ಹಾವೇರಿ: ಜಾನುವಾರುಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಇದೇ ಏಪ್ರಿಲ್ ೧ ರಿಂದ ೩೦ರವರೆಗೆ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೫ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ನಿರ್ವಹಣಾ ಸಮಿತಿಯ ಸಭೆಯಲ್ಲಿ ಲಸಿಕಾ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಕಾಲುಬಾಯಿ ಬೇನೆ ಲಸಿಕೆ ಹಾಕಿಸಲು ಜಾನುವಾರು ಮಾಲೀಕರು ತಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಬದಿಗೊತ್ತಿ, ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಮುಂದಾಗುವಂತೆ ತಿಳಿಸಿದ್ದಾರೆ.
ಅರ್ಹ ಜಾನುವಾರುಗಳಿಗೆ ನೂರಕ್ಕೆ ನೂರರಷ್ಟು ಲಸಿಕೆ ಹಾಕುವ ಮೂಲಕ ಈ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಲಸಿಕಾ ಕಾರ್ಯಕ್ರಮಕ್ಕೆ ಪಶು ಇಲಾಖೆಗೆ ಜೊತೆಗೆ ಹಾವೇರಿ ಹಾಲು ಒಕ್ಕೂಟ ವ್ಯಾಪ್ತಿಯ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ, ನಗರಸಭೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಸಮನ್ವಯದಿಂದ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಹಾಗೂ ಲಸಿಕಾ ಕಾರ್ಯಕ್ರಮದ ಬಗ್ಗೆ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು ೩.೫೮ ಲಕ್ಷ ಜಾನುವಾರುಗಳಿದ್ದು, ೫ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮನೆ ಬಾಗಿಲಿಗೆ ಹೋಗಿ ಕಾಲುಬಾಯಿ ಲಸಿಕೆ ಹಾಕಲಿದ್ದಾರೆ. ಪಶುಪಾಲನಾ ಇಲಾಖೆಯ ಹಾಗೂ ಇಲಾಖೇತರ ಲಸಿಕೆದಾರರನ್ನು ಒಳಗೊಂಡು ಇಬ್ಬರು ಲಸಿಕಾದರರಿರುವ ಒಟ್ಟು ೧೪೧ ತಂಡಗಳನ್ನು ರಚಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಪ್ರತಿ ತಾಲೂಕಿನಲ್ಲಿ ಲಸಿಕಾ ವೇಳಾ ಪಟ್ಟಿ ಮತ್ತು ಜಾನುವಾರು ಹೊಂದಿರುವ ರೈತರ ಮಾಹಿತಿಯನ್ನು ಗ್ರಾಮವಾರು ತಯಾರಿಸಲಾಗಿದೆ. ಗ್ರಾಮಗಳ ಹೆಸರು, ಜಾನುವಾರುಗಳ ಸಂಖ್ಯೆ, ಜಾನುವಾರು ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ, ಲಸಿಕಾದಾರರ ವಿವರ ಹಾಗೂ ಜಾನುವಾರುವಿನ ಕಿವಿ ಓಲೆ ಸಂಖ್ಯೆ ವಿವರಗಳು ಲಭ್ಯವಿರುತ್ತವೆ. ಪ್ರತಿ ಗ್ರಾಮ ಅಥವಾ ನಗರ ಪ್ರದೇಶವನ್ನು ೧೦೦ ರಿಂದ ೧೨೦ ಜಾನುವಾರುಗಳಿಗೆ ಒಂದು ಬ್ಲಾಕ್ ಎಂದು ವರ್ಗೀಕರಿಸಿ ಒಟ್ಟು ೩೨೧೪ ಬ್ಲಾಕ್‌ಗಳಲ್ಲಿ ಲಸಿಕಾದಾರರು ಲಸಿಕೆ ಹಾಕಲಿದ್ದಾರೆ. ಪ್ರತಿ ಜಾನುವಾರಿಗೆ ಒಂದರಂತೆ ಸೀರಿಂಜ್ ಉಪಯೋಗಿಸಿ ಲಸಿಕೆ ನೀಡಲಿದ್ದಾರೆ ಎಂದರು.ಜಿಲ್ಲೆಗೆ ಈಗಾಗಲೇ ೩,೧೯.೯೦೦ ಡೋಸ್ ಲಸಿಕೆ ಸರಬರಾಜಾಗಿದ್ದು, ಈ ಲಸಿಕೆಯನ್ನು ತಾಲೂಕಿನಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಮರು ಹಂಚಿಕೆ ಮಾಡಲಾಗಿರುತ್ತದೆ. ಜಿಲ್ಲೆಗೆ ಸರಬರಾಜಾದಂತಹ ಪೋರ್ಸ್, ಬ್ಯಾರ್ಸ್‌ಗಳನ್ನು ಹಾಗೂ ವ್ಯತಿರಿಕ್ತ ಪರಿಣಾಮಗಳ ನಿರ್ವಹಣೆಗೆ ಅವಶ್ಯವಿರುವ ತುರ್ತು ಔಷಧಿ ಮತ್ತು ರಾಸಾಯನಿಕಗಳನ್ನು ಹಂಚಿಕೆ ಮಾಡಿ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಯೋಜಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಹಾವೇರಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧಿಕಾರಿಗಳು, ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿಗಳು (ತಾಂತ್ರಿಕ), ಎಲ್ಲಾ ತಾಲೂಕುಗಳ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.