ಹವಾಮಾನ ವೈಪರೀತ್ಯ: ರೈತರು ಪರ್ಯಾಯ ಬೆಳೆಗಳತ್ತ ಯೋಚಿಸಲು ಡೀಸಿ ಸಲಹೆ

KannadaprabhaNewsNetwork |  
Published : Jul 17, 2026, 01:45 AM IST
14ಎಚ್ಎಸ್ಎನ್10 :  | Kannada Prabha

ಸಾರಾಂಶ

ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ಸಮಯೋಚಿತ ತಾಂತ್ರಿಕ ಮಾರ್ಗದರ್ಶನ ಒದಗಿಸಿ, ಹವಾಮಾನ ಪರಿಣಾಮಗಳನ್ನು ತಗ್ಗಿಸುವುದು, ಕೃಷಿ ಉತ್ಪಾದಕತೆಯನ್ನು ಉಳಿಸಿಕೊಳ್ಳುವುದು ಹಾಗೂ ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದಾಗಿದೆ. ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಇತರ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯ ಕೃಷಿ ಕ್ಷೇತ್ರದ ಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಕೃಷಿಯು ಮುಖ್ಯವಾಗಿ ಮಳೆ ಆಧಾರಿತವಾಗಿದ್ದು, ಹವಾಮಾನ ವೈಪರೀತ್ಯ, ಮಳೆಯ ವಿಳಂಬ, ಅಸಮರ್ಪಕ ಮಳೆ ಹಂಚಿಕೆ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇತರೆ ನೈಸರ್ಗಿಕ ವಿಕೋಪಗಳು ಕೃಷಿ ಉತ್ಪಾದನೆಗೆ ಪ್ರಮುಖ ಸವಾಲುಗಳಾಗಿವೆ. ಇಂತಹ ಪರಿಸ್ಥಿತಿಗಳಲ್ಲಿ ರೈತರ ಆದಾಯವನ್ನು ಸಂರಕ್ಷಿಸುವುದು, ಬೆಳೆ ನಷ್ಟವನ್ನು ಕಡಿಮೆ ಮಾಡುವುದು ಹಾಗೂ ಕೃಷಿ ವ್ಯವಸ್ಥೆಯ ಸ್ಥಿರತೆಯನ್ನು ಕಾಪಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹವಾಮಾನ ವೈಪರೀತ್ಯತೆ ಪರ್ಯಾಯ ಬೆಳೆ ಯೋಜನೆ ಕುರಿತಾ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಹಾಸನ ಜಿಲ್ಲಾ ಪರ್ಯಾಯ ಬೆಳೆ ಯೋಜನೆಯನ್ನು ಜಿಲ್ಲೆಯ ಹವಾಮಾನ, ಮಣ್ಣಿನ ವಿಧಗಳು, ಲಭ್ಯವಿರುವ ನೀರಾವರಿ ಮೂಲಗಳು, ಪ್ರಮುಖ ಬೆಳೆಗಳು ಹಾಗೂ ಸ್ಥಳೀಯ ಕೃಷಿ ಪದ್ಧತಿಗಳನ್ನು ಪರಿಗಣಿಸಿ ಸಿದ್ಧಪಡಿಸಲಾಗಿದೆ. ಮಳೆಯ ಆಗಮನದಲ್ಲಿ ವಿಳಂಬ, ಮಧ್ಯಂತರ ಬರ, ಅತಿವೃಷ್ಟಿ, ಪ್ರವಾಹ, ಕೀಟರೋಗಗಳ ತೀವ್ರತೆ ಹಾಗೂ ಇತರೆ ಪ್ರತಿಕೂಲ ಸಂದರ್ಭಗಳಲ್ಲಿ ಅನುಸರಿಸಬಹುದಾದ ಪರ್ಯಾಯ ಬೆಳೆಗಳು, ಅಲ್ಪಾವಧಿಯ ತಳಿಗಳು, ಕೃಷಿ ನಿರ್ವಹಣಾ ಕ್ರಮಗಳು ಹಾಗೂ ಸಂಪನ್ಮೂಲ ಸಂರಕ್ಷಣಾ ತಂತ್ರಜ್ಞಾನಗಳನ್ನು ಈ ಯೋಜನೆಯಲ್ಲಿ ಒಳಗೊಂಡಿದೆ ಎಂದರು.ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ಸಮಯೋಚಿತ ತಾಂತ್ರಿಕ ಮಾರ್ಗದರ್ಶನ ಒದಗಿಸಿ, ಹವಾಮಾನ ಪರಿಣಾಮಗಳನ್ನು ತಗ್ಗಿಸುವುದು, ಕೃಷಿ ಉತ್ಪಾದಕತೆಯನ್ನು ಉಳಿಸಿಕೊಳ್ಳುವುದು ಹಾಗೂ ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದಾಗಿದೆ. ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಇತರ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯ ಕೃಷಿ ಕ್ಷೇತ್ರದ ಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.೨೦೨೬-೨೭ರ ಮುಂಗಾರು ಹಂಗಾಮಿನಲ್ಲಿ ಮಳೆಯು ಆಶಾದಾಯಕವಾಗಿಲ್ಲವೆಂದು ಹವಾಮಾನ ಇಲಾಖೆಯ ತಜ್ಞರು ತಿಳಿಸಿರುತ್ತಾರೆ. ಆದ ಕಾರಣ ರೈತ ಬಾಂಧವರು ಈ ಮುಂಗಾರು ಹಂಗಾಮಿನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ಆಯ್ಕೆ ಮಾಡುವುದು ತೀರ ಅವಶ್ಯಕವಾಗಿರುತ್ತದೆ. ನಮ್ಮ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಚ್ಚು ರಾಗಿ ಮತ್ತು ಭತ್ತವನ್ನು ಬೆಳೆಯುವುದು ವಾಡಿಕೆಯಾಗಿದೆ. ರಾಗಿ ಬೆಳೆಯು ಸುಮಾರು ೧,೦೨,೧೮೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಎಂದು ಹೇಳಿದರು.ಸಾಮಾನ್ಯವಾಗಿ ಭತ್ತದ ಬೆಳೆಯು ಹೆಚ್ಚು ನೀರನ್ನು ಅಪೇಕ್ಷಿಸುವುದರಿಂದ ಪ್ರಸ್ತುತ ಪರಿಸ್ಥಿಯಲ್ಲಿ ಭತ್ತ ಬೆಳೆಯುವುದು ಸೂಕ್ತವಲ್ಲ ಆದ್ದರಿಂದ ಬರಸಹಿಷ್ಣತೆ ಹೊಂದಿರುವ ಅಲ್ಪಾವಧಿ ಮತ್ತು ಮಧ್ಯಮಾವಧಿ ರಾಗಿ ಬೆಳೆಯುವುದು ಸೂಕ್ತ. ಏಕೆಂದರೆ ದೀರ್ಘಾವಧಿ ತಳಿಗಳನ್ನು ಬೆಳೆಯುವುದರಿಂದ ಮಳೆ ಕೊರತೆಯಾದಂತಹ ಸಂದರ್ಭಗಳಲ್ಲಿ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಾಗಿ ಬೆಳೆಯಲ್ಲಿ ಅಲ್ಪಾವಧಿ ತಳಿಗಳು ಅಥವಾ ಮಧ್ಯಮಾವಧಿ ತಳಿಗಳಿಗೆ ಹೋಗುವುದು ಉತ್ತಮ ಎಂದು ತಿಳಿಸಿದರು. ಅದೇ ರೀತಿ ಭತ್ತದ ಬೆಳೆಯನ್ನು ಈ ವರ್ಷ ಬೆಳೆಯದೇ ಇರುವುದು ಸೂಕ್ತ ಎಂದು ಹವಾಮಾನ ತಜ್ಞರು ಎಚ್ಚರಿಸಿರುತ್ತಾರೆ. ನೀರನ್ನು ಹೆಚ್ಚು ಬೇಡುವ ಬೆಳೆಗಳನ್ನು ಬೆಳೆಯದೇ ಇರುವುದು ಒಳ್ಳೆಯದು ಎಂದು ಈ ಬಾರಿ ವಿಜ್ಞಾನಿಗಳು ಮತ್ತು ಹವಾಮಾನ ತಜ್ಞರು ತಿಳಿಸಿರುವುದರಿಂದ, ಈ ಬಾರಿ ಎಲ್ಲಾ ಜಲಾಶಯಗಳಲ್ಲೂ ಕೂಡ ನೀರಿನ ಶೇಖರಣೆ ಕಡಿಮೆ ಇರುವುದರಿಂದ ಭತ್ತ ಬೆಳೆಯುವಂತಹ ಪ್ರದೇಶಗಳಲ್ಲಿ ರೈತ ಬಾಂಧವರು ಹೆಚ್ಚು ಬರಸಹಿಷ್ಣುತೆ ಶಕ್ತಿಯನ್ನು ಹೊಂದಿರುವಂತಹ ರಾಗಿಯನ್ನು ಬೆಳೆಯಬಹುದಾಗಿದೆ ಎಂದರು. ರಾಗಿಯಲ್ಲಿ ಪ್ರಮುಖವಾಗಿ ಒಐ-೩೨೨, ಎಂಬ ತಳಿ ಬರ ಸಹಿಷ್ಣುತೆ ಹೊಂದಿರುವಂತಹ ತಳಿಯಾಗಿರುತ್ತದೆ. ರಾಗಿ ಬೆಳೆ ಬೆಳೆದರೆ, ರಾಗಿ ಕಾಳಿನ ಜೊತೆಗೆ ಹಸು ಕರುಗಳಿಗೆ ಮೇವಿನ ಅನುಕೂಲವಾಗುತ್ತದೆ. ರೈತ ಬಾಂಧವರು ಅಲಸಂದೆ ಮತ್ತು ಅವರೆ ದ್ವಿದಳಧಾನ್ಯಗಳನ್ನು ಬೆಳೆಯಬಹುದಾಗಿದೆ. ಪ್ರಮುಖವಾಗಿ ಭತ್ತ ಬೆಳೆಯುವಂತಹ ಪ್ರದೇಶಗಳಲ್ಲಿ ರೈತರು ರಾಗಿ ಬೆಳೆಯನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಿದರು.

ಮಳೆ ಆಧಾರಿತ ಎತ್ತರ ಪ್ರದೇಶಗಳಲ್ಲಿ ಕಡಿಮೆ ನೀರು ಅಗತ್ಯವಿರುವ ಮೆಕ್ಕೆಜೋಳ, ಜೋಳ, ರಾಗಿ, ನವಣೆ, ಎಳು, ಹುಚ್ಚೆಳ್ಳು, ಸಾಮೆ, ಬರಗು ಮುಂತಾದ ಬೆಳೆಗಳಿಗೆ ಆದ್ಯತೆ ನೀಡಬೇಕು, ಕಳೆ ನಿಯಂತ್ರಣ ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆಗಾಗಿ ಆಗಾಗ್ಗೆ ಅಂತರ ಬೇಸಾಯ ಕ್ರಮಗಳನ್ನು ಕೈಗೊಳ್ಳಬೇಕು. ತಮ್ಮ ಪ್ರದೇಶಕ್ಕೆ ಲಭ್ಯವಿರುವ ಹವಾಮಾನ ಮುನ್ಸೂಚನೆಗಳು ಮತ್ತು ಆಗಿಂದಾಗ್ಗೆ ನೀಡುವ ಕೃಷಿ ಸಲಹೆಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಜಂಟಿ ಕೃಷಿ ನಿರ್ದೇಶಕರಾದ ರಮೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳಗನ್ನಡ ಅಭಿವ್ಯಕ್ತಿ ಕೌಶಲಗಳ ಶೋಧನೆ ಅಗತ್ಯ
ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ; ಮುನಿಯಪ್ಪ