)
-ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಆಯೋಜನೆ
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಮುಖ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನಗಳಲ್ಲಿ ಒಂದಾದ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ 16ನೇ ಆವೃತ್ತಿ 2027ರ ಫೆ. 8 ರಿಂದ 12 ರವರೆಗೆ ನಗರದ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಜರುಗಲಿದೆ.
ಐದು ದಿನಗಳ ಬೃಹತ್ ಕಾರ್ಯಕ್ರಮದಲ್ಲಿ ಪ್ರದರ್ಶಕರು ಮತ್ತು ವೀಕ್ಷಕರ ಅನುಕೂಲಕ್ಕಾಗಿ ರಕ್ಷಣಾ ಸಚಿವಾಲಯ ಏರೋ ಇಂಡಿಯಾ 2027 ಎಂಬ ಪ್ರತ್ಯೇಕ ವೆಬ್ ಪೋರ್ಟಲ್ ಪ್ರಾರಂಭಿಸಿದೆ. ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ನೋಂದಣಿ ಮತ್ತು ಪ್ರದರ್ಶನ ಸ್ಥಳಾವಕಾಶದ ಬುಕಿಂಗ್ ಗುರುವಾರ ಆರಂಭವಾಗಿದೆ. ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯು ಆಯೋಜಿಸಿರವ ಐದು ದಿನಗಳ ವೈಮಾನಿಕ ಪ್ರದರ್ಶನದಲ್ಲಿ ಜಾಗತಿಕ ಮಟ್ಟದ ಬಾಹ್ಯಾಕಾಶ ಮತ್ತು ರಕ್ಷಣಾ ಕಂಪನಿಗಳು, ನೀತಿ ನಿರೂಪಕರು, ತಂತ್ರಜ್ಞಾನ ತಜ್ಞರು, ನಾವೀನ್ಯತೆಗಾರರು, ಉದ್ಯಮ ಪ್ರತಿನಿಧಿಗಳು ಹಾಗೂ ರಕ್ಷಣಾ ಸಿಬ್ಬಂದಿ ಭಾಗವಹಿಸಲಿದ್ದಾರೆ.ಈ ಐದು ದಿನಗಳ ಪ್ರದರ್ಶನದ ವೇಳೆ ಭಾರತೀಯ ವಾಯುಪಡೆ ಹಾಗೂ ಅಂತಾರಾಷ್ಟ್ರೀಯ ವೈಮಾನಿಕ ತಂಡಗಳು ರೋಮಾಂಚಕ ವೈಮಾನಿಕ ಪ್ರದರ್ಶನಗಳನ್ನು ನೀಡಲಿವೆ.