ಶರನ್ನವರಾತ್ರಿ ಉತ್ಸವ ದೇವಿಗೆ ವಿಶೇಷ ಪೂಜೆ । ತುಂಗಾನದಿಯಲ್ಲಿ ಜಗದ್ಗುರುಗಳಿಂದ ಗಂಗಾಪೂಜೆ.
ಕನ್ನಡಪ್ರಭ ವಾರ್ತೆ, ಶೃಂಗೇರಿಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪೀಠದ ಅಧಿದೇವತೆ ಶೃಂಗೇರಿ ಶಾರದೆಗೆ ಬ್ರಾಹ್ಮಿ ಕೌಮಾರಿ, ವೈಷ್ಣವಿಯಲಂಕಾರದ ನಂತರ ಮಂಗಳವಾರ ಮೋಹಿನಿ ಅಲಂಕಾರ ಮಾಡಲಾಗಿತ್ತು. ಕೈಯಲ್ಲಿ ಅಮೃತ ಕಲಶ ಹಿಡಿದು ತನ್ನ ರೂಪ ಲಾವಣ್ಯಗಳಿಂದ ದುಷ್ಟರು, ಕ್ರೂರರು , ರಾಕ್ಷಸರನ್ನು ಮೋಹಗೊಳಿಸಿ ದೇವತೆಗಳಿಗೆ ಅಮೃತ ಲಭಿಸುವಂತೆ ಮಾಡಿದ ಜಗನ್ಮಾತೆ ರೂಪದಲ್ಲಿ ಶಾರದೆ ಕಂಗೊಳಿಸಿದಳು.
ವಿವಿಧ ಚಿನ್ನಾಭರಣ, ಬೆಳ್ಳಿ, ಆಭರಣಗಳಿಂದ ಶಾರದೆಯನ್ನು ಅಲಂಕರಿಸಲಾಗಿತ್ತು. ಇಷ್ಠು ದಿನಗಳ ಅಲಂಕಾರಗಳಿಗಿಂತ ಶಾರದೆಯ ಇಂದಿನ ಅಲಂಕಾರ ವಿಭಿನ್ನವಾದ ಅಲಂಕಾರವಾಗಿತ್ತು. ದೇಶವಿದೇಶಗಳ ರಾಜಮಹಾರಾಜರು ಶಾರದೆಗೆ ಸಮರ್ಪಿಸಿದ್ದ ಸಕಲಾಭರಣವನ್ನು ಶಾರದೆಗೆ ತೊಡಿಸಿ ಅಲಂಕರಿಸಲಾಗಿತ್ತು. ಲಲಿತ ಸಹಸ್ರನಾಮವಿರುವ ಸ್ವರ್ಣ ಸಹಸ್ರನಾಮ ಮಾಲೆ, ಲಲಿತಾ ತ್ರಿಶಮತಿ ಸ್ವರ್ಣ ಮಾಲೆ, ಕಿವಿಗೆ ವಜ್ರದ ತಾಟಂತಿ, ವಜ್ರದ ಭುಜಕೀರ್ತಿ, ಚತುರ್ಭುಜಗಳಿಗೆ ವಜ್ರ ಕವಚ, ಮುಂಗೈಯಲ್ಲಿ ಬಂಗಾರದರಗಿಣಿ, ಪಚ್ಚೆ ಪಂಚಪಾತ್ರೆ, ವಿವಿಧ ಎಳೆಯ ಮುತ್ತಿನ ಮಾಲೆಗಳು, ವಜ್ರ ಕಂಠಿ ಹಾರ, ಅಡ್ಡಿಕೆ, ಜಡೆ ಬಂಗಾರ, ಉದ್ದರಣೆ, ಪಂಡನ್ ಖಡ್ಗ, ಕೊರಂಬ, ಚಂದ್ರ ಮಖರ, ಪುಸ್ತಕ ಹಸ್ತ ,ಚಿನ್ಮುದ್ರೆ ಹಸ್ತ,ಅಕ್ಷಯ ಹಸ್ತ, ಕಲಶ ಹಸ್ತ ಹೀಗೆ ಸರ್ವಾಭರಣಗಳಿಂದ ಶಾರದೆಯನ್ನು ಸಿಗರಿಸಲಾಗಿತ್ತು.ಬೆಳಿಗ್ಗೆ ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಶ್ರೀ ಶಾರದಾಂಬೆ ಮೂರ್ತಿಯನ್ನು ಸ್ವರ್ಣ ರಥದಲ್ಲಿ ಪ್ರತಿಷ್ಠಾಪಿಸಿ ದೇಗುಲದ ಪ್ರಾಂಗಣಗದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ದಿಂಡೀ ದೀಪಾರಾಧನೆ ನೆರವೇರಿತು. ತುಂಗಾ ನದಿಯಲ್ಲಿ ಜಗದ್ಗುರು ಗಂಗಾ ಪೂಜೆ ನೆರವೇರಿಸಿದರು. ನವರಾತ್ರಿ ಅಂಗವಾಗಿ ಶ್ರೀಮಠದ ಆವರಣದ ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ,ಶ್ರೀ ವಿದ್ಯಾಶಂಕರ,ಸುಬ್ರಮಣ್ಯ ಸ್ವಾಮಿ ಸಹಿತ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.
ಶ್ರೀಮಠದಲ್ಲಿ 4 ವೇದಗಳ ಪಠಣ, ಸ್ವರ್ಣ ಸಿಂಹಾಸನ ಪೂಜೆ, ಅಷ್ಟಾವಧಾನ ಸೇವೆ ನಡೆಯಿತು. ಜಗದ್ಗುರುಗಳ ನವರಾತ್ರಿ ದರ್ಬಾರ ನಡೆಯಿತು. ಮಂಗಳವಾರವೂ ಶ್ರೀಮಠದ ಆವರಣ, ನರಸಿಂಹ ವನ, ಶ್ರೀ ಶಾರದಾಂಬಾ ದೇವಾಲಯ, ಬೋಜನಾ ಶಾಲೆ, ಶೃಂಗೇರಿ ಪಟ್ಟಣ,ಗಾಂದಿ ಮೈದಾನ ಎಲ್ಲೆಲ್ಲೂ ಜನಜಂಗುಳಿಯೇ ನೆರದಿತ್ತು. ಪ್ರತೀ ವರ್ಷದಂತೆ ಸಂಪ್ರದಾಯಬದ್ಧವಾಗಿ ಈ ವರ್ಷವೂ ಮಳೆಯ ಅಡ್ಡಿ ಹೊರತಾಗಿಲ್ಲ. ನವರಾತ್ರಿ ಆರಂಭವಾಗಿನಿಂದಲೂ ಪ್ರತೀ ದಿನ ಮಳೆ ಸುರಿಯುತ್ತಿದ್ದು ಸೋಮವಾರ ಮದ್ಯಾಹ್ನದಿಂದ ರಾತ್ರಿಯಿಡೀ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಮಳೆಯಿಂದ ಪ್ರವಾಸಿಗರು,ಅಂಗಡಿ ಮುಂಗಟ್ಟುಗಳ ವರ್ತಕರು ತತ್ತರಿಸಬೇಕಾಯಿತು.ಮಳೆಯ ನಡುವೆಯೂ ಭಕ್ತರ ಸಂಖ್ಯೆ ತುಂಬಿದೆ.ಸಾಂಸ್ಕೃತಿಕ ಮಹೋತ್ಸವದಲ್ಲಿ ವಿದ್ವಾನ್ ಶಂಕರನ್ ನಂಬೂದರಿ ತಂಡದವರಿಂದ ಹಾಡುಗಾರಿಕೆ ನಡೆಯಿತು. ಬೀದಿ ಉತ್ಸವದಲ್ಲಿ ಧರೆಕೊಪ್ಪ ಗ್ರಾಮಸ್ಥರೊಂದಿಗೆ ವಿವಿಧ ಸಂಘಸಂಸ್ಥೆಗಳು, ಭಜನಾ ತಂಡಗಳು, ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಬುಧವಾರ ಶಾರದೆಗೆ ವೀಣಾ ಶಾರದಾಲಂಕಾರ ನಡೆಯಲಿದ್ದು, ಸಾಂಸ್ಖೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಆರ್.ಕೆ.ಶಂಕರ್ ತಂಡದವರಿಂದ ವೀಣಾವಾದನ ನಡೆಯಲಿದೆ. ರಾಜಬೀದಿ ಉತ್ಸವದಲ್ಲಿ ನೆಮ್ಮಾರು ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು,ಭಜನಾ ತಂಡಗಳು, ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ.
8 ಶ್ರೀ ಚಿತ್ರ 1-ಶೃಂಗೇರಿ ಶಾರದೆಗೆ ಬುಧವಾರ ಮೋಹಿನಿ ಅಲಂಕಾರ ಮಾಡಲಾಗಿತ್ತು.8 ಶ್ರೀ ಚಿತ್ರ 2-ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಗಂಗಾಪೂಜೆ ನೆರವೇರಿಸುತ್ತಿರುವುದು.