ಕನ್ನಡಪ್ರಭ ವಾರ್ತೆ ಮಂಡ್ಯ

ಇನ್ಮುಂದೆ ನೀವು ನಿಮ್ಮ ಆಸ್ತಿಗೆ ಇ- ಖಾತೆ ಪಡೆಯುವುದಕ್ಕೆ ನಗರಸಭೆಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಆಸ್ತಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದರೆ ಸಾಕು. ದಾಖಲಾತಿಗಳು ಸಮರ್ಪಕವಾಗಿದ್ದರೆ ಮನೆಯಲ್ಲೇ ಕುಳಿತು ಇ-ಆಸ್ತಿಗಳನ್ನು ಪಡೆದುಕೊಳ್ಳುವ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಕಾಲಾವಧಿಯೊಳಗೆ ಇ- ಖಾತೆ ಪಡೆಯಬಹುದು. ಇ- ಖಾತೆ ಪಡೆಯುವ ಮೂಲಕ ಸರಳವಾಗಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮುಖಾಂತರ ಪಾವತಿಸಬಹುದು. ಮಂಡ್ಯ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳ ಮಾಹಿತಿಯನ್ನು ಇ- ಆಸ್ತಿ ತಂತ್ರಾಂಶದಲ್ಲಿ ಕ್ರೋಢೀಕರಿಸಿ ಈಗಾಗಲೇ ಆಸ್ತಿ- ಕಣಜ ತಂತ್ರಾಂಶದಲ್ಲಿ ನಮೂದಿಸಿ ಆಸ್ತಿಗಳ ಕರಡು ನಮೂನೆ-೨/೩ ವಿವರಗಳನ್ನು ಠಿಠಿ://ಛಿಠಿಜಿ.ಚ್ಟಚ್ಞಠಿ.ಜಟ.ಜ್ಞಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಇಲ್ಲಿಯವರೆಗೆ ನಮೂನೆ-೩ ಪಡೆಯದೆ ಇರುವ ಆಸ್ತಿಗಳ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಅರ್ಜಿದಾರರು ಪರಿಶೀಲಿಸಿಕೊಂಡು ನಮೂನೆ-೩ ಪಡೆಯಬಹುದಾಗಿದೆ. ಕರ್ನಾಟಕ- ಒನ್ ಕೇಂದ್ರಗಳಲ್ಲಿ ಸಹ ಇ- ಖಾತಾ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆಸ್ತಿ ಕಣಜದಲ್ಲಿರುವ ಮಾಹಿತಿಯ ಆಧಾರದ ಮೇಲೆ ಕರಡು ಇ- ಖಾತಾವನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರು ಈ ಮಾಹಿತಿಗಳನ್ನು ನೇರವಾಗಿ ವೀಕ್ಷಿಸಬಹುದು. ಈ ಮಾಹಿತಿಗಳ ಬಗ್ಗೆ ತಕರಾರು ಇದ್ದರೆ ಸಾರ್ವಜನಿಕರು ಇ- ಆಸ್ತಿ ತಂತ್ರಾಂಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸುವುದಕ್ಕೆ ಅವಕಾಶ ನೀಡಲಾಗಿದೆ. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಶೀಲಿಸಿ ಅನುಮೋದಿಸಲಾಗುವುದು. ಅಂತಿಮ ಇ- ಖಾತಾವನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲೇ ಕುಳಿತು ಪಡೆದುಕೊಳ್ಳಬಹುದು.


ಸಲ್ಲಿಸಬೇಕಾದ ದಾಖಲೆಗಳು:

ಮಾಲೀಕರ ಭಾವಚಿತ್ರ ಮತ್ತು ಆಧಾರ್, ಆಸ್ತಿ ತೆರಿಗೆ ಎಸ್‌ಎಎಸ್ ಚಲನ್‌ಸಂಖ್ಯೆ, ಸ್ವತ್ತಿನ ಕ್ರಯ/ನೋಂದಾಯಿತ ಪತ್ರ ಸಂಖ್ಯೆ, ವಿದ್ಯುತ್ ಆರ್‌ಆರ್ ಸಂಖ್ಯೆ, ಸ್ವತ್ತಿನ ಛಾಯಾಚಿತ್ರ, ಇಸಿ ನಮೂನೆ ೧೫/೧೬ ಹಾಗೂ ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳನ್ನು ಒದಗಿಸಿ ನಮೂನೆ- ೩ನ್ನು ಅತಿ ಸರಳವಾಗಿ ಪಡೆಯಬಹುದು.

ನಗರದ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿಸುತ್ತಾರೆ. ಅದಕ್ಕೆ ಪೂರಕವಾಗಿ ಇ- ಖಾತೆ (ನಮೂನೆ-೩) ಹೆಚ್ಚಿನ ಮಂದಿ ಪಡೆದುಕೊಳ್ಳುವುದೇ ಇಲ್ಲ. ನಮೂನೆ- ೩ ಪಡೆಯುವುದಕ್ಕೆ ನಗರಸಭೆಗೆ ಅಲೆದಾಡುವ ಸಾರ್ವಜನಿಕರು ಕೊನೆಗೆ ಬೇಸತ್ತು ಅದರಿಂದ ದೂರವೇ ಉಳಿಯುತ್ತಿದ್ದರು. ನಮೂನೆ- ೩ ಪಡೆಯುವುದಕ್ಕೆ ಸಾರ್ವಜನಿಕರು ಪರದಾಡುತ್ತಿರುವುದಕ್ಕೆ ಮುಕ್ತಿ ದೊರಕಿಸಲು ರಾಜ್ಯ ಸರ್ಕಾರ ಆನ್‌ಲೈನ್ ಮೂಲಕವೇ ಇ- ಆಸ್ತಿ ಪಡೆಯುವುದಕ್ಕೆ ಅವಕಾಶವನ್ನು ಮುಕ್ತವಾಗಿ ಕಲ್ಪಿಸಿದೆ. ಇದರಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಆಸ್ತಿ ದಾಖಲೆಗಳು ಸರಿಯಾಗಿದ್ದರೆ ತೆರಿಗೆ ಸಕಾಲದಲ್ಲಿ ಪಾವತಿಯಾಗಿದ್ದರೆ ಇ- ಆಸ್ತಿಯನ್ನು ನಿಗದಿತ ಕಾಲಮಿತಿಯೊಳಗೆ ಪಡೆದುಕೊಳ್ಳಬಹುದಾಗಿದೆ.

----

‘ಇ- ಆಸ್ತಿಯನ್ನು ರಾಜ್ಯ ಸರ್ಕಾರ ಸರಳೀಕರಣಗೊಳಿಸಿದೆ. ಮನೆಯಲ್ಲೇ ಕುಳಿತು ಆಸ್ತಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದರೆ ಸಾಕು. ನಗರಸಭೆಯಲ್ಲಿ ವಿವಿಧ ಹಂತದ ಅಧಿಕಾರಿಗಳು ಅವುಗಳನ್ನು ನಿಗದಿತ ಕಾಲಮಿತಿಯೊಳಗೆ ಪರಿಶೀಲಿಸಿ ದಾಖಲೆಗಳು ಸರಿಯಾಗಿದ್ದರೆ ಇ- ಆಸ್ತಿ (ನಮೂನೆ-೩) ತಕ್ಷಣವೇ ಆಸ್ತಿದಾರರ ಕೈಸೇರಲಿದೆ.’

- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ