ಕಲಬೆರಕೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಮನ್ಮುಲ್ ಒಕ್ಕೂಟಕ್ಕೆ ಮುತ್ತಿಗೆ

KannadaprabhaNewsNetwork |  
Published : Oct 14, 2026, 01:30 AM IST
13ಕೆಎಂಎನ್ ಡಿ15 | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ 2021 ರಲ್ಲಿ ನಡೆದ ಹಾಲಿಗೆ ನೀರು ಬೆರೆಸಿದ ಪ್ರಕರಣ ತನಿಖೆಯ ಅಂತಿಮ ವರದಿ ಪ್ರಕಟಿಸಬೇಕು ಹಾಗೂ ಹಾಲಿನಪುಡಿ ಕಲಬೆರಕೆ ಪ್ರಕರಣದ ಆರೋಪಿಗಳ ಹೆಸರನ್ನು ಮತ್ತು ಪ್ರಕರಣದ ತನಿಖೆ ಪ್ರಸ್ತುತ ಸ್ಥಿತಿ ಬಹಿರಂಗಪಡಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಮನ್ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಮಂಗಳವಾರ ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಬಳಿಯಿಂದ ಬೈಕ್ ರ್‍ಯಾಲಿ ಸೇರಿದಂತೆ ವಿವಿಧ ವಾಹನಗಳಲ್ಲಿ ಮನ್ಮುಲ್ ವರೆಗೆ ಮೆರವಣಿಗೆ ನಡೆಸಿದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪ್ರವೇಶ ದ್ವಾರದಲ್ಲಿ ಧರಣಿ ನಡೆಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ 2021 ರಲ್ಲಿ ನಡೆದ ಹಾಲಿಗೆ ನೀರು ಬೆರೆಸಿದ ಪ್ರಕರಣ ತನಿಖೆಯ ಅಂತಿಮ ವರದಿ ಪ್ರಕಟಿಸಬೇಕು ಹಾಗೂ ಹಾಲಿನಪುಡಿ ಕಲಬೆರಕೆ ಪ್ರಕರಣದ ಆರೋಪಿಗಳ ಹೆಸರನ್ನು ಮತ್ತು ಪ್ರಕರಣದ ತನಿಖೆ ಪ್ರಸ್ತುತ ಸ್ಥಿತಿ ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಹಾಲಿನ ಪುಡಿ ಹಗರಣದ ಬಗ್ಗೆ ನಡೆಯುತ್ತಿರುವ ತನಿಖೆ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರ ಈ ಕೂಡಲೇ ಆಡಳಿತ ಮಂಡಳಿ ವಜಾ ಮಾಡಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಹೈನುಗಾರರ ಮತ್ತು ಹಾಲಿನ ಗ್ರಾಹಕರ ಬದುಕನ್ನು ನಾಶ ಮಾಡಲು ಹೊರಟಿರುವ ಒಕ್ಕೂಟದ ಜನಪ್ರತಿನಿಧಿಗಳು ಬೇಲಿಯೇ ಎದ್ದು ಹೊಲ ಮೇಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಿರುವ ಇಂತಹ ವ್ಯಕ್ತಿಗಳನ್ನು ರೈತರು ಬೀದಿಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಕೆಆರ್ ಎಸ್ ಪಕ್ಷದ ಅಧ್ಯಕ್ಷ ಮಹದೇವ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಹಾಲಿನ ಪುಡಿ ಹಗರಣ ಮತ್ತು ಹಾಲಿಗೆ ನೀರು ಬೆರಸಿದ್ದ ಪ್ರಕರಣ ಸೇರಿದಂತೆ ಹಾಲು ಒಕ್ಕೂಟದಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳನ್ನು ಸಾರ್ವಜನಿಕರಿಗೆ ತಿಳಿಸುವ ಜೊತೆಗೆ ತನಿಖೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕೆಆರ್ ಎಸ್ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ರಾಜ್ಯ ಉಪಾಧ್ಯಕ್ಷ ಸೋಮುಸುಂದರ್ ಕೆ.ಎಸ್., ರಾಜ್ಯ ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಗೌಡ, ಅರುಣ್ ಕುಮಾರ್ ಎಚ್.ಎಂ., ರಾಜ್ಯ ಯುವ ಘಟಕದ ಕಾರ್ಯದರ್ಶಿ ಪ್ರಮೋದ್ ಎಸ್., ಜಿಲ್ಲಾಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಮದ್ದೂರು ಉಪಾಧ್ಯಕ್ಷ ಮಹೇಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷೆ ದೀಪಿಕಾ, ಅನಿತಾ, ಮದ್ದೂರು ತಾಲೂಕು ಅಧ್ಯಕ್ಷ ಮಹದೇವ್, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕುಮಾರ್ ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಜೀವನದಲ್ಲಿ ಮಹತ್ತರ ಪಾತ್ರ ವಹಿಸುವವರ ದಿನವೇ ಪೋಷಕರ ದಿನಾಚರಣೆ: ಶೃತಿ ಶಿವಣ್ಣ