ಮೌಲಾನಾ ಅಬುಲ್ ಕಲಾಂ ಅಜಾದ್‌ರ ತತ್ವಾದರ್ಶ ರೂಢಿಸಿಕೊಳ್ಳಿ-ಮೋಹನ ದಂಡಿನ

KannadaprabhaNewsNetwork |  
Published : Nov 12, 2025, 02:15 AM IST
11ಎಚ್‌ವಿಆರ್1- | Kannada Prabha

ಸಾರಾಂಶ

ಮೌಲಾನಾ ಅಬುಲ್ ಕಲಾಂ ಅಜಾದ್ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಅಬುಲ್ ಕಲಾಂ ಅಜಾದ್‌ರ ಒಳ್ಳೆಯ ಗುಣಗಳು ಮತ್ತು ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಚ್ಚಾರಿತ್ರ್ಯವ ಗುಣಗಳ ಜತೆಗೆ ವ್ಯಕ್ತಿತ್ವ ವಿಕಸನ ರೂಪಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಡಿಡಿಪಿಐ ಮೋಹನ್ ದಂಡಿನ ಹೇಳಿದರು.

ಹಾವೇರಿ: ಮೌಲಾನಾ ಅಬುಲ್ ಕಲಾಂ ಅಜಾದ್ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಅಬುಲ್ ಕಲಾಂ ಅಜಾದ್‌ರ ಒಳ್ಳೆಯ ಗುಣಗಳು ಮತ್ತು ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಚ್ಚಾರಿತ್ರ‍್ಯ ಗುಣಗಳ ಜತೆಗೆ ವ್ಯಕ್ತಿತ್ವ ವಿಕಸನ ರೂಪಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಡಿಡಿಪಿಐ ಮೋಹನ್ ದಂಡಿನ ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಮೌಲಾನಾ ಅಬುಲ್ ಕಲಾಂ ಅಜಾದ್ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಬುಲ್ ಕಲಾಂ ಅಜಾದ್‌ರು ಸ್ವಾತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದವರು. ಅಪಾರ ವಿದ್ವತ್ ಹೊಂದಿದ್ದು, ಗಾಂಧೀಜಿ ಅನುಯಾಯಿಯಾಗಿದ್ದರು. ಅಸಹಕಾರ ಚಳವಳಿವಲ್ಲಿ ಬ್ರಿಟಿಷರ ವಿರುದ್ಧ ಲೇಖನ ಬರೆದು ಗಮನ ಸೆಳೆಯುತ್ತಿದ್ದರು. ಮಹಿಳೆಯರ ಶಿಕ್ಷಣ, ಹಿಂದುಳಿದವರಿಗೆ ಕಡ್ಡಾಯ ಶಿಕ್ಷಣ ಹೀಗೆ ಅನೇಕ ಯೋಜನೆ ಜಾರಿಗೊಳಿಸಿದ್ದರು. ಮೌಲಾನಾ ಆಜಾದ್ ಶಾಲೆ ತೆರೆದು ಗುಣಮಟ್ಟದ ಶಿಕ್ಷಣ ಕೊಡಿಸಲಾಗುತ್ತಿದೆ. ಸರ್ಕಾರವೂ ಕೂಡ ಒಳ್ಳೆಯ ಶಿಕ್ಷಣಕ್ಕೆ ಉತ್ತಮ ಬೋಧಕ ಸೌಲಭ್ಯ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ, ಅಕ್ಷರ ದಾಸೋಹ ಸೇರಿದಂತೆ ಅನೇಕ ಸೌಲಭ್ಯ ಕೊಡುತ್ತಿದೆ. ಬರುವ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೌಲಾನಾ ಶಾಲೆ ವಿದ್ಯಾರ್ಥಿಗಳು ಶೇ.100ರಷ್ಟು ತೇರ್ಗಡೆ ಹೊಂದುವ ಮೂಲಕ ಕೀರ್ತಿ ತರಬೇಕು ಎಂದರು.ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳ ಜೈನ್ ಮಾತನಾಡಿ, ಅಲ್ಪಸಂಖ್ಯಾತರ ಶಾಲೆಗಳಲ್ಲಿ ಕಲಿಯುವ ಸಾವಿರಾರು ಮಕ್ಕಳು ಶಿಕ್ಷಣದ ಜತೆಗೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಮಾನವ ಹಕ್ಕುಗಳು ಮತ್ತು ಶಿಕ್ಷಣದ ಆವಿಷ್ಕಾರಕ್ಕೆ ಮುಂದಾಗುತ್ತಿದ್ದಾರೆ. ಅದಕ್ಕೆಲ್ಲಾ ಅವಕಾಶ ಕಲ್ಪಿಸಿದ್ದು ಮೌಲಾನಾ ಅಬುಲ್ ಕಲಾಂ ಅಜಾದ್‌ರು. ಪ್ರಜಾಪ್ರಭುತ್ವ ಎಂಬುದು ಕೇವಲ ಚುನಾವಣೆಯಲ್ಲ, ದೇಶದ ಕಟ್ಟ ಕಡೆಯ ವ್ಯಕ್ತಿಗೂ ಪ್ರಬಲ ಅಸ್ತ್ರವಾಗಿ ಸಿಗಬೇಕಿರುವುದು ಶಿಕ್ಷಣ. ಆದರೆ ಇಲ್ಲಸಲ್ಲದ ನೆಪವೊಡ್ಡಿ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ. ಇಲಾಖೆ ಬಡ ಮಕ್ಕಳಿಗೆ ಮಾತ್ರ ಮೀಸಲಾಗಿದ್ದು, ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕು. ಬೌದ್ಧಿಕ ಹಾಗೂ ಮಾನಸಿಕವಾಗಿ ವಿಕಾಸ ಆಗಬೇಕಾದರೆ ಶಿಕ್ಷಣ ಬೇಕೆಬೇಕು. ಎಲ್ಲ ಶೋಷಣೆಗೆ ಶಿಕ್ಷಣ ಮಾತ್ರ ಪ್ರಬಲ ಅಸ್ತ್ರವಾಗಿದೆ ಎಂದರು.ಸಾಹಿತಿ ಮಾರುತಿ ಶಿಡ್ಲಾಪುರ ವಿಶೇಷ ಉಪನ್ಯಾಸ ನೀಡಿ, ಜೀವನದಲ್ಲಿ ಗುರು ಎಂಬ ಶಕ್ತಿ ಇರದಿದ್ದರೆ ಮನುಷ್ಯನಿಗೆ ಶಕ್ತಿ ಬರುತ್ತಲೇ ಇರಲಿಲ್ಲ. ಮೌಲಾನಾ ಅವರಿಗೆ ಅವರ ತಾಯಿಯೇ ಗುರುವಾಗಿದ್ದರು. ದೇಶಕ್ಕೆ ನಿಜವಾದ ಪ್ರಾಮಾಣಿಕ ಸೇವೆ ಒದಗಿಸಿಕೊಟ್ಟ ಮೌಲಾನಾ ಅಬುಲ್ ಕಲಾಂ ಅವರನ್ನು ಪರಿಚಯಿಸುತ್ತಿರುವುದು ಶ್ಲಾಘನೀಯವಾಗಿದೆ. ಬಹಳ ದೂರದೃಷ್ಟಿ ನಾಯಕತ್ವವನ್ನು ಹೊಂದಿದ್ದರು. ಅಸಹಕಾರ, ಖಿಲಾಫತ್ ಚಳವಳಿಗೆ ಧುಮುಕಿದ ಇವರು ಸಾಕಷ್ಟು ಬಾರಿ ಬಂಧನಕ್ಕೆ ಒಳಗಾದರು. ಶಿಕ್ಷಣದಲ್ಲಿ ಪಾಸು, ನಪಾಸ್ ಆಗೋದು ನಿಮಗೆ ಬಿಟ್ಟಿದ್ದು, ಆದ್ರೆ ಜೀವನದಲ್ಲಿ ಒಳ್ಳೆಯದನ್ನು ಕಲಿತು ಬದುಕಿನಲ್ಲಿ ಪಾಸ್ ಆಗಬೇಕು ಎಂದರು.ಇದೇ ವೇಳೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸದಸ್ಯ ಅಬ್ದುಲ್‌ಕರೀಂ ಅಲ್ಲಭಕ್ಷ್ ಮೊಗಳಹಳ್ಳಿ ಮಾತನಾಡಿದರು. ಕರ್ಜಗಿಯ ಎಂ.ಎ.ಎಂ.ಎಸ್ ಶಾಲೆಯ ಪ್ರಾಚಾರ್ಯ ಸೋಮನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಮಕ್ಬುಲ್‌ಪಾಷಾ, ಹಿತೇಶ್ ಜೈನ್, ಅಹ್ಮದ್‌ಪಾಷಾ ಗುಲಾಬುದ್ದೀನ್ ಇದ್ದರು. ಸುಣಕಲ್ಲಬಿದರಿ ಶಾಲೆಯ ಪ್ರಾಚಾರ್ಯ ನಾಗಪ್ಪ ಅಕ್ಕಿವಳ್ಳಿ ಸ್ವಾಗತಿಸಿದರು. ಸಲ್ಮಾ ನದಾಫ್ ಸಂಗಡಿಗರು ನಿರೂಪಿಸಿದರು.ವಿದ್ಯಾರ್ಥಿಗಳು ಆಧುನಿಕತೆಗೆ ತಕ್ಕಂತೆ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಜಾತ್ಯತೀತ ಮನೋಭಾವನೆ ಬೆಳೆಸಿಕೊಳ್ಳಬೇಕು. ಮೌಲ್ಯಗಳ ಬಗ್ಗೆ ಅರಿವು ಇಟ್ಟುಕೊಳ್ಳಬೇಕು. ತಂದೆ ತಾಯಿಯರಿಗೆ, ಹಿರಿಯರಿಗೆ ಗೌರವ ಕೊಡಬೇಕು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಒಳ್ಳೆಯ ವಿಚಾರ ಮನದಲ್ಲಿ ಅಳವಡಿಕೊಂಡು ಯಶಸ್ಸು ಸಾಧಿಸಬೇಕು. ದಾರ್ಶನಿಕರ ಪುಸ್ತಕ ಓದುವ ಮೂಲಕ, ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾ ಇಲಾಖೆ ಜಿಲ್ಲಾ ಅಧಿಕಾರಿ ಅಬ್ದುಲ್‌ರಶೀದ್ ಮಿರ್ಜಣ್ಣನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ