ಜಾತಿ ಗಣತಿಯಲ್ಲಿ ಸತ್ಯಾಂಶ ಬರೆಸಿ

KannadaprabhaNewsNetwork |  
Published : Aug 02, 2025, 12:00 AM IST
6 | Kannada Prabha

ಸಾರಾಂಶ

ಕುವೆಂಪುನಗರದ ಆದಿಶಕ್ತಿ ಕಾಳಮ್ಮ ಬಂದಂತಮ್ಮ ಕಲ್ಯಾಣ ಮಂಟಪ,

ಕನ್ನಡಪ್ರಭ ವಾರ್ತೆ ಮೈಸೂರು

ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಜಾತಿ ಗಣತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಸತ್ಯಾಂಶವನ್ನು ಬರೆಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ಕುವೆಂಪುನಗರದ ಆದಿಶಕ್ತಿ ಕಾಳಮ್ಮ ಬಂದಂತಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ 25ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಬರೆಸುವಾಗ ಏನನ್ನು ಉತ್ಪ್ರೆಕ್ಷೆ ಮಾಡಿ ಹೇಳಬೇಡಿ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಇನ್ನೊಬ್ಬರಿಗೆ ತೊಂದರೆ ಕೊಟ್ಟು ನಗಬಾರದು. ಅಂತಹ ನಗುವಿನಲ್ಲಿ ಶ್ರದ್ಧೆ, ವಿಶ್ವಾಸ ಹಾಗೂ ಶಕ್ತಿ ಇರಬೇಕು. ದೇವತೆಗಳಿಗೂ ಮನುಷ್ಯರಿಗೂ ವ್ಯತ್ಯಾಸ ಹೆಚ್ಚಾಗಿ ಕಂಡು ಬರುವುದಿಲ್ಲ. ಯಾವ ಮನಸ್ಸು ಶುದ್ಧವಾಗಿರುತ್ತದೆಯೋ ಅಂತಹ ಮನಸ್ಸಿನಲ್ಲಿ ಒಳ್ಳೆಯ ಮಾತುಗಳು, ಒಳ್ಳೆಯ ಭಾವನೆಗಳು ಬರುತ್ತದೆ ಎಂದು ಅವರು ತಿಳಿಸಿದರು.

ಕುವೆಂಪು ಹೇಳಿರುವ ಹಾಗೆ ಮನಸ್ಸು ಮಲ್ಲಿಗೆಯಂತಿದ್ದರೆ ಮಾತುಗಳು ಪರಿಮಳದಿಂದ ಕೂಡಿರುತ್ತದೆ. ಶುದ್ಧ ಹಾಗೂ ನಿಷ್ಕಲ್ಮಶ ಮನಸ್ಸಿನಿಂದ ಬರುವ ಮಾತು ಹಾಗೂ ನಗು ಎಂತಹ ಸಮಸ್ಯೆಗಳನ್ನೂ ಹೋಗಲಾಡಿಸುತ್ತದೆ. ಹೀಗಾಗಿ ಮನೆಯಲ್ಲಿ ತಾಯಂದಿರನ್ನು ಪ್ರೀತಿಯಿಂದ ನಗುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಸಾಹಿತಿ ಡಾ. ಲತಾ ರಾಜಶೇಖರ್, ಮಾಜಿ ಶಾಸಕ ಎಲ್. ನಾಗೇಂದ್ರ, ರಾಜ್ಯ ಒಕ್ಕಲಿಗರ ಸಂಘದ ಸಿ.ಜಿ. ಗಂಗಾಧರ, ಕೆ.ವಿ. ಶ್ರೀಧರ್, ಎಂ.ಬಿ. ಮಂಜೇಗೌಡ, ಮೈಸೂರು ಚಾಮರಾಜನಗರ ಒಕ್ಕಲಿಗ ಸಂಘದ ಅಧ್ಯಕ್ಷ ಮರಿಸ್ವಾಮಿ, ಮಹಿಳಾ ಸಮಾಜದ ಪದಾಧಿಕಾರಿಗಳಾದ ರಾಜೇಶ್ವರಿ ನಾಗರಾಜ, ಅನಿತಾ, ಸುನಂದಾ, ವಸಂತಾ, ಸುವರ್ಣ ಗಣೇಶ, ವಿಮಲಾ, ರತ್ನಾ, ರುಕ್ಮಿಣಿ ರಮೇಶ್, ಸವಿತಾ ಸಣ್ಣತಮ್ಮೇಗೌಡ, ಶಾರದಾ ಮಂಜುನಾಥ್, ವಿಜಯ ಮಂಜಪ್ಪ ಮೊದಲಾದವರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ