ಶಿರಸಿ: ಪ್ರತಿಯೊಬ್ಬರಿಗೂ ಪ್ರಾತಃಸ್ಮರಣೀಯರಾದ ಶಂಕರಾಚಾರ್ಯರು ರಚಿಸಿದ ಅದ್ವೈತ ಸಿದ್ಧಾಂತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಅವರು ನಗರದ ಯೋಗ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶಂಕರ ಜಯಂತಿ ದಾರ್ಶನಿಕ ದಿನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಂಕರರು ಸಾವಿರಾರು ಸ್ತೋತ್ರಗಳನ್ನು ರಚಿಸಿದ್ದಾರೆ. ವಿಸ್ತಾರವಾದ ಸ್ತೋತ್ರ ಸಾಹಿತ್ಯ ಕೊಟ್ಟಿರುವುದು ಸಾಮಾನ್ಯ ಜನರಿಗೆ ಬಹಳ ಅನುಕೂಲವಾಗಿದೆ. ರಾಮಕೃಷ್ಣ ಪರಮಹಂಸರ ಚಿಂತನೆ, ಶಂಕರಾಚಾರ್ಯರ ಚಿಂತನೆಗೆ ಬಹಳ ಹತ್ತಿರವಾಗಿದೆ. ಹಾಗಾಗಿ ಪ್ರತಿವರ್ಷ ಶಂಕರ ಜಯಂತಿಗೆ ರಾಮಕೃಷ್ಣ ಮಠದ ಯತಿಗಳನ್ನು ನಾವು ಆಹ್ವಾನಿಸುತ್ತೇವೆ ಎಂದ ಶ್ರೀಗಳು, ಎರಡು ದಿನಗಳ ಕಾಲ ಶಂಕರರ ಸ್ತೋತ್ರ ಪಾರಾಯಣಗಳು ನಡೆಯುತ್ತಿದೆ. ಶಂಕರರ ಚಿಂತನಾ ಶೈಲಿ, ಧಾರ್ಮಿಕ ಜೀವನ ನಮಗೆ ಹತ್ತಿರವಾಗಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ತುಮಕೂರು ಮಾದಿಹಳ್ಳಿ ರಾಮಕೃಷ್ಣಮಠದ ಮಂಗಲಾನಾಥಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಶಂಕರಾಚಾರ್ಯರ ಜ್ಞಾನದ ಆಳವನ್ನು ಸಾಮಾನ್ಯ ಜೀವಿ ಅಳೆಯಲು ಸಾಧ್ಯವಿಲ್ಲ. ಆತ್ಮಜ್ಞಾನದ ವಿಚಾರವನ್ನು ನಮ್ಮಲ್ಲಿ ಪ್ರತಿ ದಿನ ಪ್ರತಿಕ್ಷಣ ಜಾಗೃತಿಗೊಳಿಸಿಕೊಳ್ಳಬೇಕು. ನಮ್ಮ ದೇಶವನ್ನು ಉಳಿಸಿರುವುದು ವೇದಾಂತವಾಗಿದ್ದು, ಬಂಧನಕ್ಕೆ ಮೂಲ ಕಾರಣ ತಿಳಿಯದಿದ್ದರೆ ಮೋಕ್ಷ ಸಿಗಲು ಸಾಧ್ಯವಿಲ್ಲ. ವೇದಾಂತವನ್ನು ಆಳವಾಗಿ ಅಧ್ಯಯನ ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರಿಗೆ ಸಾಧನಾ ಶಂಕರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸೋಂದಾ ಸ್ವರ್ಣವಲ್ಲೀಯ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವೇದಾಂತ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಗಣಪತಿ ಭಟ್ಟ ಇದ್ದರು. ವಿದ್ವಾನ್ ಶಂಕರ ಭಟ್ ಉಂಚಳ್ಳಿ ಸ್ವಾಗತಿಸಿ, ನಿರೂಪಿಸಿದರು. ಗುರುವಾರ ಮುಂಜಾನೆಯಿಂದ ಯೋಗ ಮಂದಿರದಲ್ಲಿ ಮಾತೆಯರಿಂದ ಶಂಕರ ಸ್ತೋತ್ರ ಪಾರಾಯಣ ನಡೆಯಿತು.