- ಡಿಸಿ ಗಂಗಾಧರ ಸ್ವಾಮಿ ಸೂಚನೆ । ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಮೇಲಿನ ನೀರಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಕಚೇರಿ ಹಾಗೂ ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಆಳವಡಿಸಿಕೊಳ್ಳೋದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ಜಿಲ್ಲಾಡಳಿತ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ, ನೆಲ-ಜಲ, ಪರಿಸರ ವೃದ್ಧಿಸಲು, ಮಳೆನೀರು ಕೊಯ್ಲಿ, ಸಸಿ ನೆಡುವುದು ಮತ್ತು ಜಿಲ್ಲಾ ಕೆರೆಗಳ ನಿರ್ವಹಣೆ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ಜೂ.6ರಂದು ಕುಂದುವಾಡ ಕೆರೆ ಆವರಣದಲ್ಲಿ ವಾಕರ್ಸ್ ಅಸೋಸಿಯೇಷನ್ ವತಿಯಿಂದ ಸುಮಾರು 250 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೆಟ್ಟ ಸಸಿಗಳ ರಕ್ಷಣೆ ಜವಾಬ್ದಾರಿ ಅವರೇ ವಹಿಸಿಕೊಂಡಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಟೆರೇಸ್ ಗಾರ್ಡನ್ ನಿರ್ಮಾಣಕ್ಕೆ ಸಾರ್ವಜನಿಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಸ್ವಂತ ಮನೆ ಹೊಂದಿರುವ ಅಧಿಕಾರಿಗಳು ಸಹ ಇದನ್ನು ತಮ್ಮ ಮನೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬಹುದು. ಅದೇ ರೀತಿ, ಜಿಲ್ಲೆಯ ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಪದ್ಧತಿ ಕಡ್ಡಾಯವಾಗಿ ಜಾರಿಗೊಳಿಸಬೇಕು. ಕಚೇರಿಗಳಿಗೆ ಬರುವ ಆಡಳಿತಾತ್ಮಕ ಅನುದಾನವನ್ನು ಬಳಸಿ ಈ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ನಗರಕ್ಕೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿ, ಪಾಲಿಕೆಯ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ ಎಂದರು.
ರೈತರು ಪ್ರತಿವರ್ಷ ಮೆಕ್ಕೆಜೋಳವನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರಿಂದ ಮತ್ತು ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಬಳಕೆ ಕಾರಣ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ರೈತರು ಪರ್ಯಾಯ ಬೆಳೆಗಳಾದ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು. ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯ ಎಲ್ಲ ಶಾಲಾ- ಕಾಲೇಜುಗಳು, ವಸತಿ ನಿಲಯಗಳು, ಸರ್ಕಾರಿ ಕಚೇರಿಗಳು, ಕಲ್ಯಾಣ ಮಂಟಪ ಮತ್ತು ಅತಿಥಿ ಗೃಹಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.
ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ:
ಮುದ್ದಪ್ಪನ ಕೆರೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಸದರಿ ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ಯಾವುದೇ ಕ್ರಮವಹಿಸಿಲ್ಲ ಎಂದು ಪರಿಸರವಾದಿ ಬಲ್ಲೂರು ರವಿಕುಮಾರ ಸಭೆಯ ಗಮನಕ್ಕೆ ತಂದರು. ಮುದ್ದಪ್ಪನ ಕೆರೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕೆರೆಯ ಅಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡಿದ್ದು, ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯಲಿದೆ. ಇದರಿಂದ ಸುಮಾರು ಪ್ರಾಣಿ- ಪಕ್ಷಿಗಳಿಗೆ ನೀರು ಆಹಾರ ಸಿಗಲಿದೆ ಎಂದು ತಿಳಿಸಿದರು.
ನೀರು ಪೋಲು ವಿರುದ್ಧ ಕಠಿಣ ಕ್ರಮ:ನಗರದಲ್ಲಿ ಬೆಳಗಿನ ಅವಧಿಯಲ್ಲಿ ವಾಹನಗಳನ್ನು ತೊಳೆಯಲು ಹಾಗೂ ಮನೆ ಮುಂದಿನ ರಸ್ತೆಗಳಿಗೆ ಪೈಪ್‌ಗಳ ಮೂಲಕ ನೂರಾರು ಲೀಟರ್ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವುದು ಕಂಡುಬಂದಿದೆ. ಇಂತಹ ಕೃತ್ಯಗಳಿಂದಾಗಿ ಡಾಂಬರು ರಸ್ತೆಗಳು ಹಾಳಾಗುತ್ತಿವೆ. ನೀರನ್ನು ಪೋಲು ಮಾಡುವ ಮನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಾಲಿಕೆಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಅಂತಹ ಮನೆಗಳಿಗೆ ಭಾರಿ ಮೊತ್ತದ ದಂಡ ವಿಧಿಸುವುದರ ಜೊತೆಗೆ ನೀರಿನ ಸಂಪರ್ಕವನ್ನೇ ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ಡಿಸಿ ಹೇಳಿದರು.
ಸಭೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್, ದುಡಾ ಆಯುಕ್ತೆ ರೇಣುಕ, ಮಹಾನಗರ ಪಾಲಿಕೆ ರೆವಿನ್ಯೂ ಆಯುಕ್ತ ಉದಯ್, ಡಿಡಿಪಿಯು ಪಳಿನಿವೇಲು, ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.- - -
(ಬಾಕ್ಸ್)* "ಮೆಮೊರಿ ಟ್ರೀ " ವಿನೂತನ ಪರಿಕಲ್ಪನೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಸಾರ್ವಜನಿಕರಲ್ಲಿ ಪರಿಸರ ಪ್ರೇಮ ಹೆಚ್ಚಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ''''ಮೆಮೊರಿ ಟ್ರೀ'''' (ಸ್ಮರಣಾರ್ಥ ಗಿಡ) ಎಂಬ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ. ತಮ್ಮ ಕುಟುಂಬದ ಹಿರಿಯರು ಅಥವಾ ಮರಣ ಹೊಂದಿದವರ ಸವಿನೆನಪಿನಲ್ಲಿ ಸಾರ್ವಜನಿಕರು ಗಿಡಗಳನ್ನು ನೆಡಬಹುದು. ಈ ಗಿಡಗಳಿಗೆ ಅವರ ಹೆಸರಿನ ಫಲಕವನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಗಿಡಗಳ ಮೇಲಿನ ಭಾವನಾತ್ಮಕ ಸಂಬಂಧ ಹೆಚ್ಚಲಿದ್ದು, ಗಿಡಗಳ ರಕ್ಷಣೆಯೂ ಸುಲಭವಾಗುತ್ತದೆ. ಹುಟ್ಟುಹಬ್ಬದ ನೆನಪಿಗಾಗಿಯೂ ಇಂತಹ ಗಿಡಗಳನ್ನು ನೆಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ನಗರದಲ್ಲಿ ತೆಂಗಿನ ಗರಿಗಳು, ಅಡಕೆ ಸಿಪ್ಪೆ ಹಾಗೂ ಒಣಗಿದ ರೆಂಬೆಗಳ ವಿಲೇವಾರಿ ದೊಡ್ಡ ಸಮಸ್ಯೆ ಆಗಿರುವುದನ್ನು ಪರಿಸರವಾದಿ ಈಶ್ವರಯ್ಯ ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಇಂತಹ ತ್ಯಾಜ್ಯಗಳನ್ನು ಸುಲಭವಾಗಿ ಪುಡಿ ಮಾಡುವ ಯಂತ್ರಗಳನ್ನು ಖರೀದಿಸಿ, ಅವುಗಳನ್ನು ಸ್ತ್ರೀಶಕ್ತಿ ಸಂಘಗಳಿಗೆ ಹಸ್ತಾಂತರಿಸುವುದಾಗಿ ತಿಳಿಸಿದರು. ಈ ಯಂತ್ರಗಳ ನಿರ್ವಹಣೆಯ ಜವಾಬ್ದಾರಿ ಸ್ತ್ರೀಶಕ್ತಿ ಸಂಘಗಳಿಗೆ ವಹಿಸುವುದರಿಂದ ಅವರಿಗೆ ಸ್ವಯಂ ಉದ್ಯೋಗ ಅವಕಾಶವೂ ದೊರೆಯುವುದಲ್ಲದೇ, ಯಂತ್ರದಿಂದ ಉತ್ಪಾದನೆ ಆಗುವ ಪುಡಿಯನ್ನು ಅತ್ಯುತ್ತಮ ಗೊಬ್ಬರವನ್ನಾಗಿ ಪರಿವರ್ತಿಸಿ ಮರುಬಳಕೆ ಮಾಡಲು ಸಾಧ್ಯ ಎಂದರು.- - -
-2ಕೆಡಿವಿಜಿ43: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ನೆಲ-ಜಲ, ಪರಿಸರ ವೃದ್ಧಿಸಲು, ಮಳೆ ನೀರು ಕೊಯ್ಲಿ, ಸಸಿ ನೆಡುವುದು ಮತ್ತು ಜಿಲ್ಲಾ ಕೆರೆಗಳ ನಿರ್ವಹಣೆ ಕುರಿತ ಸಭೆ ನಡೆಯಿತು.