ಅಗತ್ಯ ಸೌಕರ್ಯ ಕಲ್ಪಿಸುವಂತೆ ತಾಕೀತು

KannadaprabhaNewsNetwork | Published : Oct 19, 2023 12:45 AM

ಸಾರಾಂಶ

ಸ್ಥಳೀಯ ತಾಲೂಕಾ ಕ್ರೀಡಾಂಗಣಕ್ಕೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ರಘುನಂದನಮೂರ್ತಿ ಸಹಾಯಕ ಯುವಜನ ನಿರ್ದೇಶಕರಿಗೆ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಸ್ಥಳೀಯ ತಾಲೂಕಾ ಕ್ರೀಡಾಂಗಣಕ್ಕೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ರಘುನಂದನಮೂರ್ತಿ ಸಹಾಯಕ ಯುವಜನ ನಿರ್ದೇಶಕರಿಗೆ ತಾಕೀತು ಮಾಡಿದರು.

ಪಟ್ಟಣದ ಎಸ್‌ಜೆಜೆಎಂ ತಾಲೂಕಾ ಕ್ರೀಡಾಂಗಣ ವೀಕ್ಷಿಸಿ ಮಾತನಾಡಿದ ಅವರು, ಇಲ್ಲಿನ ಕ್ರೀಡಾಪಟುಗಳು ಕಬಡ್ಡಿ, ಖೋಖೋ, ಅಥ್ಲೆಟಿಕ್ಸ್, ಕರಾಟೆ ಸೇರಿದಂತೆ ಇತರ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದು ಜಿಲ್ಲೆಯಲ್ಲಿಯೇ ಅತ್ಯುತ್ತಮ ತಾಲೂಕಾ ಕ್ರೀಡಾಂಗಣವೆಂಬ ಖ್ಯಾತಿ ಪಡೆದಿದೆ. ಹೀಗಿದ್ದಾಗ್ಯೂ ಕ್ರೀಡಾಪಟುಗಳು ಮತ್ತು ಸಾರ್ವಜನಿಕರಿಗೆ ಇಂದಿಗೂ ಕುಡಿಯುವ ನೀರು ಸೇರಿದಂತೆ ಶೌಚಾಲಯದ ಅಗತ್ಯತೆ ಕುರಿತು ಗಮನಹರಿಸಿಲ್ಲವೇಕೆ? ಎಂದು ಪ್ರಶ್ನಿಸಿದ ಅವರು, ಕ್ರೀಡಾಪಟುಗಳು ಮತ್ತು ಸಾರ್ವಜನಿಕರಿಂದ ದೂರು ಕೇಳಿ ಬಂದಾಗ್ಯೂ ಸ್ಪಂದಿಸಿಲ್ಲವೇಕೆ..? ಕೂಡಲೇ ಪೈಪ್‌ಲೈನ್ ಸೇರಿದಂತೆ ಸುಮಾರು 6 ಸಾವಿರ ಲೀ. ನೀರು ಸಂಗ್ರಹಣಾ ಸಾಮರ್ಥ್ಯಕ್ಕೆ ಹೆಚ್ಚಿಸುವ ಮೂಲಕ ಶೌಚಾಲಯ ಮತ್ತು ಕುಡಿಯುವ ನೀರು ನಿರ್ವಹಣೆ ಮಾಡುವಂತೆ ಸೂಚಿಸಿದರು.

ಕ್ರೀಡಾಂಗಣಗಳ ನಿರ್ವಹಣೆಗೆ ಮೀಸಲಿಟ್ಟ ಹಣದ ಸದ್ಭಳಕೆಯಾಗಬೇಕು, ಆದರೆ ಇಲ್ಲಿಯವರೆಗೂ ಇಲ್ಲಿನ ಪುರಸಭೆ ಸಹಕಾರದಿಂದ ಕ್ರೀಡಾಂಗಣದಲ್ಲಿನ ಎಲ್ಲ ಸೌಕರ್ಯಗಳನ್ನು ಮಾಡಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ಹಾಗಾದರೆ ನಿರ್ವಹಣೆಗೆ ಮೀಸಲಿಟ್ಟು ಹಣ ಎಲ್ಲಿದೆ, ಯಾವುದೇ ನೆಪ ಹೇಳದೇ ಮೂಲ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.

ಕ್ರೀಡಾಂಗಣದ ತುಂಬೆಲ್ಲಾ ಕ್ರೀಡಾಪಟುಗಳಿರುತ್ತಾರೆ. ಆದರೆ, ಕಬಡ್ಡಿ, ಖೋಖೋ, ವಾಲಿಬಾಲ್, ಹೈಜಂಪ್, ಲಾಂಗಜಂಪ್ ರನ್ನಿಂಗ್ ಟ್ರ್ಯಾಕ್ ಇನ್ನಿತರ ಕ್ರೀಡೆಗಳಿಗೆ ಅಂಕಣವಿಲ್ಲದಂತಾಗಿದೆ. ಹೀಗಾಗಿ ಬಹುತೇಕ ಕ್ರೀಡಾಪಟುಗಳು ನಿತ್ಯವೂ ಅಂಕಣಗಳ ನಿರ್ಮಾಣಕ್ಕೆ ಮನವಿ ಸಲ್ಲಿಸುತ್ತಿರುವುದಾಗಿ ಕ್ರೀಡಾಧಿಕಾರಿ ಎಚ್.ಬಿ. ದಾಸರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ತಾಲೂಕಾ ಕ್ರೀಡಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ₹2.40 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಇಲ್ಲಿಯವರೆಗೂ ಕೇವಲ ₹80 ಲಕ್ಷ ಅನುದಾನ ಬಿಡುಗಡೆಯಾಗಿದೆ. ಹಣವಿಲ್ಲದೇ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ, ಅವಶ್ಯವಿರುವ ಹಣವನ್ನು ಬಿಡುಗಡೆ ಮಾಡಿಸುವಂತೆ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸರ್ಕಾರ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಅನುದಾನ ಬಿಡುಗಡೆಗೆ ಕ್ರಮ ಜರುಗಿಸುವ ಭರವಸೆ ನೀಡಿದರು.ಕ್ರೀಡಾಂಗಣದ ಎಲ್ಲಾ ಗೇಟ್‌ಗಳನ್ನು ದುರಸ್ತಿ ಮಾಡಿ ಅನಗತ್ಯ ವಾಹನ ಸಂಚಾರ ಹಾಗೂ ಸಂಬಂಧವಿರದ ಜನ ಮತ್ತು ಜಾನುವಾರುಗಳ ಪ್ರವೇಶಕ್ಕೆ ಕಡಿವಾಣ ಹಾಕಬೇಕು. ಪ್ರತಿನಿತ್ಯ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಅಕ್ಷಯ್ ಶ್ರೀಧರ, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಸಮಾಜ ಕಲ್ಯಾಣಾಧಿಕಾರಿ ದೊಡ್ಡಬಸವರಾಜಪ್ಪ, ಅಧೀಕ್ಷಕ ಹನುಮಂತ ಲಮಾಣಿ ಸೇರಿದಂತೆ ಇತರರಿದ್ದರು.

Share this article