ನವಲಗುಂದ: ತಾಲೂಕಿನ ಗುಡಿಸಾಗರ ಕೆರೆಯ ಕಲುಷಿತ ನೀರನ್ನು ಕುಡಿದು ಗ್ರಾಮಸ್ಥರು ಅಸ್ವಸ್ಥರಾಗಲು ಜಿಲ್ಲಾ, ತಾಲೂಕು ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಗಂಗಪ್ಪ ಮನಮಿ ಆರೋಪಿಸಿದರು.
ತಾಲೂಕು ಬಿಜೆಪಿ ನಿಯೋಗದೊಂದಿಗೆ ಗುರುವಾರ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಗುಡಿಸಾಗರ ಗ್ರಾಮದ ರೋಗಿಗಳನ್ನು ಭೇಟಿ ಮಾಡಿ ಧೈರ್ಯ ಹೇಳಿದ ನಂತರ ಮಾತನಾಡಿದರು.ಕ್ಷೇತ್ರದಲ್ಲಿ ಅಧಿಕಾರ ನಡೆಸುವವರು ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನೂ ಕೊಡಲು ಆಗದೆ ಜನತೆಯನ್ನು ಅನಾರೋಗ್ಯದತ್ತ ತಳ್ಳುತ್ತಿದ್ದಾರೆ. ಕೂಡಲೇ ಗ್ರಾಮದ ಕೆರೆಯ ನೀರನ್ನು ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ದೇವರಾಜ ದಾಡಿಭಾವಿ, ತಾಲೂಕು ಆಡಳಿತ ಮುಂಜಾಗ್ರತಾ ಕ್ರಮ ವಹಿಸಿದ್ದರೆ ಗ್ರಾಮಸ್ಥರು ಅಸ್ವಸ್ಥರಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನಿಂದ ನಾಗರಿಕರ ಆರೋಗ್ಯದ ಮೇಲೆ ಏನಾದರೂ ದುಷ್ಪರಿಣಾಮ ಬೀರಿದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.ಹಿರಿಯರಾದ ಷಣ್ಮುಖ ಗುರಿಕಾರ, ನಗರ ಘಟಕ ಬಿಜೆಪಿ ಅಧ್ಯಕ್ಷ ಸಾಯಿಬಾಬಾ ಆನೇಗುಂದಿ, ಶ್ರೀಧರ ಪಟ್ಟಣಶೆಟ್ಟಿ, ರಾಮನಗೌಡ ಸಂಕನಗೌಡರ, ಮಂಜುನಾಥ ಹಡಪದ, ಮಲ್ಲಿಕಾರ್ಜುನ ದಿಂಡಿ, ಪವನ ಪಾಟೀಲ್, ಸಂತೋಷ ಹೊಸಮನಿ, ವೀರಣ್ಣ ಚುಳಕಿ, ಮಂಜುನಾಥ ಜಾಲಗಾರ, ಕೃಷ್ಣಾ ಭೋವಿ ಮತ್ತಿತರರಿದ್ದರು.
ಶಾಸಕರು ಅಧಿಕಾರಕ್ಕೆ ಬಂದ ಆರಂಭದಿಂದಲೂ ತಾಲೂಕಿನಲ್ಲಿ ಕಲುಷಿತ ನೀರು ಪೂರೈಕೆ ಆರೋಪ ಕೇಳಿ ಬರುತ್ತಿದೆ. ಕ್ಷೇತ್ರದಲ್ಲಿ ಸಾವಿರಾರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಅನುಮಾನ ಇದೆ. ಇದೀಗ ಗುಡಿಸಾಗರದಲ್ಲಿ ಆರಂಭವಾಗಿದೆ. ದೇವರ ಆಶೀರ್ವಾದದಿಂದ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಶಾಸಕರಿಗೆ ಕ್ಷೇತ್ರದ ಜನತೆ ಬಗ್ಗೆ ಕಾಳಜಿಯಿಲ್ಲ ಎಂದು ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ದೇವರಾಜ ದಾಡಿಭಾವಿ ಹೇಳಿದರು.