ಶಂಕರಾಚಾರ್ಯರ ವಿಗ್ರಹ ಕೆತ್ತನೆ ನಂತರ ತನ್ನ ಜೀವನವೇ ಬದಲಾಯಿತು: ಶಿಲ್ಪಿ ಅರುಣ್ ಯೋಗಿರಾಜ್

KannadaprabhaNewsNetwork | Published : Apr 8, 2024 1:01 AM

ಸಾರಾಂಶ

ರಾಮಲಲ್ಲಾನ ವಿಗ್ರಹದ ಕೆತ್ತನೆ ಆದೇಶ ಬರುವ ಮುನ್ನ ಶಂಕರಾಚಾರ್ಯರ ಪ್ರತಿಮೆ ಕೆತ್ತನೆ ಕೆಲಸ ಮಾಡಿದ್ದೆ. ಶಂಕರಾಚಾರ್ಯರ ವಿಗ್ರಹ ಕೆತ್ತನೆ ನಂತರ ತನ್ನ ಜೀವನವೇ ಬದಲಾಯಿತು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಕೆತ್ತನೆ‌ ಸಾರ್ವಜನಿಕರಿಗೆ ಮೆಚ್ಚಿಗೆ ಆಗಿದೆಯೇ ಪ್ರಶ್ನೆಗೆ ಉತ್ತರ ಹುಡುಕುತ್ತಾ ಇದ್ದೇನೆ ಎಂದು ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ಮಹಾಸಭಾ, ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘ, ಶ್ರೀಕಾಳಿಕಾ‌ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ, ಹರಕೆರೆ ಕಾಳಿಕಾಂಬ ದೇವಸ್ಥಾನ ಸಮಿತಿ ಹಾಗೂ ಜಿಲ್ಲಾ ವಿವಿಧ ಸಂಘ‌ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ‌ ಅವರು ಮಾತನಾಡಿ, ಕುಲಕಸುಬು ಕೆತ್ತನೆ ಎಂದರೆ ನನಗೆ ಬಹಳ ಇಷ್ಟ. ಶಿಲ್ಪಿ ಕೆತ್ತಿದರೆ ಸಾಲದು ಅದು ಸಾರ್ವಜನಿಕರು ಮೆಚ್ಚುಗೆಯಾಗಬೇಕು ಎಂದರು.‌

ರಾಮಲಲ್ಲಾನ ವಿಗ್ರಹದ ಕೆತ್ತನೆ ಆದೇಶ ಬರುವ ಮುನ್ನ ಶಂಕರಾಚಾರ್ಯರ ಪ್ರತಿಮೆ ಕೆತ್ತನೆ ಕೆಲಸ ಮಾಡಿದ್ದೆ. ಶಂಕರಾಚಾರ್ಯರ ವಿಗ್ರಹ ಕೆತ್ತನೆ ನಂತರ ತನ್ನ ಜೀವನವೇ ಬದಲಾಯಿತು. ಭಗವಂತ ಅವಕಾಶ ಕಲ್ಲಿಸಿಕೊಡ್ತಾನೆ. ಅದರ ಸದುಪಯೋಗ ಹೇಗೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಡೆಯುತ್ತದೆ ಎಂದು ತಿಳಿಸಿದರು.

ಶಂಕರಾಚಾರ್ಯರ ಪ್ರತಿಮೆ ಕೆತ್ತನೆ ಕೆತ್ತುವ ಮೂಲಕ ದಕ್ಷಿಣದಿಂದ ಉತ್ತರಕ್ಕೆ ನಮ್ಮ ಕಲೆ ಪರಿಚಯವಾಯಿತು. ಕಷ್ಟದ ನಂತರ ಸುಖ ಇರುತ್ತದೆ. ಎಷ್ಟೆ ಕಷ್ಟ ಎನಿಸಿದರು ಮಾಡುವ ಕರ್ಮ ಬಿಡಬಾರದು ಕಷ್ಟದ ನಂತರಬರುವುದೆ ಸುಖ ಅದಕ್ಕೆ ನಾನೇ ಉದಾಹರಣೆ ಎಂದರು.

ನೂರು ಜನರನ್ನ ಮೆಚ್ಚಿಸುವುದು ಕಷ್ಟ ಆದರೆ 140 ಕೋಟಿ ಜನರಿಗೆ ರಾಮಲಲ್ಲಾನ ಮೂರ್ತಿ ಮೆಚ್ಚಿಗೆ ಆಗುತ್ತಾ ಎಂಬ ಆತಂಕ ಮತ್ತು ಕುತೂಹಲವಿತ್ತು. ಆದರೆ ದೇವರ ಕೃಪೆ ಜನ ಮೆಚ್ಚಿಕೊಂಡರು ಎಂದರು.

ಸನ್ಮಾನ ಸಿಗಲಿದೆ ಎಂಬ ಕಾರಣಕ್ಕೆ ಬಾಲರಾಮನ ವಿಗ್ರಹ ಕೆತ್ತನೆ‌ಮಾಡಲಿಲ್ಲ. ಆದರೆ, ಕೆತ್ತನೆಯ ಮೂಲಕ ಜನ ನನನ್ನ ಮೆಚ್ಚಿಕೊಂಡಿದ್ದಾರೆ. 20 ವರ್ಷದಿಂದ ಕೆತ್ತನೆ ಮಾಡಿಕೊಂಡು ಬಂದಿರುವೆ. ಆದರೆ, ನಮ್ಮಪ್ಪ ನನ್ನ ಕೆಲಸವನ್ನ ಮೆಚ್ಚಿಕೊಂಡಿರಲಿಲ್ಲ. ಜನ ನಿನ್ನ ತಾತ ಹಾಗೆ ಕೆತ್ತನೆ ಮಾಡುತ್ತೀಯಾ ಎಂದರೂ ತಂದೆ ಒಪ್ಪಿರಲಿಲ್ಲ. ಆದರೆ, ರಾಮಲಲ್ಲನ ವಿಗ್ರಹ ಅನಾವರಣಗೊಂಡಾಗ ಅಪ್ಪ ಒಪ್ಪಿಕೊಂಡರು. ತಾತನ ಹೆಸರು ಉಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹೆಂಡತಿ ಮತ್ತು ಕುಟುಂಬದ ಜೊತೆ ಕಳೆಯುವ ಸಮಯವನ್ನ ಕಲ್ಲಿನೊಂದಿಗೆ ಕಳೆದಿರುವೆ. ಕೆಲಸಕ್ಕಾಗಿ ಕಾಯ್ತಾ ಇದ್ದೆ. ಕೆಲವರು ಡ್ರಾಯಿಂಗ್ ಎಲ್ಲ ಸ್ವೀಕರಿಸಿ ಬೇರೆಯವರು ಕಡಿಮೆ ದರ ಮಾಡ್ತಾರೆ ಎಂದಾಗ ನೋವಾಗುತ್ತಿತ್ತು. ಈ ಮಧ್ಯೆ ಶಂಕರಾಚಾರ್ಯರ ವಿಗ್ರಹ ಕೆತ್ತುವ ಕೆಲಸ ಸಿಕ್ಕಿತು. ದಿನಕ್ಕೆ 10 ಗಂಟೆಗಳ ಕಾಲ ಅಧ್ಯಾಯನ ಮಾಡುತ್ತಿದ್ದೆ. ನಂತರ ಕೆತ್ತನೆಯಲ್ಲಿ ಕಳೆಯುತ್ತಿದ್ದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಅರೆಮಾದನಹಳ್ಳಿಯ ಶಿವಸುಜ್ಞಾನ ಸ್ವಾಮೀಜಿ, ಚನ್ನಗಿರಿ ತಾಲೂಕಿನ ವಡ್ನಾಳ್ ಮಟದ ಶಂಕರ ಆತ್ಮಾನಂದ ಸರಸ್ವತಿ ಮಹಾಸ್ವಾಮಿಜಿ ದಿವ್ಯಸಾನಿಧ್ಯ ವಹಿಸಿದ್ದರು. ವಿಶ್ವಕರ್ಮ ಮಹಾಸಭಾದ ನಿರಂಜನ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಗೆ ದೇವಶಿಲ್ಪಿ ಬಿರುದು ನೀಡಿ ಗೌರವಿಸಲಾಯಿತು.

Share this article