ಆದಿತ್ಯರಾಜ್‌ ಕೇಸ್‌: ಸಿಐಡಿ ತನಿಖೆ ತೀವ್ರ

KannadaprabhaNewsNetwork |  
Published : Jun 11, 2026, 03:30 AM IST
10 HRR 03. & 03 Aಹರಿಹರಕ್ಕೆ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಬುಧವಾರ ಬೆಳಗ್ಗೆ ದಿಢೀರ್ ಆಗಮಿಸಿ, ಹರಿಹರ ನಗರ ಪ್ರದಕ್ಷಿಣೆ ನಡೆಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಾಥ್ ನೀಡಿದರು. | Kannada Prabha

ಸಾರಾಂಶ

ಬಹುಕೋಟಿ ರುಪಾಯಿ ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಿರುದ್ಧದ ತನಿಖೆ ಮಹತ್ವದ ಹಂತ ತಲುಪಿದ್ದು, ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಯ ವಿಶೇಷ ತನಿಖಾ ತಂಡ ಬುಧವಾರ ಬೆಳಗಾವಿಗೆ ಆಗಮಿಸಿದೆ. ಸಾವಿರಾರು ಠೇವಣಿದಾರರ ಹಣ ಹೂಡಿಕೆ, ಕೋಟ್ಯಂತರ ರುಪಾಯಿ ವಹಿವಾಟು ಹಾಗೂ ಹೆಚ್ಚಿನ ಬಡ್ಡಿಯ ಆಮಿಷದ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಹುಕೋಟಿ ರುಪಾಯಿ ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಿರುದ್ಧದ ತನಿಖೆ ಮಹತ್ವದ ಹಂತ ತಲುಪಿದ್ದು, ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಯ ವಿಶೇಷ ತನಿಖಾ ತಂಡ ಬುಧವಾರ ಬೆಳಗಾವಿಗೆ ಆಗಮಿಸಿದೆ. ಸಾವಿರಾರು ಠೇವಣಿದಾರರ ಹಣ ಹೂಡಿಕೆ, ಕೋಟ್ಯಂತರ ರುಪಾಯಿ ವಹಿವಾಟು ಹಾಗೂ ಹೆಚ್ಚಿನ ಬಡ್ಡಿಯ ಆಮಿಷದ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಸಿಐಡಿ ಅಧಿಕಾರಿಗಳ ತಂಡ ನಗರದಲ್ಲಿನ ತಿಳಕವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಇದುವರೆಗೆ ಸ್ಥಳೀಯ ಪೊಲೀಸರು ಸಂಗ್ರಹಿಸಿರುವ ದಾಖಲೆಗಳು, ದೂರುಗಳು, ಬ್ಯಾಂಕ್ ವ್ಯವಹಾರಗಳ ಮಾಹಿತಿ ಹಾಗೂ ಪ್ರಾಥಮಿಕ ತನಿಖೆಯ ವರದಿಗಳನ್ನು ಪರಿಶೀಲಿಸಿತು. ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳು, ಡಿಜಿಟಲ್ ಮಾಹಿತಿ ಹಾಗೂ ತನಿಖಾ ಕಡತಗಳನ್ನು ಸಿಐಡಿ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.ಸಿಐಡಿ ಅಧಿಕಾರಿಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ, ಸಂಸ್ಥೆಯ ಹಣಕಾಸು ಚಟುವಟಿಕೆಗಳು, ಹೂಡಿಕೆದಾರರ ವಿವರಗಳು, ಹಣ ವರ್ಗಾವಣೆಗಳ ಸ್ವರೂಪ ಹಾಗೂ ಆರೋಪಿಗಳ ಪಾತ್ರದ ಬಗ್ಗೆ ಮಾಹಿತಿ ಕಲೆಹಾಕಿದರು. ಇದುವರೆಗೆ ದಾಖಲಾಗಿರುವ ದೂರುಗಳ ಸಂಖ್ಯೆ, ವಶಪಡಿಸಿಕೊಂಡ ದಾಖಲೆಗಳು ಹಾಗೂ ಸಂಸ್ಥೆಯ ಆಸ್ತಿ-ಪಾಸ್ತಿಗಳ ವಿವರಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಸಂಸ್ಥೆಯು ಹೆಚ್ಚಿನ ಬಡ್ಡಿದರ ನೀಡುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಕೋಟ್ಯಂತರ ರುಪಾಯಿ ಠೇವಣಿ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ. ಪ್ರತಿ ತಿಂಗಳು ಶೇ.5 ರಷ್ಟು ಬಡ್ಡಿ, ಹೆಚ್ಚಿನ ಲಾಭಾಂಶ ಹಾಗೂ ಸುರಕ್ಷಿತ ಹೂಡಿಕೆಯ ಭರವಸೆ ನೀಡಿ ಸಾವಿರಾರು ಜನರನ್ನು ಆಕರ್ಷಿಸಲಾಗಿದೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಸುಮಾರು 6,500ಕ್ಕೂ ಹೆಚ್ಚು ಹೂಡಿಕೆದಾರರು ಮತ್ತು ಠೇವಣಿದಾರರು ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಹಣವನ್ನು ಮರಳಿ ನೀಡುವಂತೆ ಆಗ್ರಹಿಸಿದ್ದಾರೆ.ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಂಸ್ಥೆಗೆ ಭಾರತೀಯ ರಿಸರ್ವ್ ಬ್ಯಾಂಕ್, ಸೆಬಿ ಅಥವಾ ಇತರ ಹಣಕಾಸು ನಿಯಂತ್ರಣ ಸಂಸ್ಥೆಗಳ ಅಗತ್ಯ ಅನುಮತಿ ಇಲ್ಲದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಐಡಿ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ.ಪ್ರಕರಣದ ಪ್ರಮುಖ ಆರೋಪಿ ಹಾಗೂ ಸಂಸ್ಥೆಯ ಮುಖ್ಯಸ್ಥ ಬಾಲರಾಜ್ ಮಾನೆ ವಿರುದ್ಧ ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರ ಪತ್ತೆಗಾಗಿ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ಮುಂದುವರಿಸಿವೆ. ಸಂಸ್ಥೆಯ ಇತರೆ ನಿರ್ದೇಶಕರು, ಪಾಲುದಾರರು, ಏಜೆಂಟರು ಹಾಗೂ ಹಣ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದವರ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ.ಸಿಐಡಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸಂಸ್ಥೆಯ ಬ್ಯಾಂಕ್ ಖಾತೆಗಳು, ಆನ್‌ಲೈನ್ ವಹಿವಾಟುಗಳು, ಆಸ್ತಿ ವಿವರಗಳು, ಹೂಡಿಕೆದಾರರ ದಾಖಲೆಗಳು ಹಾಗೂ ಹಣ ವರ್ಗಾವಣೆಗಳ ಸಂಪೂರ್ಣ ಜಾಡು ಪತ್ತೆಹಚ್ಚಲು ಮುಂದಾಗಿದ್ದಾರೆ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆಯೇ, ಆಸ್ತಿಗಳ ಖರೀದಿಗೆ ಬಳಸಲಾಗಿದೆಯೇ ಅಥವಾ ಬೇರೆ ರಾಜ್ಯಗಳಿಗೆ ಹರಿದಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.ಪ್ರಕರಣದ ವ್ಯಾಪ್ತಿ ಬೆಳಗಾವಿಗೆ ಮಾತ್ರ ಸೀಮಿತವಾಗಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಲ್ಲಿಯೂ ಹೂಡಿಕೆದಾರರು ಇರುವ ಸಾಧ್ಯತೆಗಳ ಬಗ್ಗೆ ಸಿಐಡಿ ಪರಿಶೀಲನೆ ನಡೆಸುತ್ತಿದೆ. ಈ ಕಾರಣದಿಂದಲೇ ಪ್ರಕರಣದ ತನಿಖೆಗೆ ವಿಶೇಷ ಆದ್ಯತೆ ನೀಡಲಾಗಿದೆ.ಇದೀಗ ಸಿಐಡಿ ತನಿಖೆ ಆರಂಭವಾಗಿರುವುದರಿಂದ ಸಂಸ್ಥೆಯ ಹಣಕಾಸು ವ್ಯವಹಾರಗಳ ನಿಜಸ್ವರೂಪ, ವಂಚನೆಯ ನಿಖರ ಪ್ರಮಾಣ, ಹಣದ ಹರಿವಿನ ಮಾರ್ಗಗಳು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವವರ ಕುರಿತು ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ತಮ್ಮ ಜೀವನದ ಉಳಿತಾಯವನ್ನು ಹೂಡಿಕೆ ಮಾಡಿರುವ ಸಾವಿರಾರು ಠೇವಣಿದಾರರು ಸಿಐಡಿ ತನಿಖೆಯತ್ತ ನಿರೀಕ್ಷೆಯಿಂದ ಕಣ್ಣಿಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಗೃತಿ ವಿಷಯದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು
ಬಿಜೆಪಿ ಯುವ ಮೋರ್ಚಾದಿಂದ ಸ್ವಚ್ಛತಾ ಕಾರ್ಯ