ಕನ್ನಡಪ್ರಭ ವಾರ್ತೆ ಅಥಣಿ
ಅಡಿವೇಶಾಚಾರ್ಯ ಜೋಶಿಯವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅಥಣಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪಾಠ, ಪ್ರವಚನ, ನಿತ್ಯ ಪಾರಾಯಣ, ಅನ್ನದಾನದಂತಹ ವಿವಿಧ ಧಾರ್ಮಿಕ ಕಾರ್ಯಗಳ ಜೊತೆಗೆ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬೆಂಗಳೂರಿನ ವಿದ್ಯಾಧೀಶ ಸಂಸ್ಕೃತ ಶೋಧ ಕೇಂದ್ರದ ನಿರ್ದೇಶಕ ಡಾ.ಕೃಷ್ಣಾಚಾರ್ಯ ಉಪಾಧ್ಯಾಯ ಹೇಳಿದರು.ಇಲ್ಲಿನ ಅಡಿವೇಶಾಚಾರ್ಯ ಜೋಶಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ನರಸಿಂಹ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜ್ಞಾನ ಸತ್ರದ ಮಂಗಲೋತ್ಸವದಲ್ಲಿ ಅವರು ಮಾತನಾಡಿದರು. ಅಡಿವೇಶಾಚಾರ್ಯರು ನಿವೃತ್ತಿಯ ನಂತರ ತಮ್ಮ ಸಂಪೂರ್ಣ ಸಮಯವನ್ನು ದೇವಸ್ಥಾನಕ್ಕಾಗಿ ಮತ್ತು ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿದ್ದರು. ಅಷ್ಟೇ ಅಲ್ಲ ಬ್ರಾಹ್ಮಣ ಸಮಾಜದ ಜೊತೆಗೆ ಎಲ್ಲ ಸಮಾಜಗಳ ಜೊತೆಗೆ ಉತ್ತಮ ಸೌಹಾರ್ದ ಸಂಬಂಧ ಹೊಂದಿದ್ದರು ಎಂದರು.
ಪಂ.ಬಿಂದುಮಾಧವಾಚಾರ್ಯ ಜೋಶಿ ಮಾತನಾಡಿ, ವೈಶಾಖ ಮಾಸದಲ್ಲಿ ಏಳು ದಿನಗಳ ಕಾಲ ನಡೆಯುವ ಲಕ್ಷ್ಮೀ ನರಸಿಂಹ ಜಯಂತಿ ಉತ್ಸವ, ರಥೋತ್ಸವವನ್ನು ಅದ್ಧೂರಿಯಾಗಿ ನಡೆಸಿಕೊಂಡು ಬಂದ ಇವರು ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದ ಅನುದಾನದ ಹಿಂದೆ ಬೀಳದೆ ತಮ್ಮ ಸ್ವಂತ ಆದಾಯ ಮತ್ತು ಭಕ್ತರಿಂದ ಬಂದ ಆದಾಯದಲ್ಲಿಯೇ ಅಭಿವೃದ್ಧಿಪಡಿಸಿದರು. ಆಚಾರ್ಯರು ಮಾಡಿದ ಸತ್ಕಾರ್ಯಗಳಿಂದಲೇ ಅವರು ಇಂದಿಗೂ ನಮ್ಮ ಮಧ್ಯದಲ್ಲಿದ್ದಾರೆ ಎಂದು ಹೇಳಿದರು.ಈ ವೇಳೆ ಸಂಧ್ಯಾ ಟೊಣಪಿ ಮತ್ತು ತೇಜಸ್ವಿನಿ ಕದಡಿ ರಚಿಸಿದ ಆಧ್ಯಾತ್ಮಿಕ ಜ್ಞಾನದ ಖಣಿ ಉಗಾಭೋಗಗಳು ಎನ್ನುವ ಗ್ರಂಥವನ್ನು ಪಂಡಿತೊತ್ತಮರು ಬಿಡುಗಡೆಗೊಳಿಸಿದರು. ಜಮಖಂಡಿಯ ಶ್ರೀ ಲಕ್ಷ್ಮೀ ನರಸಿಂಹ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಪಂ.ರಮಾಕಾಂತಾಚಾರ್ಯ ಜೋಶಿ, ಅಥಣಿಯ ಪಂ.ಬಿಂದುಮಾಧಾಚಾರ್ಯ ಜೋಶಿ, ಪಂ.ಜಯರಾಮಾಚಾರ್ಯ ಮದನಪಲ್ಲಿ, ಹುಬ್ಬಳ್ಳಿಯ ಪಂ.ಜಯತೀರ್ಥಾಚಾರ್ಯ ಹುಂಡೇಕಾರ, ಬೆಂಗಳೂರಿನ ಪಂ.ವೇಣುಗೋಪಾಲಾಚಾರ್ಯ ಗುಡಿ, ಪಂ.ಸಂದೇಶಾಚಾರ್ಯ ಝಳಕೀಕರ, ಪಂ.ಪವನಾಚಾರ್ಯ ಜೋಶಿ, ಧಾರವಾಡದ ಪಂ.ಕೇಶ್ವಾಚಾರ್ಯ ಕೆರೂರ, ಐನಾಪೂರ ದ ತತ್ವಜ್ಞಾಚಾರ್ಯ ಉಮರ್ಜಿ ಪ್ರವಚನ ನೀಡಿದರು.
ಕಾರ್ಯಕ್ರಮದಲ್ಲಿ ಹಣಮಂತಾಚಾರ್ಯ ಕಟ್ಟಿ, ರೂಪಾ ಜೋಶಿ, ಗುರುರಾಜ ಬಾದರಾಯಣಿ, ಶ್ರೀರಾಮ ಕಟ್ಟಿ, ಗುರುರಾಜ ಮಣ್ಣೂರ, ವಾದಿರಾಜ ಜಂಬಗಿ ಸೇರಿದಂತೆ ಸಮಾಜ ಬಂಧುಗಳು ಪಾಲ್ಗೊಂಡಿದ್ದರು.