ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಂಶೋಧನೆ ಸಭೆ ಉದ್ಘಾಟಿಸಿ ಮಾತನಾಡಿ, ಜೀವ ವೈದ್ಯಕೀಯ ಅನ್ವಯಿಕೆಗಳಿಗೆ ಸಂಬಂಧಿಸಿದ ಅಪ್ ಪರಿವರ್ತನೆ ತಂತ್ರಜ್ಞಾನ ಬಳಸಿಕೊಂಡು ಜೈವಿಕ ಪಾಲಿಮರ್ ಆಧಾರಿತ ಸಂಯೋಜಕ ತಯಾರಿಕೆ ತಂತ್ರಗಳ ತಾಂತ್ರಿಕ ವಿಶ್ಲೇಷಣೆಯಲ್ಲಿ ಅವಲೋಕನ ಕುರಿತ ಮಹತ್ವದ 3 ಡಿ ಪ್ರಿಂಟಿಂಗ್ ಸಂಶೋಧನೆಯನ್ನು ಎರಡು ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಕೈಗೊಂಡಿವೆ ಎಂದರು.
ಜೀವವೈದ್ಯಕೀಯ ಎಂಜಿನಿಯರಿಂಗ್ ಹಾಗೂ ಆರೋಗ್ಯ ತಂತ್ರಜ್ಞಾನಗಳಲ್ಲಿ ಬಳಕೆಯಾಗುವ ಮುಂದಿನ ತಲೆಮಾರಿನ ಜೈವಿಕ ಪಾಲಿಮರ್ ಆಧಾರಿತ ಉತ್ಪಾದನಾ ವಿಧಾನಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಈ ಸಹಯೋಗವು ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವ ಜೊತೆಗೆ ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸಿ, ಜೀವವೈದ್ಯಕೀಯ ವಿಜ್ಞಾನ ಮತ್ತು ಉನ್ನತ ಉತ್ಪಾದನಾ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಭವಿಷದ ಸಂಯುಕ್ತ ಯೋಜನೆಗಳಿಗೆ ಹೊಸ ದಾರಿಗಳನ್ನು ತೆರೆಯಲಿದೆ ಎಂದರು.ಈ ಅಂತಾರಾಷ್ಟ್ರೀಯ ವಿನಿಮಯ ಕಾರ್ಯಕ್ರಮವು ಭಾರತ ಮತ್ತು ಫ್ರಾನ್ಸ್ ನಡುವಿನ ಶೈಕ್ಷಣಿಕ ಸಹಕಾರ ಬಲ ಪಡಿಸುವಲ್ಲಿ ಮತ್ತು ಸಂಶೋಧನೆಯ ಹೊಸ ಅವಿಷ್ಕಾರವನ್ನು ಉತ್ತೇಜಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಸಂಯುಕ್ತ ಸಂಶೋಧನಾ ಯೋಜನೆಯನ್ನು ಯುನಿವರ್ಸಿಟಿ ಆಫ್ ಪಿಕಾರ್ಡಿ ಜ್ಯೂಲ್ಸ್ ವರ್ನೆನ ಪ್ರೊ.ಸ್ಟಿಫನ್ ಪೆನಿಯರ್ ಮತ್ತು ಅದಿಚುಂಚನಗಿರಿ ವಿಶ್ವವಿದ್ಯಾಲಯದ ರಿಸರ್ಚ್ ಡೀನ್ ಪ್ರೊ.ಪ್ರಶಾಂತಕಾಳಪ್ಪ ನೇತೃತ್ವ ವಹಿಸಿದ್ದಾರೆ ಎಂದರು.
ಸಂಶೋಧನೆಯ ಸಲುವಾಗಿ ಪ್ರೊ. ಸ್ಟಿಫನ್ ಪೆನಿಯರ್ ಅವರು ಮೂರು ವಾರಗಳ ಕಾಲ ಆದಿಚುಂಚನಗಿರಿ ವಿಶ್ವ ವಿದ್ಯಾಲಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಅವಧಿಯಲ್ಲಿ ಸಂಯುಕ್ತ ಸಂಶೋಧನಾ ಚಟುವಟಿಕೆಗಳು, ಪ್ರಯೋಗಾಲಯ ಸಂವಹನ, ಶೈಕ್ಷಣಿಕ ಚರ್ಚೆಗಳು ಹಾಗೂ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.ಶೈಕ್ಷಣಿಕ ವಿನಿಮಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಯುಪಿಜೆವಿಯ ಮೂವರು ವಿದ್ಯಾರ್ಥಿಗಳು ಎರಡು ತಿಂಗಳ ಸಂಶೋಧನಾ ಅಂತರಂಗ ತರಬೇತಿಗಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. ಈ ಅವಧಿಯಲ್ಲಿ ಪ್ರೊ. ಪ್ರಶಾಂತಕಾಳಪ್ಪ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಯೋಗಾತ್ಮಕ ಸಂಶೋಧನೆ, ದತ್ತಾಂಶ ವಿಶ್ಲೇಷಣೆ ಹಾಗೂ ಅನ್ವೇಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಮೂಲ್ಯ ಅಂತರರಾಷ್ಟ್ರೀಯ ಸಂಶೋಧನಾ ಅನುಭವ ಪಡೆದುಕೊಳ್ಳಲಿದ್ದಾರೆ ಎಂದರು.
ಈ ವೇಳೆ ಕುಲಸಚಿವ ಪ್ರೊ.ಸಿ.ಕೆ.ಸುಬ್ಬರಾಯ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಸೇರಿದಂತೆ ಹಲವರು ಇದ್ದರು.