ಬೆಂಗಳೂರು : 3.5 ವರ್ಷ ಬಳಿಕ ಪೀಣ್ಯ ಫ್ಲೈ ಓವರ್‌ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತ

KannadaprabhaNewsNetwork |  
Published : Jul 30, 2024, 01:39 AM ISTUpdated : Jul 30, 2024, 08:25 AM IST
ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಮೇಲೆ ಸೋಮವಾರ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. | Kannada Prabha

ಸಾರಾಂಶ

ಮೂರೂವರೆ ವರ್ಷದ ಬಳಿಕ ಕೊನೆಗೂ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಸೋಮವಾರ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದಾಗಿ ಸಹಸ್ರಾರು ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

 ಬೆಂಗಳೂರು : ಮೂರೂವರೆ ವರ್ಷದ ಬಳಿಕ ಕೊನೆಗೂ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಸೋಮವಾರ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದಾಗಿ ಸಹಸ್ರಾರು ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ವಾರದಲ್ಲಿ ಆರು ದಿನ ಭಾರೀ ವಾಹನಗಳು ಸೇರಿದಂತೆ ಎಲ್ಲ ಬಗೆಯ ವಾಹನಗಳಿಗೆ ಫ್ಲೈ ಓವರ್‌ ಮುಕ್ತವಾಗಲಿದೆ. ಪಿಲ್ಲರ್‌ಗಳ ನಡುವಿನ ಕೇಬಲ್‌ಗಳಿಗೆ ಸಿಮೆಂಟ್‌ ಕಾಂಕ್ರೀಟ್‌ ಹಾಕಿ ಭದ್ರಪಡಿಸಬೇಕಿದೆ. ಆದ್ದರಿಂದ ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6ರವರೆಗೂ ಮಾತ್ರ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ.

ಎಂಟನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103 ನೇ ಪಿಲ್ಲರ್‌ ನಡುವೆ ಇರುವ ಮೂರು ಕೇಬಲ್‌ಗಳು ಭಾಗಿದ್ದರಿಂದ 2021 ಡಿಸೆಂಬರ್‌ 25 ರಂದು ಮೇಲ್ಸೇತುವೆಯ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಪರಿಶೀಲನೆ ನಡೆಸಿ ಭಾರೀ ವಾಹನಗಳು ಸಂಚರಿಸಿದ್ದರಿಂದಲೇ ಕೇಬಲ್‌ಗಳು ಬಾಗಿವೆ ಎಂದು ವರದಿ ನೀಡಿದ್ದರು.

2022 ರ ಫೆಬ್ರವರಿ 16ರಿಂದ ಲಘು ವಾಹನಗಳ ಸಂಚಾಕ್ಕಷ್ಟೇ ಅನುಮತಿ ನೀಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದವರು ಮೇಲ್ಸೇತುವೆಯ ಕ್ಷಮತೆಯನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಿದ್ದರು. ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಾರದು ಎಂದು ತಜ್ಞರು ವರದಿ ನೀಡಿದ್ದರಿಂದ ಹಗಲಿನಲ್ಲಿ ಮಾತ್ರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಮೇಲ್ಸೇತುವೆಯು 120 ಪಿಲ್ಲರ್‌ಗಳನ್ನು ಹೊಂದಿದ್ದು ಎರಡು ಪಿಲ್ಲರ್‌ಗಳ ನಡುವೆ ತಲಾ 10 ರಂತೆ 1200 ಕೇಬಲ್‌ಗಳಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ ಎರಡು ಪಿಲ್ಲರ್‌ ಮಡುವೆ ಹೊಸದಾಗಿ ಎರಡು ಕೇಬಲ್‌ಗಳನ್ನು ಅಳವಡಿಸಲು ಅವಕಾಶವೂ ಇತ್ತು. ಮೊದಲ ಹಂತದಲ್ಲಿ 120 ಪಿಲ್ಲರ್‌ ನಡುವೆ 240 ಕೇಬಲ್‌ಗಳನ್ನು ಅಳವಡಿಸಿ ಮೇಲ್ಸೇತುವೆಯನ್ನು ಭದ್ರಪಡಿಸಲಾಗಿತ್ತು.

ಕಾಂಕ್ರೀಟ್‌ ಹಾಕುವ ಕಾರ್ಯ ಬಾಕಿ

ಲೋಡ್‌ ಟೆಸ್ಟಿಂಗ್‌ ನಡೆಸಿ ಸೇತುವೆ ಸದೃಢವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಿತ್ತು. ಎರಡನೇ ಹಂತದಲ್ಲಿ 120 ಪಿಲ್ಲರ್‌ಗಳ ನಡುವಿನ 1200 ಕೇಬಲ್‌ ಬದಲಾಯಿಸುವ ಕಾರ್ಯ ಆರಂಭವಾಗಿದೆ. ಕೇಬಲ್‌ ಅಳವಡಿಸುವಾಗ ಸಿಮೆಂಟ್‌ ಕಾಂಕ್ರೀಟ್‌ ಹಾಕಿ ಭದ್ರಪಡಿಸಬೇಕಿದ್ದು, ಈ ಸಮಯದಲ್ಲಿ ಮೇಲ್ಸೇತುವೆ ಮೇಲೆ ವಾಹನ ಸಂಚಾರ ಇರಬಾರದು ಎಂದು ತಜ್ಞರು ಸೂಚಿಸಿದ್ದರು.

ಆದ್ದರಿಂದ ಪ್ರತಿ ಶುಕ್ರವಾರ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪ್ರಸಕ್ತ ಮೇಲ್ಸೇತುವೆ ಮೇಲೆ ರಾತ್ರಿ ಹೊತ್ತಿನಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಎಲ್ಲ ವಾಹನಗಳೂ ಕೆಳಗಿನ ರಸ್ತೆಯಲ್ಲೇ ಸಂಚರಿಸುತ್ತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಜೊತೆಗೆ ಭಾರೀ ಪ್ರಮಾಣದಲ್ಲಿ ಧೂಳು ಏಳುತ್ತಿತ್ತು. ಇದರಿಂದ ಸವಾರರು ಹೈರಾಣಾಗಿದ್ದರು. ಇದಕ್ಕೆ ಇದೀಗ ಮುಕ್ತಿ ಸಿಕ್ಕಂತಾಗಿದೆ.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ