ನಿವೇಶನ ಹಂಚಿಕೆ ಗೊಂದಲ ಅಂತ್ಯ

KannadaprabhaNewsNetwork |  
Published : Dec 15, 2024, 02:01 AM IST
64 | Kannada Prabha

ಸಾರಾಂಶ

ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ, ಹದಗೆಟ್ಟ ರಸ್ತೆಗಳ ದುರಸ್ತಿ ಮಾಡಿಲ್ಲ, ನಯಾ ಪೈಸೆಯ ಅಭಿವೃದ್ಧಿ ಕೆಲಸ ಆಗಿಲ್ಲ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಹಲವು ವರ್ಷಗಳಿಂದ ಗೊಂದಲದ ಗೂಡಾಗಿದ್ದ ಬಂಗಾರಪ್ಪ ಬಡಾವಣೆಯ ನಿವೇಶನಗಳ ಹಂಚಿಕೆ ಕುರಿತು ಪುರಸಭೆ ವಿಶೇಷ ಸಭೆಯಲ್ಲಿ ನ್ಯಾಯಸಮ್ಮತವಾಗಿ ನಿವೇಶನ ನೀಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಅಧ್ಯಕ್ಷೆ ವಸಂತ ಶ್ರೀಕಂಠ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಸಂತಾಪ ಸೂಚಿಸಲಾಯಿತು.

ನಂತರ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಮಹಾಯೋಜನೆ ಅಂತಿಮ ನಕ್ಷೆಗೆ ಅನುಮೋದನೆ ಬಗ್ಗೆ ಚರ್ಚೆ ನಡೆದು, ಯಾವುದೇ ವಿರೋಧವಿಲ್ಲದೆ ಸದಸ್ಯರು ಅನುಮೋದನೆಗೆ ಒಪ್ಪಿಗೆ ಸೂಚಿಸಿದರು.

ಬಂಗಾರಪ್ಪ ಬಡಾವಣೆ ನಿವೇಶನಗಳ ವಿಷಯ ಚರ್ಚೆಗೆ ಬರುತ್ತಿದ್ದಂತೆ ಕೆರಳಿದ ಹಲವು ಸದಸ್ಯರು ಎಷ್ಟು ನಿವೇಶನಗಳಿವೆ, ಅವೆಲ್ಲದರ ಅಳತೆಯಾಗಿದೆಯೇ ಎಂದು ಆರ್ಐ ಅಶೋಕ್ ಅವರನ್ನು ಪ್ರಶ್ನಿಸಿದ ವೇಳೆ ಅವರು ಸಮರ್ಪಕ ಉತ್ತರ ನೀಡದ ಹಿನ್ನೆಲೆ ಸರಿಯಾದ ಮಾಹಿತಿ ಪಡೆಯದೇ ಸಭೆಗೆ ಏಕೆ ಬಂದಿದ್ದೀರಾ ಎಂದು ಅಧಿಕಾರಿ ಮೇಲೆ ಗರಂ ಆದರು.

ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ, ಹದಗೆಟ್ಟ ರಸ್ತೆಗಳ ದುರಸ್ತಿ ಮಾಡಿಲ್ಲ, ನಯಾ ಪೈಸೆಯ ಅಭಿವೃದ್ಧಿ ಕೆಲಸ ಆಗಿಲ್ಲ. ಹೀಗಿರುವಾಗ ಬಂಗಾರಪ್ಪ ಬಡಾವಣೆ ವಿಷಯವನ್ನು ಸಭೆಯಲ್ಲಿ ಚರ್ಚೆಗೆ ತಂದಿರುವುದು ಸರಿಯಲ್ಲ. ಪಟ್ಟಣದ ರಸ್ತೆಗಳು ಯಾವುದೇ ಅಭಿವೃದ್ಧಿ ಕಂಡಿಲ್ಲ. ಹಾಗಾಗಿ‌, ಮೊದಲು ಅಭಿವೃದ್ಧಿ ಕಾರ್ಯಕ್ಕೆ ಮನ್ನಣೆ ನೀಡಬೇಕೆಂದರು.

ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಬಂಗಾರಪ್ಪ ಬಡಾವಣೆಯ ದಾಖಲಾತಿ ಸಿಗದ ಹಿನ್ನೆಲೆಯಲ್ಲಿ ಖಾತೆ ಮಾಡಲಾಗುತ್ತಿಲ್ಲ. ಪುರಸಭೆ ವ್ಯಾಪ್ತಿಗೆ ಬಡಾವಣೆ ಸೇರಿದ ನಂತರ 2015ರಿಂದ ಕಂದಾಯವನ್ನು ಪಡೆಯುತ್ತಿಲ್ಲ ಹಾಗೂ ಖಾತೆಯನ್ನು ಮಾಡಿಕೊಟ್ಟಿಲ್ಲ ಎಂದು ತಿಳಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪರ, ವಿರೋಧ ಚರ್ಚೆ ನಡೆಯಿತು. ನಂತರ ನಿವೇಶನ ಹಂಚಿಕೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಮಟನ್ ಮಾರ್ಕೆಟ್ ಸ್ಥಳಾಂತರ ಮಾಡುವ ಕುರಿತಂತೆ ನಡೆದ ಚರ್ಚೆಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ, ಪುರಸಭೆಯ ತರಕಾರಿ ಮಾರುಕಟ್ಟೆ ಮಳಿಗೆಯನ್ನು ನವೀಕರಣ ಮಾಡುವ ಜತೆಗೆ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಮಾಂಸ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮಾಜಿ ಅಧ್ಯಕ್ಷ ಎನ್. ಸೋಮು ಮಾತನಾಡಿ, ಟೌನ್ ಪ್ಲಾನಿಂಗ್ ಇಲ್ಲದ ಹೊಸ ಬಡಾವಣೆಗಳಿಗೆ ಅನುಮೋದನೆ ನೀಡದಂತೆ ಒತ್ತಾಯಿಸಿದರು.

ಸದಸ್ಯ ಅರ್ಜುನ್ ಮಾತನಾಡಿ, ಪುರಸಭೆ ನಿರ್ಮಿಸಿರುವ 101 ಮಳಿಗೆಗಳು ಯಾರ ಯಾರ ಹೆಸರಿನಲ್ಲಿವೆ ಎಂಬ ಬಗ್ಗೆ ಗೊಂದಲ ಇದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗೆ ತಿಳಿಸಿದರು.

ಉಪಾಧ್ಯಕ್ಷ ರಾಜೇಶ್ವರಿ ರಾಘವೇಂದ್ರ, ಸದಸ್ಯರಾದ ಮಂಜು, ಸಿ. ಪ್ರಕಾಶ್, ಎಲ್. ಮಂಜುನಾಥ್, ಅಹಮ್ಮದ್ ಸಯ್ಯದ್, ನಾಗರಾಜು, ಎಸ್.ಕೆ. ಕಿರಣ್, ವಿ. ಮೋಹನ್, ಸಿದ್ದು, ಪ್ರೇಮಾಮರಯ್ಯ, ನಾಗರತ್ನ ಮಾದೇಶ್, ಬಿ.ಬೇಬಿ ಹೇಮಂತ್, ಜಿ. ರೂಪಶ್ರೀ, ಪರಮೇಶ್, ಮಹಾದೇವಿ, ಮಹದೇವಮ್ಮ, ಪಿ. ಶೋಭರಾಣಿ, ಆರ್. ತೇಜಸ್ವಿನಿ, ರೂಪ, ವ್ಯವಸ್ಥಾಪಕ ಮಹೇಂದ್ರ, ಲೆಕ್ಕಾಧಿಕಾರಿ ವಿನಯ್ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ