ಕನ್ನಡಪ್ರಭ ವಾರ್ತೆ ಬೇಲೂರು
ಜೂನ್ ೨೧ ರಂದು ವಿಶ್ವ ಯೋಗ ದಿನ ಆಚರಿಸಿಲು ಘೋಷಣೆ ಮಾಡಿದ್ದಾರೆ. ವಿಶ್ವ ಯೋಗ ದಿನಾಚರಣೆ ಸದ್ಯ ೧೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಕದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಜೊತೆಗೆ ಇದೇ ೨೭ ರಂದು ನಡೆಯುವ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.ತಾಲೂಕು ಆಡಳಿತದಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿನ ಪ್ರಾಚೀನ ಯೋಗವನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿಸಿದರು. ಯೋಗ ಮಾನವ ಜೀವನಕ್ಕೆ ಸಿದ್ಧೌಷಧಿಯಾಗಿದ್ದು, ಪ್ರತಿಯೊಬ್ಬರೂ ಅಮೂಲ್ಯವಾದ ಆರೋಗ್ಯವನ್ನು ಪಡೆಯಲು ಯೋಗವನ್ನು ರೂಢಿಸಿಕೊಳ್ಳಬೇಕು, ಚನ್ನಕೇಶವ ದೇಗುಲದಲ್ಲಿ ನಡೆಯುವ ಯೋಗವನ್ನು ಬೆಳಗ್ಗೆ ೬.೫೦ ಕ್ಕೆ ಆರಂಭ ಮಾಡಲಾಗುತ್ತದೆ. ಇಲ್ಲಿನ ರಾಘವೇಂದ್ರ ಯೋಗ ಶಿಕ್ಷಣ ಮತ್ತು ಪತಂಜಲಿ ಯೋಗ ಶಿಕ್ಷಣದ ಶಿಬಿರಾರ್ಥಿಗಳು ಮತ್ತು ೨೦೦೦ ಸಾವಿರ ವಿದ್ಯಾರ್ಥಿಗಳು ಏಕಕಾಲಕ್ಕೆ ಯೋಗ ಪ್ರದರ್ಶನ ನೀಡಲಿದ್ದಾರೆ. ಯೋಗದಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಗೂ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ದೇಗುಲದ ವತಿಯಿಂದ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.
ಜೂನ್ ೨೭ ರಂದು ನಡೆಯುವ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಮುದಾಯದವರು ಒಟ್ಟಾಗಿ ಕೂಡಿ ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ನಾನು ಒಬ್ಬ ಸಮುದಾಯದ ಮತ್ತು ಕೆಂಪೇಗೌಡರ ಅಭಿಮಾನಿಯಾಗಿ ಸಂಪೂರ್ಣ ಸಹಕಾರ ನೀಡಲಾಗುವುದು. ಒಕ್ಕಲಿಗರ ಸಂಘದಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದ್ದು, ಕೆಂಪೇಗೌಡರ ಜಯಂತಿ ಮೂಲಕ ಒಟ್ಟಾಗಿರುವ ಬಗ್ಗೆ ನಾಡಿಗೆ ಸಂದೇಶ ನೀಡಬೇಕು ಎಂದು ಸಲಹೆ ನೀಡಿದರು.ನಂತರ ತಹಸೀಲ್ದಾರ್ ಎಂ.ಮಮತ ಮಾತನಾಡಿ, ಸರ್ಕಾರದಿಂದ ನಡೆಯುವ ಮಹಾನ್ ಪುರುಷರ ಜಯಂತಿಗೆ ಎಲ್ಲಾ ಇಲಾಖಾವಾರು ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲವಾದರೆ ಇಂತವರ ವಿರುದ್ದ ನೋಟೀಸ್ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ತಹಸೀಲ್ದಾರ್ ಮಮತಾ ಎಂ, ತಾಲೂಕು ಕಸಾಪ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕರವೇ ತಾಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ, ಯುವ ಘಟಕದ ಕಾರ್ಯದರ್ಶಿ ಬಿ.ಎನ್.ಗಣೇಶ್ ಇತರರು ಇದ್ದರು.