ಕನ್ನಡಪ್ರಭ ವಾರ್ತೆ ಮಂಗಳೂರು
ಮೂರ್ನಾಲ್ಕು ವರ್ಷಗಳ ಬಳಿಕ ಮತ್ತೆ ಕರಾವಳಿ ಉತ್ಸವ ಆರಂಭವಾಗಿದ್ದು, ಡಿ.21ರಿಂದ ಜ.19ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕರಾವಳಿಯ ಸಂಸ್ಕೃತಿ ಅನಾವರಣ, ಸಂಪ್ರದಾಯಗಳ ಪ್ರದರ್ಶನ, ಆಹಾರ ಖಾದ್ಯಗಳ ಪರಿಚಯ, ವಿವಿಧ ವಿನೋದಾವಳಿಗಳೊಂದಿಗೆ ಸಾಂಸ್ಕೃತಿಕ ಪರಂಪರೆಯ ಆಸ್ವಾದನೆ...ಇವೆಲ್ಲವೂ ಮತ್ತೊಮ್ಮೆ ಜನತೆಗೆ ಲಭ್ಯವಾಗಲಿದೆ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಬೆಳಗಾವಿಯಲ್ಲಿ ಅಧಿವೇಶನಕ್ಕೆ ತೆರಳಿರುವ ಸ್ಪೀಕರ್ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಜಿಲ್ಲೆಯ ಶಾಸಕರು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಲೋಗೊ ಅನಾವರಣಗೊಳಿಸಿದರು.21ರಂದು ಉದ್ಘಾಟನೆ:ಡಿ.21ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 4 ಗಂಟೆಗೆ ಕೊಡಿಯಾಲ್ ಬೈಲ್‌ನ ಕೆನರಾ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಕಲಾವಿದರ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸಂಜೆ 5.30ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬಳಿಕ ಡಿ.21 ಮತ್ತು 22ರಂದು ವಿದ್ಯುದ್ದೀಪಗಳಿಂದ ಅಲಂಕೃತವಾದ ವೇದಿಕೆಯಲ್ಲಿ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.ವಸ್ತು ಪ್ರದರ್ಶನ:
ವಸ್ತು ಪ್ರದರ್ಶನವು ‘ಜಾಗತಿಕ ಹಳ್ಳಿ’ ಎಂಬ ಧೈಯದೊಂದಿಗೆ ಕರಾವಳಿಯ ನೈಜ ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಉಡುಗೆ ತೊಡುಗೆ ಮತ್ತು ಖಾದ್ಯಗಳನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ವಿವಿಧ ಜನಾಂಗದ ರೀತಿ ರಿವಾಜುಗಳನ್ನು ಪರಿಚಯಿಸಲು ಪ್ರತ್ಯೇಕ ವಿಭಾಗಗಳ ವ್ಯವಸ್ಥೆ ಮಾಡಲಾಗುತ್ತದೆ. ಕೈಮಗ್ಗ, ನೇಕಾರ, ಕುಂಬಾರ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಇನ್ನಿತರ ಕೌಶಲ್ಯಗಳ ಅನಾವರಣವಾಗಲಿದೆ. ಆದಿವಾಸಿ ಮತ್ತು ಗುಡ್ಡಗಾಡು ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳ ಸಹ ಸಾರ್ವಜನಿಕರಿಗೆ ಲಭ್ಯವಾಗಲಿದೆ.ಕರಾವಳಿಯ ವೈವಿಧ್ಯಮಯ ಖಾದ್ಯಗಳ ತಯಾರಿಕೆ, ಪ್ರದರ್ಶನ ಮತ್ತು ಮಾರಾಟಗಳನ್ನು ಒಂದೇ ಸೂರಿನಡಿ ಏರ್ಪಡಿಸಲಾಗಿದೆ. ವಾಣಿಜ್ಯ ಮಳಿಗೆ: ಆಹಾರ ಉತ್ಪನ್ನಗಳು ಮಾತ್ರವಲ್ಲದೆ ಉಡುಗೆ ತೊಡುಗೆಗಳು ಮತ್ತು ವಿವಿಧ ವಾಣಿಜ್ಯ ಮಳಿಗೆಗಳಿಗೆ ಕರಾವಳಿ ಉತ್ಸವ ಮೈದಾನದಲ್ಲಿ ಸಾಕಷ್ಟು ಸ್ಥಳಾವಕಾಶ ಒದಗಿಸಲಾಗಿದೆ. ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ವಿವಿಧ ವಿನೋದಾವಳಿಗಳು ಎಲ್ಲ ವಯಸ್ಸಿನವರೆಗೂ ಮನೋರಂಜನೆ ನೀಡಲಿವೆ.
28,29ರಂದು ಬೀಚ್ ಉತ್ಸವ:ಡಿ.28 ಮತ್ತು 29ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಬೀಚ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 6 ಗಂಟೆಗೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಂಜೆ 6.30ರಿಂದ ವಿವಿಧ ತಂಡಗಳ ನೃತ್ಯ ಪ್ರದರ್ಶನಗಳು ನಡೆಯಲಿದ್ದು, ರಘು ದೀಕ್ಷಿತ್ ಹಾಗೂ ತಂಡದ ಕಾರ್ಯಕ್ರಮ 8 ಗಂಟೆಗೆ ಪ್ರಾರಂಭವಾಗಲಿದೆ.
ಡಿ.29ರಂದು ಬೆಳಗ್ಗೆ 5:30ಕ್ಕೆ ಯೋಗ, 6:30ಕ್ಕೆ ಜುಂಬ (ಏರೋನಾಟಿಕ್ಸ್) ಮತ್ತು 9 ಗಂಟೆಯಿಂದ ಬೀಚ್ ಸ್ಪೋರ್ಟ್ಸ್ ಮುಂತಾದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 5:30ಕ್ಕೆ ಆನ್‌ಲೈನ್ ಸ್ಪರ್ಧೆ ಮೂಲಕ ನೃತ್ಯ ಪ್ರದರ್ಶನ, ರಾತ್ರಿ 8 ಗಂಟೆಗೆ ಶೋರ್ ಬ್ಯಾಂಡ್ ಪ್ರದರ್ಶನವಿದೆ.ದ.ಕ. ಜಿಲ್ಲಾಡಳಿತದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ, ವಿವಿಧ ಅಕಾಡೆಮಿಗಳ ಸಹಕಾರದಿಂದ ಆಕರ್ಷಕವಾಗಿ ಕರಾವಳಿ ಉತ್ಸವ ನಡೆಸಲು ಸರ್ವಸಿದ್ಧತೆ ನಡೆಸಲಾಗಿದೆ. ಜನರು ಇದರಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮನವಿ ಮಾಡಿದರು.
ಪ್ರಥಮ ಬಾರಿಗೆ ರೊಬೊಟಿಕ್ ಬಟರ್‌ಫ್ಲೈ ಪಾರ್ಕ್ ಆಕರ್ಷಣೆಕರಾವಳಿ ಉತ್ಸವದ ವಿಶೇಷ ಆಕರ್ಷಣೆಯಾಗಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ನಡೆಯಲಿದೆ. ಡಿ.22ರಂದು ನಗರದ ಕದ್ರಿ ಪಾರ್ಕ್‌ನಲ್ಲಿ ಸಂಜೆ 4 ಗಂಟೆಗೆ ರೊಬೊಟಿಕ್ ಬಟರ್ ಫ್ಲೈ ಪಾರ್ಕ್ ಉದ್ಘಾಟನೆ ನಡೆಯಲಿದ್ದು, ಕರಾವಳಿ ಉತ್ಸವದುದ್ದಕ್ಕೂ ಈ ಪ್ರದರ್ಶನ ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ ವಿಶೇಷ ಆಕರ್ಷಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.ವಿಶೇಷ ಕಾರ್ಯಕ್ರಮಗಳು
- ಜನವರಿ 4, 5ರಂದು ಕದ್ರಿ ಪಾರ್ಕ್ ನಲ್ಲಿ ಅಟೋಮೊಬೈಲ್ ಮತ್ತು ಶ್ವಾನ ಪ್ರದರ್ಶನ ನಡೆಯಲಿದೆ.- ಜನವರಿ 11, 12ರಂದು ಕದ್ರಿ ಪಾರ್ಕ್‌ನಲ್ಲಿ ಯುವ ಉತ್ಸವ.
- ಜನವರಿ 18, 19ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಸುಪ್ರಸಿದ್ಧ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.