ಮಾಜಿ ಶಾಸಕ ದೇಸಾಯಿ ನೇತೃತ್ವದಲ್ಲಿ ಧರ್ಮಸ್ಥಳ ಚಲೋ

| Published : Sep 11 2025, 12:03 AM IST

ಸಾರಾಂಶ

ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಹೆಸರಿಗೆ ಕಳಂಕ ತರುವ ಕೆಲಸ ಆಗುತ್ತಿದೆ. ನಮ್ಮ ಬೆಂಬಲ ವೀರೇಂದ್ರ ಹೆಗ್ಗಡೆ ಅವರ ಪರವಾಗಿದೆ. ಆದ್ದರಿಂದ ಧರ್ಮಸ್ಥಳಕ್ಕೆ ಹೋಗಿ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲಿದ್ದೇವೆ.

ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಇಲ್ಲಿಯ ಕರ್ನಾಟಕ ಕಾಲೇಜು ವೃತ್ತದಲ್ಲಿರುವ ಗಣೇಶ ದೇವಸ್ಥಾನದಿಂದ ಧರ್ಮಸ್ಥಳ ಚಲೋ ನಡೆಸಿದರು.

ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಹೆಸರಿಗೆ ಕಳಂಕ ತರುವ ಕೆಲಸ ಆಗುತ್ತಿದೆ. ನಮ್ಮ ಬೆಂಬಲ ವೀರೇಂದ್ರ ಹೆಗ್ಗಡೆ ಅವರ ಪರವಾಗಿದೆ. ಆದ್ದರಿಂದ ಧರ್ಮಸ್ಥಳಕ್ಕೆ ಹೋಗಿ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂಗಳ ಮೇಲೆ ಅನೇಕ ರೀತಿಯ ಸಂಚು ನಡೆಸಿದ್ದು ಧರ್ಮಸ್ಥಳ ಮೇಲಾಗಿರುವ ಆರೋಪಗಳು ಸಹ ಒಂದು ಸಂಚು. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಹಿಂದೂಗಳ ಶಾಪ ಅನುಭವಿಸಬೇಕಾಗುತ್ತದೆ ಎಂದು ಅಮೃತ ದೇಸಾಯಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಸುಮಾರು 25 ಕಾರಗಳಲ್ಲಿ ನೂರಕ್ಕೂ ಹೆಚ್ಚು ಜನರು ಬೆಳಗ್ಗೆ 8ಕ್ಕೆ ಹೊರಟು ಧರ್ಮಸ್ಥಳಕ್ಕೆ ರಾತ್ರಿ ತಲುಪಲಿದ್ದಾರೆ. ಗುರುವಾರ ಬೆಳಗ್ಗೆ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಮುಖಂಡರಾದ ಶಂಕರ ಕೊಮಾರ ದೇಸಾಯಿ, ಮಹೇಶ ಎಲಿಗಾರ, ಚನ್ನವೀರಗೌಡ ಪಾಟೀಲ, ಮಹಾವೀರ ಜೈನರ್‌, ಮಹಾಂತೇಶ ಹುಲ್ಲೂರ, ಕಲ್ಲನಗೌಡ ಗುರನಗೌಡ್ರ ಮತ್ತಿತರರು ಇದ್ದರು.