ ಜೊತೆಗೆ ಶ್ರೀಮಠವು ಕೃಷಿ ಕಾಲೇಜು ಸ್ಥಾಪಿಸಿ ಕೃಷಿ ಕ್ರಾಂತಿಯನ್ನು ಮಾಡುವ ಸಂಕಲ್ಪ ತೊಟ್ಟಿರುವುದು ಗುರುಗಳ ದೂರ ದೃಷ್ಟಿಯ ಸಂಕೇತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ್ದ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸಂತನಿಗೂ ವಿಜ್ಞಾನಿಗೂ ವ್ಯತ್ಯಾಸವಿಲ್ಲ. ಧರ್ಮ ಆಧ್ಯಾತ್ಮವನ್ನು ಬೋಧಿಸುವ ಸಂತ ಒಬ್ಬ ಶ್ರೇಷ್ಠ ವಿಜ್ಞಾನಿಯಂತೆ ಅಂತರಿಕ್ಷ ಯಾನದ ಪರಿಕಲ್ಪನೆಯನ್ನು ತಿಳಿಸುವನು. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವಿದ್ಯಾರ್ಥಿಗಳು ಶ್ರೀ ಗುರುಗಳ ಆಶೀರ್ವಾದದಿಂದ ಅಂತರಿಕ್ಷಕ್ಕೆ ಉಪಗ್ರಹವನ್ನು ಹಾರಿಸಿ, ಅದಕ್ಕೆ ನಿಲ್ದಾಣವನ್ನು ಸ್ಥಾಪಿಸಿದ ಕೀರ್ತಿ ಪಡೆದಿರುವುದು ಮಹಾ ಸಾಧನೆಯೇ ಸರಿ ಎಂದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ನೂರಾರು ವಿಜ್ಞಾನ ಮಾದರಿಗಳು ನಿಮ್ಮ ಜ್ಞಾನ ಸಂಪನ್ನತೆಗೆ ಹಿಡಿದ ಕನ್ನಡಿಯಿದ್ದಂತೆ ಹೊಸತನ್ನು ಹುಡುಕುವುದೇ ಶಿಕ್ಷಣದ ಗುರಿಯಾಗಬೇಕು. ನಿಮ್ಮಿಂದ ಶ್ರೇಷ್ಠ ಅನ್ವೇಷಣೆಗಳು ಆವಿಷ್ಕಾರಗೊಂಡು ಜಗತ್ತಿಗೆ ಮಾದರಿಯಾಗಬೇಕು ಎಂದರು.

ಮಂಡ್ಯ ಶಾಸಕ ಪಿ.ರವಿಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಡಾ. ಗೌತಮ್ ರಾಧಾಕೃಷ್ಣ ದೇಸಿರಾಜು ಬರೆದಿರುವ ಮತದಾರನ ಹಕ್ಕು ಮತ್ತು ಜವಾಬ್ದಾರಿ ಕುರಿತ ಡೀ ಲಿಮಿಟೇಶನ್ಸ್ ಎಂಬ ಕೃತಿಯನ್ನು ಶ್ರೀಗಳು ಮತ್ತು ಗಣ್ಯರು ಲೋಕಾರ್ಪಣೆ ಮಾಡಿದರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಮುಖ್ಯ ಸಿಇಒ ಕೆ.ಆರ್.ನಂದಿನಿ, ಕರ್ನಾಟಕ ಲೋಕ ಸೇವಾ ಆಯೋಗದ ಜಿ.ಪ್ರಭು, ವಿಜ್ಞಾನಿ ಗೀರಿಶ್ ಲಿಂಗಣ್ಣ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎ.ಶೇಖರ್, ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ, ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ.ಟಿ.ಶಿವರಾಮು ಸೇರಿದಂತೆ ಹಲವರು ಇದ್ದರು.

ವಿಜ್ಞಾತಂ ಉತ್ಸವದಲ್ಲಿ ಡಾ.ಐ.ವೇಣುಗೋಪಾಲ್, ಪ್ರೊ.ಎನ್.ಬಿ.ರಾಮಚಂದ್ರ, ಡಾ.ವಿ.ಬಿ.ಆರತಿ ಅವರು ವಿವಿಧ ವಿಷಯಗಳನ್ನು ಕುರಿತು ಉಪನ್ಯಾಸ ನೀಡಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಚುಂಚಾದ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಹೆಚ್.ಎ.ಎಲ್ ಸಂಸ್ಥೆ ಸೇರಿದಂತೆ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಿದ್ದವು, ಶ್ರೀಗಳು, ಸಾಧು ಸಂತರು ಹಾಗೂ ಗಣ್ಯರು ವಸ್ತು ಪ್ರದರ್ಶನ ಉದ್ಘಾಟನೆ ಬಳಿಕ ವೀಕ್ಷಣೆ ಮಾಡಿದರು.

ಇಂದು ಶ್ರೀಗಳಿಗೆ ಪಟ್ಟಾಭಿಷೇಕ, ವಿಜ್ಞಾತಂ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಫೆ.20 ರಂದು ಬೆಳಗ್ಗೆ 10.30ಕ್ಕೆ ಕ್ಷೇತ್ರದ ಬಿಜಿಎಸ್ ಸಭಾ ಭವನದಲ್ಲಿ ಶ್ರೀಮಠದ ಪೀಠಾಧ್ಯಕ್ಷ ಶ್ರೀಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಮತ್ತು ಗುಜರಾತ್‌ನ ರಾಜ್‌ಕೋಟ್ ಆರ್ಷ ವಿದ್ಯಾಮಂದಿರದ ಅಧ್ಯಕ್ಷ ಶ್ರೀಸ್ವಾಮಿ ಪರಮಾತ್ಮಾನಂದ ಸರಸ್ವತಿಜೀ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸಮ್ಮುಖದಲ್ಲಿ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಹರಿದ್ವಾರದ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಶ್ರೀಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರಿಗೆ ಪ್ರಶಸ್ತಿ ಪದಕವನ್ನೊಳಗೊಂಡ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸಮಾರಂಭ ಉದ್ಘಾಟಿಸುವರು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ವಿಪಕ್ಷ ನಾಯಕ ಆರ್.ಅಶೋಕ್, ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಹಾಗೂ ವಿವಿಧ ಶಾಖಾ ಮಠಗಳ ಶ್ರೀಗಳು ಪಾಲ್ಗೊಳ್ಳುವರು.

Share this article