ಸಾರಾಂಶ
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಇದುವರೆಗೆ ವಿಚಾರಣೆಗೆ ಒಳಪಡಿಸಲಾದ ಐದು ಮಂದಿಯ ಸಿಆರ್‌ಪಿಸಿ 161 ಹೇಳಿಕೆಯನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ದಾಖಲು ಮಾಡಿದ್ದಾರೆ.
ಮಂಗಳೂರು : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಇದುವರೆಗೆ ವಿಚಾರಣೆಗೆ ಒಳಪಡಿಸಲಾದ ಐದು ಮಂದಿಯ ಸಿಆರ್‌ಪಿಸಿ 161 ಹೇಳಿಕೆಯನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ದಾಖಲು ಮಾಡಿದ್ದಾರೆ. ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಟಿ.ಜಯಂತ್, ಯೂಟ್ಯೂಬರ್‌ಗಳಾದ ಅಭಿಷೇಕ್ ಮತ್ತು ಕೇರಳದ ಮನಾಫಾ ಹಾಗೂ ಸೌಜನ್ಯಾ ಮಾವ ವಿಠಲಗೌಡ ಹೇಳಿಕೆಯನ್ನು ಎಸ್‌ಐಟಿ ಪಡೆದುಕೊಂಡಿದೆ.
ಸಿಆರ್‌ಪಿಸಿ ಸೆಕ್ಷನ್ 161ರ ಅಡಿ ಸಾಕ್ಷಿದಾರರ ಹೇಳಿಕೆ ದಾಖಲು ಪ್ರಕ್ರಿಯೆ ನಡೆದಿದೆ. ಕಳೆದೊಂದು ವಾರದಿಂದ ಇವರ ಸುದೀರ್ಘ ವಿಚಾರಣೆಯನ್ನು ಎಸ್‌ಐಟಿ ನಡೆಸಿತ್ತು. ಅದರ ಬಳಿಕವೇ ಹೇಳಿಕೆ ದಾಖಲು ಮಾಡಿಕೊಂಡಿದೆ.
ಆನೆ ಮಾವುತನ ಕೊಲೆ: ಎಸ್‌ಐಟಿಗೆ ಪುತ್ರ ದೂರು
2012ರಲ್ಲಿ ಕೊಲೆಗೀಡಾದ ಆನೆ ಮಾವುತ ನಾರಾಯಣ ಅವರ ಕುಟುಂಬದವರು ಬುಧವಾರ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಮಾವುತನ ಪುತ್ರ ಗಣೇಶ್ ಅವರು ಈ ಹಿಂದೆಯೇ ಎಸ್ಐಟಿಗೆ ದೂರು ಕೊಟ್ಟಿದ್ದರು. ಆದರೆ, ಅದಕ್ಕೂ ಮೊದಲು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ ಕಾರಣ ಎಸ್‌ಐಟಿ ಕೇಸ್ ಪಡೆದಿರಲಿಲ್ಲ. ಇದೀಗ ನ್ಯಾಯಾಲಯದಲ್ಲಿ ದಾಖಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದು ಎಸ್ಐಟಿಗೆ ದೂರು ನೀಡಿ ತನಿಖೆ ನಡೆಸುವಂತೆ ಮಾವುತನ ಮಗ ಮನವಿ ಮಾಡಿದ್ದಾರೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟಗಾರ ದಿನೇಶ್ ಗಾಣಿಗ ಅವರು, ಗಣೇಶ್ ಅವರ ತಂದೆಯನ್ನು ಕೊಂದ ಆರೋಪಿಗಳು ಇದುವರೆಗೂ ಸಿಕ್ಕಿಲ್ಲ. ಅದಕ್ಕಾಗಿ ಮರುತನಿಖೆ ಮಾಡಿ ಅಂತ ದೂರು ನೀಡಿದ್ದೇವೆ. ಮೇಲಧಿಕಾರಿಗಳ ಜತೆ ಚರ್ಚೆ ಮಾಡುವುದಾಗಿ ಎಸ್‌ಐಟಿಯವರು ತಿಳಿಸಿದ್ದಾರೆ ಎಂದರು. ಇದರಿಂದಾಗಿ ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ಆನೆಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರ ಭೀಕರ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಂತಾಗಿದೆ.
ಧರ್ಮಸ್ಥಳ ತೇಜೋವಧೆ: ಬೃಹತ್ ಜನಾಗ್ರಹ ಸಭೆ
ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಎಲ್ಲರೂ ಒಗ್ಗಟ್ಟಾಗಬೇಕು. ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರ ಮತ್ತು ದಬ್ಬಾಳಿಕೆಗೆ ಈಗ ಅಂತ್ಯ ಬರಬೇಕಾಗಿದೆ ಎಂದು ಎಸ್‌ಡಿಸಿಸಿ ಅಧ್ಯಕ್ಷ ಡಾ। ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು. ಕಾರ್ಕಳ ಕುಕ್ಕುಂದೂರು ಮೈದಾನದಲ್ಲಿ ಧರ್ಮಸ್ಥಳ ಅಭಿಮಾನಿ ವೇದಿಕೆ ವತಿಯಿಂದ ಬುಧವಾರ ಆಯೋಜಿಸಲಾದ ಬೃಹತ್ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಸೆ.14ರಂದು ಸುಮಾರು 3,500 ಸಹಕಾರಿ ಕ್ಷೇತ್ರದ ಧುರೀಣರೊಂದಿಗೆ ಧರ್ಮಸ್ಥಳಕ್ಕೆ ವಾಹನ ಜಾಥಾ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಕಾರ್ಕಳ ಜೈನ ಮಠದ ಲಲಿತ ಕೀರ್ತಿ ಪಟ್ಟವಚಾರ್ಯವರ್ಯ ಮಾತನಾಡಿ, ಧರ್ಮಸ್ಥಳವು 800 ವರ್ಷಗಳ ಐತಿಹಾಸಿಕ ಪಾರಂಪರ್ಯವನ್ನು ಹೊಂದಿದೆ. ಸರ್ವಧರ್ಮಗಳಿಗೆ ಸಾಕ್ಷಿಯಾಗಿ, ಸಹಬಾಳ್ವೆಯ ಪ್ರತೀಕವಾಗಿ ಧರ್ಮಸ್ಥಳ ಬೆಳಗುತ್ತಿದೆ. ಆದರೆ ಈಗ ಧಾರ್ಮಿಕ ಕ್ಷೇತ್ರಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ರಾಜಕೀಯದ ಪ್ರಭಾವವೂ ಇಲ್ಲಿ ಅಡಗಿದೆ. ಈ ಸಂದರ್ಭದಲ್ಲಿ ನಾವು ಧರ್ಮಸ್ಥಳದ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಎಂದರು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರವು ಒಂದು ಗುಂಪಿನಿಂದ ಸಿದ್ಧಪಡಿಸಲ್ಪಟ್ಟ ಕುತಂತ್ರವಾಗಿದೆ. ಇದು ನಂಬಿಕೆಯನ್ನು ಕುಂದಿಸಿ ಅರಾಜಕತೆಯನ್ನು ಸೃಷ್ಟಿಸುವ ಕೆಲಸವಾಗಿದೆ. ಜಾತಿ-ಜಾತಿಗಳ ನಡುವೆ ಜಗಳ ಹುಟ್ಟಿಸುವುದರೊಂದಿಗೆ ವಿದೇಶಿ ಶಕ್ತಿಗಳ ಪಿತೂರಿಯೂ ಇದಕ್ಕೆ ಕಾರಣವಾಗಿದೆ. ಹೀಗೆ ಭಾವನೆಗಳನ್ನು ದುರ್ಬಲಗೊಳಿಸಿ ಹಿಂದೂಗಳ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ನಾನು ಹಿಂದುತ್ವದ ಪರವಾಗಿ, ಸಂಸ್ಕೃತಿಯ ರಕ್ಷಣೆಯ ಪರವಾಗಿ ಧ್ವನಿ ಎತ್ತಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ಸಜ್ಜನಿಕೆ ಬಿಟ್ಟು ರಸ್ತೆಗೆ ಇಳಿಯುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಹಾಗೂ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಹೆಗ್ಗಡೆಯವರಿಗೆ ಸಮಾಜವೇ ಪ್ರಮಾಣಪತ್ರ ನೀಡಿದೆ:
ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಗಳಿಗೆ ಸಮಾಜವೇ ಪ್ರಮಾಣಪತ್ರ ನೀಡಿದೆ. ಇಲ್ಲಿ ಎಸ್‌ಐಟಿ ತನಿಖೆ ಮೂಲಕ ನೀಡುವ ಅಗತ್ಯವಿಲ್ಲ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಸಮಾಜ ಬದಲಾವಣೆಗೆ ಪ್ರೇರೇಪಿಸುತ್ತಿವೆ. ಆದರೆ ಕೆಲ ಅರಾಜಕ ಶಕ್ತಿಗಳು ಅಪವಿತ್ರತೆ ಮತ್ತು ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ. ರಾಜ್ಯ ಸರ್ಕಾರ ಕೂಡ ಕೆಲ ಸಂದರ್ಭಗಳಲ್ಲಿ ನಗರ ನಕ್ಸಲರ ಕೈಗೊಂಬೆಯಂತಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಸೋಲೂರು ಮಠದ ಶ್ರೀ ವಿಖ್ಯಾತಾನಾಂದ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧದ ನಿಮ್ಮ ಹೋರಾಟದಲ್ಲಿ ನಾವು ಸಹ ನಿಮ್ಮೊಂದಿಗಿದ್ದೇವೆ. ನಮ್ಮ ವೈಯಕ್ತಿಕ ಅಸ್ತಿತ್ವಕ್ಕೂ ಧಕ್ಕೆ ತರುವ ಕೆಲಸಗಳು ನಡೆಯುತ್ತಿವೆ. ಸಮಾಜವು ಬೇಗನೆ ಜಾಗೃತವಾಗಬೇಕು ಎಂದರು.
ನಾನು ಸತ್ಯದ ಪರ ಇದ್ದೇನೆ: ಮನಾಫಾ
ನಾನು ಸತ್ಯದ ಪರವಾಗಿ ಇದ್ದೇನೆ. ನಾನು ಯಾರನ್ನೂ ರಕ್ಷಣೆ ಮಾಡುವುದಕ್ಕೆ ಈ ಹೋರಾಟಕ್ಕೆ ಬಂದಿಲ್ಲ. ಯಾರು ಸುಳ್ಳು ಅಪಪ್ರಚಾರ ಮಾಡಿದ್ದಾರೋ, ಯಾರಿಗೆ ಅಪರಾಧಿ ಪ್ರಜ್ಞೆ ಇದೆಯೋ ಅವರಿಗೆ ವಿರೋಧವಾಗಿ ನಿಲ್ಲುತ್ತೇನೆ ಎಂದು ಕೇರಳದ ಯೂಟ್ಯೂಬರ್ ಮನಾಫಾ ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಸಂಬಂಧ ಮಂಗಳವಾರ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾದ ಮನಾಫ್, ಸುದ್ದಿಗಾರರ ಜೊತೆ ಮಾತನಾಡಿದರು. ನಾನು ಸತ್ಯದ ಪರವಾಗಿ ಇದ್ದೇನೆ. ನಾನು ಯಾರನ್ನೂ ರಕ್ಷಣೆ ಮಾಡುವುದಕ್ಕೆ ಈ ಹೋರಾಟಕ್ಕೆ ಬಂದಿಲ್ಲ. ಯಾರು ಸುಳ್ಳು ಅಪಪ್ರಚಾರ ಮಾಡಿದ್ದಾರೋ, ಯಾರಿಗೆ ಅಪರಾಧಿ ಪ್ರಜ್ಞೆ ಇದೆಯೋ ಅವರಿಗೆ ವಿರೋಧವಾಗಿ ನಿಲ್ಲುತ್ತೇನೆ. ಯಾವುದೇ ಸೈಡ್ ಅಂತ ಅಲ್ಲ, ನನಗಿರುವ ಸತ್ಯದ ಮಾಹಿತಿ ಪರ ನಿಲ್ಲುತ್ತೇನೆ. ನಾನು ಸತ್ಯದ ಪರ ಹೋರಾಟ ಮಾಡುತ್ತಿದ್ದೇನೆ. ಅದರಲ್ಲಿ ನಮ್ಮವರೇ ತಪ್ಪು ಮಾಡಿದ್ದರೂ ಹೊರಗಡೆ ಬರಲಿ. ನಮ್ಮಲ್ಲೇ ಯಾರಾದ್ರೂ ಸುಳ್ಳು ಅಥವಾ ಕಿತಾಪತಿ ಮಾಡಿದ್ರೂ ಹೊರಗೆ ಬರಲಿದೆ ಎಂದರು.
ನಮ್ಮ ಕಡೆಯಿಂದ ಕೊಡಬೇಕಾದ ಎಲ್ಲ ಮಾಹಿತಿಗಳನ್ನು ಎಸ್ಐಟಿಗೆ ಕೊಡುತ್ತಿದ್ದೇವೆ. ಎಸ್ಐಟಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಂಧನ ಸಾಧ್ಯತೆ?:
ಕಾನೂನು ತಜ್ಞರ ಪ್ರಕಾರ ಈ ಹೇಳಿಕೆಯನ್ನು ನೇರವಾಗಿ ಸಾಕ್ಷ್ಯ ರೂಪದಲ್ಲಿ ನ್ಯಾಯಾಲಯದಲ್ಲಿ ಬಳಸಲು ಸಾಧ್ಯವಿಲ್ಲ. ಆದರೆ, ಈಗಾಗಲೇ ಹೇಳಿಕೆ ನೀಡಿರುವ ಪ್ರಮುಖ ಆರೋಪಿಯ ಹೇಳಿಕೆ ಹಾಗೂ ಇತರ ಸಾಕ್ಷಿದಾರರ ಹೇಳಿಕೆಗಳಲ್ಲಿ ಮಹತ್ವದ ವೈರುಧ್ಯ ಪತ್ತೆಯಾದರೆ, ಸಾಕ್ಷಿದಾರರನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರ ಪೊಲೀಸರಿಗೆ ಇದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿಯ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ.
ಮತ್ತೆ ಬಂಗ್ಲೆಗುಡ್ಡೆ
ಕಾಡಲ್ಲಿ ಮಹಜರು
ನಾಲ್ಕು ದಿನಗಳ ಹಿಂದೆ ಧರ್ಮಸ್ಥಳ ಸಮೀಪದ ಬಂಗ್ಲೆಗುಡ್ಡೆ ಕಾಡಿನಲ್ಲಿ ಮಹಜರು ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, ಬುಧವಾರ ಮತ್ತೆ ಸೌಜನ್ಯಾ ಮಾವ ವಿಠಲ ಗೌಡರನ್ನು ಕರೆದುಕೊಂಡು ಹೋಗಿ ಸ್ಥಳದ ಮಹಜರು ನಡೆಸಿದರು. ಎಸ್ಪಿ ಸೈಮನ್ ನೇತೃತ್ವದಲ್ಲಿ ಬಂಗ್ಲೆಗುಡ್ಡೆ ಕಾಡಿಗೆ ತೆರಳಿದ ಎಸ್ಐಟಿ ತಂಡ, ವಿಠಲ ಗೌಡ ಬುರುಡೆ ತಂದ ಕಾಡಿನಲ್ಲಿ ಸ್ಥಳ ಮಹಜರು ನಡೆಸಿದೆ. ಸೆ.6ರಂದು ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಮಹಜರು ನಡೆಸಿದ್ದಾಗ ಎರಡು ತಲೆಬುರುಡೆ ಪತ್ತೆಯಾಗಿ, ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು.
ಅತೀ ಶೀಘ್ರದಲ್ಲಿಯೇ ಸತ್ಯ
ಹೊರಬರುತ್ತದೆ: ಜಯಂತ್
ಕನ್ನಡಪ್ರಭ ವಾರ್ತೆ ಮಂಗಳೂರುಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ಗೆ ಸಂಬಂಧಪಟ್ಟಂತೆ ಎಲ್ಲವನ್ನೂ ಎಸ್ಐಟಿ ಮುಂದೆ ಹೇಳುತ್ತೇನೆ. ಅತಿ ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ಹೋರಾಟಗಾರ ಟಿ.ಜಯಂತ್ ತಿಳಿಸಿದ್ದಾರೆ. ಬುರುಡೆ ಪ್ರಕರಣ ಸಂಬಂಧ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬುಧವಾರ ಆಗಮಿಸಿದ ಟಿ.ಜಯಂತ್ ಸುದ್ದಿಗಾರರೊಂದಿಗೆ ಮಾತನಾಡಿ, ಸತ್ಯ ಅತಿ ಶೀಘ್ರದಲ್ಲಿ ಹೊರಗಡೆ ಬರಲಿದೆ. 161 ಹೇಳಿಕೆ ಪಡೆಯುತ್ತಿದ್ದಾರೆ. ಎಸ್ಐಟಿ ತನಿಖೆ ಮುಗಿದ ಬಳಿಕ ಮಾತನಾಡುತ್ತೇನೆ. ಎಲ್ಲವನ್ನೂ ಎಸ್ಐಟಿ ಮುಂದೆ ಹೇಳುತ್ತೇನೆ. ಎಸ್ಐಟಿಯಿಂದ ಸತ್ಯ ಹೊರಬರಲಿದೆ. ಪ್ರಸ್ತುತ ನನ್ನ ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.