ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಧರ್ಮಸ್ಥಳ ತನಿಖೆ ವಿಷಯದಲ್ಲಿ ಎಸ್ಐಟಿ ವರದಿ ಬರುವ ಮುಂಚೆಯೇ ಷಡ್ಯಂತ್ರ ನಡೆದಿದೆ ಎಂದು ಉಪಮುಖ್ಯಮಂತ್ರಿ ಹೇಳಿಕೆ ನೀಡಿರುವುದರಿಂದ ತನಿಖೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರಸಮಿತಿ ರಾಜ್ಯ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧರ್ಮಸ್ಥಳ ಪ್ರಕರಣಗಳಲ್ಲಿ ಸತ್ಯ ಹೊರಬರಬೇಕೆಂದೇ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದ್ದು, ವರದಿ ಬರುವ ಮುಂಚೆಯೇ ಬಿಜೆಪಿಗರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ವಜನೋ ಸುಖೀನೋ ಭವತು, ವಸುದೈವ ಕುಟುಂಬಕಂ ಎಂಬ ಅರ್ಥದಲ್ಲಿ ಆರ್ ಎಸ್ ಎಸ್ ಪ್ರಾರ್ಥನೆಯನ್ನು ಬಳಸಿದರಷ್ಟೆ.ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ಬಿಜೆಪಿಗೆ ಒಂದು ಸಿದ್ದಾಂತ ಇರುವಂತೆ ಕಾಂಗ್ರೆಸ್ ಪಕ್ಷಕ್ಕೂ ಒಂದು ಸಿದ್ದಾಂತವಿದೆ. ಅದರಂತೆ ಪಕ್ಷ ಕೆಲಸ ಮಾಡುತ್ತದೆ ಎಂದರು.ರಾಹುಲ್‌ಗಾಂಧಿ ಹೋರಾಟಕ್ಕೆ ಸಿಕ್ಕ ಜಯ:
ಮತಗಳ್ಳತನದ ವಿರುದ್ದದ ರಾಹುಲ್ ಗಾಂಧಿ ಅವರ ಹೋರಾಟವನ್ನು ಬಿಜೆಪಿಯವರು ಹೇಗಾದರೂ ಟೀಕಿಸಲಿ, ಅದರೆ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿರುವುದು ರಾಹುಲ್‌ಗಾಂಧಿ ಹೋರಾಟಕ್ಕೆ ಸಿಕ್ಕಜಯವೇ ಆಗಿದೆ ಎಂದು ಹೇಳಿದರು.ಮತಗಳ್ಳತನ ಕೇವಲ ಕರ್ನಾಟಕ, ಬಿಹಾರ ಅಥವಾ ಮಹಾರಾಷ್ಟ್ರಕ್ಕೆ ಮಾತ್ರ ಸಿಮೀತವಾಗಿಲ್ಲ, ಇಡೀ ದೇಶಕ್ಕೆ ವ್ಯಾಪಿಸಿದೆ. ಮಹಾರಾಷ್ಟ್ರದಲ್ಲಿ ವಿಧಾನ ಸಭೆ ಚುನಾವಣೆ ವೇಳೆ 1 ಲಕ್ಷದಷ್ಟು ಹೆಚ್ಚುವರಿ ಇದ್ದ ವೋಟರ್ ಸಂಖ್ಯೆ ಪಾರ್ಲಿಮೆಂಟ್ ಚುನಾವಣೆ ವೇಳೆ ದುಪ್ಪಟ್ಟಾಗುತ್ತದೆ. ಇದು ಹೇಗೆ ? ಆದ್ದರಿಂದಲೇ ಮತಗಳ್ಳತನದ ಬಗ್ಗೆ ದೊಡ್ಡ ಅನುಮಾನವೇ ಮೂಡಿದೆ. ಇದರ ಬಗ್ಗೆಯೇ ರಾಜ್ಯದ ಜನರ ಗಮನ ಸೆಳೆಯಲು ಕೆಪಿಸಿಸಿ ಪ್ರಚಾರ ಸಮಿತಿ ಪ್ರವಾಸ ಹಮ್ಮಿಕೊಂಡಿದೆ ಎಂದರು.
ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ನಾನು ಪಕ್ಷದ ಚುನಾವಣಾ ವೀಕ್ಷಕನಾಗಿದ್ದೆ. ಆ ವೇಳೆ ಒಂದು ಅಪಾರ್ಟ್‌ಮೆಂಟ್‌ಗೆ ಹೋದರೆ ಅಲ್ಲಿಗೆ ಹೋಗುವುದಕ್ಕೆ ನಮಗೆ ಬಿಡಲಿಲ್ಲ. ಅಲ್ಲಿಯೇ ಅಧಿಕ ಮತಗಳು ಇದ್ದವು. ಇದೆಲ್ಲಾ ಕಾರಣದಿಂದಲೇ ಪಕ್ಷದ ಅಧ್ಯಕ್ಷರು ಸತ್ಯ ಶೋಧನಾ ಸಮಿತಿಯೊಂದನ್ನು ರಚನೆ ಮಾಡಿ ಮತಗಳ್ಳತನದ ವರದಿ ತಯಾರಿಸಲು ಸೂಚಿಸಿದ್ದರು. ಆ ಪ್ರಕಾರ ನಾವು ಸತ್ಯ ಶೋಧನೆ ನಡೆಸಿ, ವರದಿ ತಯಾರಿಸಿ ಎಐಸಿಸಿಗೆ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.ಮತಗಳ್ಳತನ ವಿರುದ್ದ ರಾಜ್ಯದ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಪಕ್ಷದ ಜನಪರ ಕಾರ್ಯಕ್ರಮಗಳನ್ನು ತಿಳಿಸುವ ಸಲುವಾಗಿ ಈಗ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಪ್ರವಾಸ ಹಮ್ಮಿಕೊಂಡಿದೆ. ಈಗಾಗಲೇ ಎರಡು ಹಂತಗಳಲ್ಲಿ 12 ಜಿಲ್ಲೆಗಳಲ್ಲಿ ಪ್ರವಾಸ ನಡೆದಿದೆ. ಈಗ ಮೂರನೇ ಹಂತದಲ್ಲಿ ಈಗ ಶಿವಮೊಗ್ಗದಿಂದ ಏಳು ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಟಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಬಿ.ಎ. ರಮೇಶ್ ಹೆಗಡೆ, ವೀಕ್ಷಕ ಅನಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಧಾನಕಾರ್ಯದರ್ಶಿ ಎಸ್ ಟಿ ಹಾಲಪ್ಪ ಮತ್ತಿತರರು ಇದ್ದರು.