ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿರುವ ನಾಗಕುಂಡ ಮೆಟ್ಟಿಲು ಬಾವಿಯನ್ನು ದತ್ತು ಪಡೆದಿರುವ ರಾಜಶ್ರೀ ಪಿನ್ನಮನೇನಿ ಅವರಿಗೆ ಅಭಿನಂದನೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಗದಗ ಜಿಲ್ಲೆ ಸೂಡಿಯೂ ರೋಣ ಮತಕ್ಷೇತ್ರಕ್ಕೆ ಸೇರಿದ್ದು, ಭಾರತರತ್ನ ಭೀಮಸೇನ ಜೋಶಿ, ದುರ್ಗಸಿಂಹ ರಂತಹ ಮಹಾನ್ ವ್ಯಕ್ತಿಗಳು ಬೀಡಾಗಿದ್ದು, ಗದಗ ಜಿಲ್ಲೆ ಸಂಗೀತ ಸಾಂಸ್ಕೃತಿಕವಾಗಿ ಅಪರಿಮಿತ ಇತಿಹಾಸ ಹೊಂದಿದೆ ಎಂದು ಸ್ಮರಿಸಿದ ಅವರು, ರಾಜ್ಯದಲ್ಲಿ 25000 ಸ್ಮಾರಕಗಳಿದ್ದು ಅದರಲ್ಲಿ ಈ ವರ್ಷ ಕನಿಷ್ಠ 3 ಸಾವಿರ ಸ್ಮಾರಕಗಳನ್ನು ಸಂರಕ್ಷಿಸಿ ಅದರ ಇತಿಹಾಸ ಮುಂದಿನ ಪೀಳಿಗೆ ಅವರಿಗೆ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.
ಸ್ಮಾರಕಗಳ ನಿರ್ವಹಣೆಯಲ್ಲಿ ಈಗಾಗಲೇ ಸರ್ಕಾರ ಕಾರ್ಯ ನಿರ್ವಹಿಸುತಿದ್ದು, ಅದರ ಜತೆಗೆ ಡೆಕ್ಕನ್ ಹೆರಾಲ್ಡ್ ಫೌಂಡೇಶನ್ ಕೈಜೋಡಿಸಿ ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕರಿಸಿದಕ್ಕೆ ರಾಜಶ್ರೀ ಪಿನ್ನಮನೇನಿ ಅವರಿಗೆ ಅಭಿನಂದನೆ ಹಾಗು ಗದಗ ಜಿಲ್ಲೆಯು ಐತಿಹಾಸಿಕ ಇತಿಹಾಸ ಹೊಂದಿದ್ದು ಸಾಕಷ್ಟು ಮಾಹಿತಿ ಹೊಂದಿದ ಸ್ಮಾರಕ ಹೊಂದಿದೆ.ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಕೈಗೊಂಡು ಒಂದೇ ದಿನದಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಾಚ್ಯಾವಶೇಷ ಸಂಗ್ರಹಿಸಲಾಗಿದೆ. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕರ್ನಾಟಕದಿಂದ ಲಕ್ಕುಂಡಿ ಇತಿಹಾಸ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನೆಗೊಂಡಿದೆ, ಲಕ್ಕುಂಡಿಯ ಸಂಪೂರ್ಣ ಇತಿಹಾಸ ತಿಳಿಯಲು ಮತ್ತು ಅದರ ಅಭಿವೃದ್ಧಿಗೆ ಲಕ್ಕುಂಡಿ ಪಾರಂಪರಿಕ ಪ್ರಾಧಿಕಾರ ಸ್ಥಾಪಿಸಲಾಗಿದೆ ಎಂದರು.
ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸ್ಥಾಪಕರು ಮತ್ತು ಸಹ ಸ್ಥಾಪಕ ಡಾ. ಹೆಲೆನ್ ಫಿಲಾನ್ ಮತ್ತು ಸ್ಟೀಫನ್ ಬ್ಲೋಚ್ ಸಲೋಜ್ ಮಾತನಾಡಿ, ಭಾರತವು ತನ್ನದೇ ಆದ ಶ್ರೀಮಂತ ಇತಿಹಾಸ ಹೊಂದಿದೆ ಅದರಲ್ಲಿ ಗದಗಿನ ವಾಸ್ತುಶಿಲ್ಪ ಸಂಸ್ಕೃತಿ ವಿಶೇಷದಿಂದ ಕೂಡಿದೆ, ಸ್ಮಾರಕ ಹತ್ತಿರ ಹೋಗುತ್ತಿದ್ದಂತೆ ಇಲ್ಲಿ ಜನರು ಅತ್ಯಂತ ಪ್ರೀತಿ ವಿಶ್ವಾಸ ದಿಂದ ಕಾಣುತ್ತಾರೆ ಹಾಗು ಇಂತಹ ಕಾರ್ಯಗಳನ್ನು ಕೈಗೆತ್ತಿ ಕೊಂಡಿದ್ದರಿಂದ ನಮಗೆ ಖುಷಿ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಶ್ರೀ ಪಿನ್ನಮನೇನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಅಶೋಕ ಮಂದಾಲಿ, ವಿ.ಬಿ. ಸೋಮನಕಟ್ಟಿಮಠ, ಪುರಾತತ್ತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ ಎ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಸಿಇಒ ಭರತ್ ಎಸ್, ಡಿಸಿಎಫ್ ಸಂತೋಷಕುಮಾರ, ಡೆಕ್ಕನ್ ಹೆರಿಟೆಜ್ ಪೌಂಡೇಶನ್ ಆಫ್ ಇಂಡಿಯಾದ ಪ್ರತಿಮಾ ರಾವ್, ರಂಗ, ಸುಜಾತ, ಶೀತಲ್, ಜಿಲ್ಲಾಮಟ್ಟದ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.