ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತಂತೆ ಅತ್ಯಂತ ಕ್ರಿಯಾಶೀಲವಾಗಿ ಹಾಗೂ ಪರಿಣಾಮಕಾರಿಯಾಗಿ ಅರಿವು ಮತ್ತು ಜಾಗೃತಿ ಮೂಡಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ದೊರೆತಿದೆ
ಹಾವೇರಿ:
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಪ್ರಗತಿ ಪರಿಶೀಲನೆ ನಡೆಸಿ ಕಾನೂನುಬದ್ಧವಾಗಿ ಮಕ್ಕಳನ್ನು ದತ್ತು ಪಡೆಯುವ ಕುರಿತಂತೆ ವಿನೂತನ ಹಾಗೂ ಪರಿಣಾಮಕಾರಿಯಾಗಿ ಕಾರ್ಯಕ್ರಮ ಆಯೋಜಿಸಿದ ಜಿಲ್ಲೆಗಳ ಪೈಕಿ ಶಿವಮೊಗ್ಗ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಹಾವೇರಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ನೀಡಿದ ಅಭಿನಂದನಾ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹಸ್ತಾಂತರಿಸಿ ಅಭಿನಂದಿಸಿದರು.
ನವದೆಹಲಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದಿಂದ ಪ್ರತಿ ವರ್ಷ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸ ಕಾರ್ಯಕ್ರಮ ಘೋಷಿಸುತ್ತದೆ. ಈ ಕಾರ್ಯಕ್ರಮದ ಮಾರ್ಗಸೂಚಿ ಅನುಸಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನವೆಂಬರ್ ತಿಂಗಳು ಪೂರ್ಣ ಅಂಗವಾಡಿ, ಆಶಾ ಕಾರ್ಯಕರ್ತರಿಗೆ, ಆರೋಗ್ಯ ಕೇಂದ್ರ, ತಾಲೂಕಾಸ್ಪತ್ರೆ, ಶಾಲಾ-ಕಾಲೇಜು ಹಾಗೂ ಮಕ್ಕಳ ಗ್ರಾಮ ಸಭೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ದತ್ತು ಸಂಕಲ್ಪ ಸಂದೇಶ ಬೋಧಿಸಿ ದತ್ತು ಪ್ರಕ್ರಿಯೆ ಕುರಿತಂತೆ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ.
ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಾðರಿ ಕಚೇರಿಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಪೋಸ್ಟರ್, ಧ್ವನಿ ಮುದ್ರಣ ಪ್ರಸಾರದ ಮೂಲಕ ಮಕ್ಕಳ ಮಾರಾಟದ ಅಪರಾಧದ ಗಂಭೀರತೆ ಕುರಿತಂತೆ ಜಾಗೃತಿ ಮೂಡಿಸಿ, ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಪಾಲಕರು ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಕುರಿತಂತೆ ಅರಿವು ಮೂಡಿಸುವ ಮೂಲಕ ಮಕ್ಕಳ ರಕ್ಷಣೆ, ಪಾಲನೆ, ಸುರಕ್ಷಿತ ಪೋಷಣೆಗೆ ಉತ್ತೇಜನ ನೀಡುವ ಮೂಲಕ ರಾಜ್ಯದಲ್ಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಕಾರ್ಯಕರ್ತರು ಗಮನ ಸೆಳೆದಿದ್ದಾರೆ.
೬೨ ಮಕ್ಕಳ ದತ್ತು: ಜಿಲ್ಲಾ ಮಕ್ಕಳ ದತ್ತು ಕೇಂದ್ರದಿಂದ ೨೦೦೯-೧೦ನೇ ಸಾಲಿನಿಂದ ೨೦೨೩-೨೪ನೇ ಸಾಲಿನ ಈವರೆಗೆ ೩೬ ಹೆಣ್ಣು ಹಾಗೂ ೨೬ ಗಂಡು ಮಕ್ಕಳು ಸೇರಿದಂತೆ ೬೨ ಮಕ್ಕಳನ್ನು ಕಾನೂನುಬದ್ಧ ಪ್ರಕ್ರಿಯೆ ಮೂಲಕ ದತ್ತು ನೀಡಲಾಗಿದೆ. ಈ ಪೈಕಿ ಎರಡು ಅನಾಥ ಮಕ್ಕಳು, ೨೪ ಪರಿತ್ಯಕ್ತ ಮಕ್ಕಳು ಹಾಗೂ ೩೬ ಒಪ್ಪಿಸಲ್ಪಟ್ಟ ಮಕ್ಕಳು ಒಳಗೊಂಡಿದ್ದಾರೆ.
ವಿದೇಶಕ್ಕೂ ಜಿಲ್ಲೆಯಿಂದ ದತ್ತು: ಕೇವಲ ರಾಜ್ಯದ ಪಾಲಕರು ಮಾತ್ರವಲ್ಲದೇ ದೇಶದ ವಿವಿಧ ರಾಜ್ಯ ಹಾಗೂ ವಿದೇಶಗಳಿಗೂ ಕಾನೂನು ಬದ್ಧವಾಗಿ ಜಿಲ್ಲೆಯಿಂದ ಮಕ್ಕಳನ್ನು ಆಸಕ್ತ ಪಾಲಕರು ಪ್ರೀತಿಯಿಂದ ದತ್ತು ಸ್ವೀಕರಿಸಿದ್ದಾರೆ. ಸ್ಪೇನ್ ದೇಶದ ಪಾಲಕರು ಒಂದು, ದುಬೈ ದೇಶದ ಪಾಲಕರು ಒಂದು ಮಗು ಹಾಗೂ ಇಟಲಿ ದೇಶದವರು ಎರಡು ಮಕ್ಕಳನ್ನು ದತ್ತು ಪಡೆದಿದ್ದಾರೆ.
ಕೇರಳ ರಾಜ್ಯದವರು ಐದು ಮಕ್ಕಳು, ತೆಲಂಗಾಣಾ ರಾಜ್ಯದವರು ಏಳು, ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯದವರು ತಲಾ ಒಂದು, ತಮಿಳನಾಡು ಹಾಗೂ ಆಂಧ್ರಪ್ರದೇಶ ರಾಜ್ಯದವರು ತಲಾ ಮೂರು ಮಕ್ಕಳನ್ನು ದತ್ತು ಪಡೆದಿದ್ದಾರೆ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಪಾಲಕರು ೩೭ ಮಕ್ಕಳನ್ನು ದತ್ತು ಪಡೆದಿದ್ದಾರೆ. ಎಲ್ಲ ಮಕ್ಕಳನ್ನು ದತ್ತು ಪ್ರಕ್ರಿಯೆ ನಿಯಮಾವಳಿ, ಪಾಲಕರ ಹಿನ್ನೆಲೆ, ಪಾಲನೆಯ ಸುರಕ್ಷತೆಗೆ ಅನುಗುಣವಾಗಿ ದತ್ತು ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಮಕ್ಕಳ ರಕ್ಷಣಾ ಘಟಕದ ಅನ್ನಪೂರ್ಣ ಸಂಗಳದ ಹಾಗೂ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿ ಸಿಬ್ಬಂದಿ, ಶಿಶು ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.