ಬೆಳ್ತಂಗಡಿ: ಧರ್ಮಸ್ಥಳ-ಕಲ್ಮಂಜ- ಮುಂಡಾಜೆ ರಸ್ತೆಯ ಮೂರು ಕಡೆಗಳಲ್ಲಿ ಹಾಗೂ ನಿಡಿಗಲ್-ಗುರಿಪಳ್ಳ- ಇಂದಬೆಟ್ಟು ರಸ್ತೆಯ ಒಂದು ಕಡೆ ಸೇತುವೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಯಾವುದೇ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಸ್ಥಳೀಯರ ಸಹಕಾರ ಅತ್ಯಗತ್ಯವಾಗಿದೆ. ಸೇತುವೆಗಳು ನಿರ್ಮಾಣವಾಗುವ ಸ್ಥಳಗಳಲ್ಲಿ ರಸ್ತೆಯನ್ನು ನೇರವಾಗಿ ನಿರ್ಮಿಸುವ ಕುರಿತು ಯೋಜನೆ ರೂಪಿಸಲಾಗಿದೆ. ಮಳೆಗಾಲ ಆರಂಭದೊಳಗೆ ಸೇತುವೆಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಸೇತುವೆಗಳ ನಿರ್ಮಾಣದಿಂದ ಒಂದು ಗ್ರಾಮದಿಂದ ಇನ್ನೊಂದು ಗ್ರಾಮದ ಸಂಪರ್ಕಕ್ಕೆ ಅನುಕೂಲವಾಗಲಿದೆ. ಅಭಿವೃದ್ಧಿ ವೇಳೆ ತಾತ್ಕಾಲಿಕವಾಗಿ ಕಂಡುಬರುವ ಅಡೆತಡೆಗಳಿಗೆ ಸ್ಥಳೀಯರು ಸಹಕರಿಸುವ ಮೂಲಕ ಮುಂದುವರಿಯಬೇಕು ಎಂದರು.
ನಡ ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಜಯ ಶೆಟ್ಟಿ, ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ ಉಪಾಧ್ಯಕ್ಷೆ ಸುಮಲತಾ, ಪಿಡಿಒ ಗಾಯತ್ರಿ, ಪ್ರಮುಖರಾದ ಜಯಂತ ಗೌಡ ಗುರಿಪಳ್ಳ, ಸೌಮ್ಯಲತಾ ಜಯಂತ ಗೌಡ, ಪ್ರಕಾಶ್ ಆಚಾರ್, ಉಷಾ ಪ್ರಸಾದ್, ಚಂದ್ರಹಾಸ ಪಟವರ್ಧನ್, ಕೊರಗಪ್ಪ ನಾಯ್ಕ, ನಾರಾಯಣ ಫಡಕೆ, ಚೆನ್ನಕೇಶವ, ಪ್ರಸನ್ನ ಪರಾಂಜಪೆ, ಶ್ರೀನಿವಾಸ ರಾವ್ ಮತ್ತಿತರರು ಉಪಸ್ಥಿತರಿದ್ದರು. 4 ಕಡೆ ಸೇತುವೆ: ಮುಂಡಾಜೆ-ಧರ್ಮಸ್ಥಳ ರಸ್ತೆಯ ಪಿಲತ್ತಡ್ಕ, ಒಂಜರೆಬೈಲು ಹಾಗೂ ಕೊತ್ತಳಿಗೆಯಲ್ಲಿ 3.75 ಕೋಟಿ ರು. ವೆಚ್ಚದಲ್ಲಿ ಹಾಗೂ ಅಂಬಡಬೆಟ್ಟು ಎಂಬಲ್ಲಿ 2.5 ಕೋಟಿ ರು. ಅನುದಾನದಲ್ಲಿ ನೂತನ ಸೇತುವೆ ನಿರ್ಮಾಣಗೊಳ್ಳಲಿದೆ. ಶಾಸಕರಿಂದ ಸ್ಪಂದನೆ:ಮುಂಡಾಜೆ-ಧರ್ಮಸ್ಥಳ ಹಾಗೂ ನಿಡಿಗಲ್ -ಇಂದಬೆಟ್ಟು ರಸ್ತೆಯ ಸೇತುವೆಗಳ ದುಃಸ್ಥಿತಿ ಕುರಿತು ಹಲವು ಬಾರಿ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. 2024ರ ಮಳೆಗಾಲದಲ್ಲಿ ಈ ಎರಡು ರಸ್ತೆಗಳ ಸೇತುವೆಗಳು ಶಿಥಿಲಗೊಂಡ ಕಾರಣ ಅಂದಿನ ಜಿಲ್ಲಾಧಿಕಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದರು. ಶಾಸಕ ಹರೀಶ್ ಪೂಂಜ ಈ ಪ್ರದೇಶಗಳಲ್ಲಿ ಸೇತುವೆಗಳ ನಿರ್ಮಾಣದ ಅಗತ್ಯತೆ ಕಂಡು ಸರಕಾರದ ಗಮನ ಸೆಳೆದು ಅಗತ್ಯ ಅನುದಾನವನ್ನು ಒದಗಿಸಿದ್ದಾರೆ.......ಚಿತ್ರ ಕ್ಯಾಪ್ಸನ್: ನಿಡಿಗಲ್- ಇಂದಬೆಟ್ಟು ರಸ್ತೆಯ ಅಂಬಡಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.