-ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಬುನಾದಿ ತರಬೇತಿ(ಇಂಡಕ್ಷನ್) ಕಾರ್ಯಾಗಾರದಲ್ಲಿ ಎಸ್.ಸಿ.ಪ್ರಸಾದ್
------ಕನ್ನಡಪ್ರಭವಾರ್ತೆ, ಚಳ್ಳಕೆರೆ
ಶಿಕ್ಷಕರು ಮಕ್ಕಳ ಮನಸ್ಥಿತಿ ಮತ್ತು ಬುದ್ಧಿಮಟ್ಟ ಅರಿತು ಬೋಧಿಸಬೇಕು ಎಂದು ಚಿತ್ರದುರ್ಗ ಡಯಟ್‍ನ ಇಂಡಕ್ಷನ್ ತರಬೇತಿ ಕಾರ್ಯಾಗಾರದ ನಿರ್ದೇಶಕ ಎಸ್.ಸಿ.ಪ್ರಸಾದ್ ಹೇಳಿದರು.ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಡಿಎಸ್ಇಆರ್ ಟಿ ಮತ್ತು ಚಿತ್ರದುರ್ಗ ಡಯಟ್ ಸಂಯುಕ್ತಾಶ್ರಯದಲ್ಲಿ ಹೊಸದಾಗಿ ನೇಮಕಗೊಂಡಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಬುನಾದಿ ತರಬೇತಿ(ಇಂಡಕ್ಷನ್) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸೇವಾ ಪೂರ್ವ ಹಂತದಲ್ಲಿ ಪಡೆಯುವ ತರಬೇತಿಗೂ, ಸೇವಾನಿರತ ಹಂತದಲ್ಲಿ ಪಡೆಯುವ ತರಬೇತಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಸಮಾಜದ ನಿರೀಕ್ಷೆ ಅಪಾರವಾಗಿದ್ದು ಶಿಕ್ಷಕರು, ಅಧಿಕಾರಿಗಳು ಮತ್ತು ಎಲ್ಲಾ ಶೈಕ್ಷಣಿಕ ಭಾಗೀದಾರರು ಸಮನ್ವಯತೆಯಿಂದ ಕೆಲಸ ಮಾಡುವುದರ ಮೂಲಕ ಶೈಕ್ಷಣಿಕ ರಥವನ್ನು ಮುನ್ನಡೆಸಬೇಕು. ಶಿಕ್ಷಕರು ಹೊಸ ರೀತಿಯ ಆಲೋಚನೆಯೊಂದಿಗೆ ತರಗತಿ ನಿರ್ವಹಣೆ, ಮಕ್ಕಳ ಜತೆ ಸಂವಹನ, ಮೌಲ್ಯಮಾಪನ ಪ್ರಕ್ರಿಯೆ ನಿರ್ವಹಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ, ಶಿಕ್ಷಕರಿಗೆ ವೃತ್ತಿಗೆ ಬೇಕಾದ ಬದ್ಧತೆ, ಬೋಧನಾ ಕೌಶಲ್ಯಗಳು, ಇಲಾಖೆಯ ಆಡಳಿತಾತ್ಮಕ ಮತ್ತು ಶೈಕ್ಷಣಿಕ ವಿಚಾರಗಳನ್ನೊಳಗೊಂಡಂತೆ ಡಯಟ್ ವತಿಯಿಂದ 5 ದಿನಗಳಲ್ಲಿ ತರಬೇತಿ ನೀಡಲಾಗುತ್ತಿದೆ. ವೃತ್ತಿ ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿ ಈ ತರಬೇತಿ ಉಪಯುಕ್ತವಾಗುತ್ತದೆ. ತರಬೇತಿಯ ಯಶಸ್ಸು ಶಿಬಿರಾರ್ಥಿಗಳ ಅಭಿರುಚಿ, ಆಸಕ್ತಿಯನ್ನು ಅವಲಂಬಿಸಿರುತ್ತದೆ. ಶಿಕ್ಷಕರು ಉತ್ಸಾಹದಿಂದ ಕ್ರಿಯಾಶೀಲರಾಗಿ ಭಾಗವಹಿಸಿ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಲು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ನೋಡಲ್ ಅಧಿಕಾರಿ ಸಿದ್ದೇಶಿ, ತರಬೇತಿ ಸಂಯೋಜಕ ಎಸ್.ಬಸವರಾಜು, ಬಿ.ಆರ್.ಸಿ ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ತಿಪ್ಪೇರುದ್ರಪ್ರ, ಶಿವಣ್ಣ, ಖಲಂದರ್, ತಿಮ್ಮರಾಜು, ಶಿಕ್ಷಕಿ ಬಿಂದು ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಇದ್ದರು.-------------
ಪೋಟೋ ಕ್ಯಾಪ್ಸನ್ಚಳ್ಳಕೆರೆ ಆದರ್ಶ ವಿದ್ಯಾಲಯದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಬುನಾದಿ ತರಬೇತಿ(ಇಂಡಕ್ಷನ್) ಕಾರ್ಯಾಗಾರವನ್ನು ತರಬೇತಿ ನಿರ್ದೇಶಕ ಎಸ್.ಸಿ.ಪ್ರಸಾದ್ ಉದ್ಘಾಟಿಸಿದರು.
------ಪೋಟೋ: 28 ಸಿಟಿಡಿ2
--