ಹರಿಕಥಾ ವಿದ್ವಾನ್ ಕಲಾಶ್ರೀ ಡಾ.ಲಕ್ಷ್ಮಣದಾಸ್ ಸಲಹೆಕನ್ನಡಪ್ರಭ ವಾರ್ತೆ ತುಮಕೂರುಯುವ ಕಲಾವಿದರು ರಂಗಭೂಮಿಯನ್ನು ಪ್ರಯೋಗಾತ್ಮಕವಾಗಿ ಮುನ್ನಡೆಸುವ ಅಗತ್ಯವಿದೆ ಎಂದು ಹಿರಿಯ ಹರಿಕಥಾ ವಿದ್ವಾನ್ ಕಲಾಶ್ರೀ ಡಾ.ಲಕ್ಷ್ಮಣದಾಸ್ ತಿಳಿಸಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ರಂಗಭೂಮಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೋಯುವ ಗುರುತರ ಜವಾಬ್ದಾರಿ ಇಂದಿನ ಯುವ ಕಲಾವಿದರ ಮೇಲಿದೆ. ಇವರು ಮತ್ತಷ್ಟು ಪ್ರಾಯೋಗಿಕವಾಗಿ ತೊಡಗಿಕೊಂಡರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.ರಂಗಶ್ರೀ ಸಂಸ್ಥೆಯ ರಂಗಸ್ವಾಮಿ ಮಾತನಾಡಿ, ರಂಗಭೂಮಿಯಲ್ಲಿ ಹಿರಿಯ ಕಲಾವಿದರು ನೈಪಥ್ಯಕ್ಕೆ ಸರಿಯುತ್ತಿರುವ ಈ ಕಾಲದಲ್ಲಿ ಯುವಕಲಾವಿದರ ಇದನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಅಂತಹ ಒಂದು ಪ್ರಯತ್ನವೇ ರಂಗಾರಂಭ. ನಾಟಕ ಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ, ಅದರ ಎಲ್ಲ ಮಜಲುಗಳನ್ನು ಅರ್ಥ ಮಾಡಿಕೊಂಡು ಹೊಸ ರೀತಿಯ ನಾಟಕಗಳನ್ನು ಕಟ್ಟುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿರುವುದು ಒಳ್ಳೆಯ ಬೆಳೆವಣಿಗೆ ಎಂದರು.
ಹಿರಿಯ ರಂಗಕರ್ಮಿ ಎಸ್.ಎಲ್.ಎನ್. ಸ್ವಾಮಿ ಮಾತನಾಡಿ, ನಾಟಕ ಎಂದರೆ ಸುಳ್ಳು ಹೇಳುವುದು ಎಂದರ್ಥ. ಇಲ್ಲಿ ವ್ಯಕ್ತಿಗಳು ಪಾತ್ರಧಾರಿಗಳಾಗಿ ಅಭಿನಯಿಸುವ ಮೂಲಕ ಈಗ ನಮ್ಮ ಮುಂದಿಲ್ಲದ ರಾಮ,ರಾವಣ, ಶ್ರೀಕೃಷ್ಣ, ಅರ್ಜುನ, ದುರ್ಯೋದನ, ಸೀತೆ, ಕೈಕೆ, ಮಂಡೋದರಿಯನ್ನು ಪ್ರೇಕ್ಷಕರ ಮುಂದಿಡುತ್ತಾರೆ ಎಂದರು.ವಿನೂತನವಾಗಿ ರಂಗಾರಂಭ ಕಲಾ ತಂಡದಿಂದ ಕುರುಕ್ಷೇತ್ರ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿನೂತನ ರಂಗಸಜ್ಜಿಕೆ, ಧ್ವನಿ ಗ್ರಹಣ, ಬೆಳಕಿನ ವಿನ್ಯಾಸದೊಂದಿಗೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ನಿಟ್ಟಿನಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನಗೊಂಡಿತ್ತು.ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದರನ್ನು ಅಭಿನಂದಿಸಲಾಯಿತು. ಹಿರಿಯ ರಂಗಭೂಮಿ ಕಲಾವಿದರಾದ ವೈ.ಎನ್. ಶಿವಣ್ಣ,ಎಂ.ವಿ. ನಾಗಣ್ಣ, ಯೋಗಾನಂದ ಕುಮಾರ್,ಜಕ್ಕೇನಹಳ್ಳಿ ಎಸ್.ರಾಜಣ್ಣ, ಚಿದಾನಂದಮೂರ್ತಿ, ಹಿರಿಯ ಕಲಾವಿದರಾದ ಭಾಗ್ಯಮ್ಮ, ಆಶಾರಾಣಿ, ಹೆಚ್.ಎಸ್. ಪರಮೇಶ್, ಶ್ರೀನಿವಾಸಮೂರ್ತಿ ನೀನಾಸಂ ಮತ್ತಿತರರು ಉಪಸ್ಥಿತರಿದ್ದರು.