ನಾಲ್ಕು ದಶಕದ ಬಳಿಕ ಬೇಂದ್ರೆ ಬೆಳಗು ಕೃತಿ ಬಿಡುಗಡೆ

KannadaprabhaNewsNetwork | Published : Feb 14, 2025 12:31 AM

ಸಾರಾಂಶ

ಬೇಂದ್ರೆ ಅವರು ಒಂದು ಯುಗದ ಕವಿಯಾಗಿ ಮಾಡಿದ ಸಾಧನೆ ಅಪ್ರತಿಮ. ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ ಹಲವು ಕೃತಿಗಳು ಯುವಜನಾಂಗಕ್ಕೆ ಮಾದರಿ. ಬೇಂದ್ರೆ ಅವರು ಬರೆದ ಬೇಂದ್ರೆ ಕಂಡ ಕನಕದಾಸರ ಅಪ್ರತಿಮ ಬೆಳಗು ಕೃತಿಯು 5 ದಶಕಗಳ ಬಳಿಕ ಬಿಡುಗಡೆಗೊಂಡು ನಾಡಿಗೆ ಸಮರ್ಪಣೆಯಾಗಿರುವುದು ಅಭಿನಂದನಾರ್ಹ.

ಹುಬ್ಬಳ್ಳಿ:

ಡಾ. ದ.ರಾ. ಬೇಂದ್ರೆ ಅವರು ಅಕ್ಷರಬ್ರಹ್ಮ. ಅವರ ಸಾಧನೆ ಅಪ್ರತಿಮ. ಅವರಿಗೆ ಅವರೇ ಸರಿಸಾಟಿ ಎಂದು ಧಾರವಾಡದ ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ. ಶರಣಬಸವ ಚೋಳಿನ್‌ ಹೇಳಿದರು.

ಅವರು ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಡಾ. ಕೆ.ಎಸ್‌. ಶರ್ಮಾ ಸಭಾಂಗಣದಲ್ಲಿ ಡಾ. ದ.ರಾ. ಬೇಂದ್ರೆ ಅವರ 139ನೇ ಜನ್ಮದಿನದ ಸಂಸ್ಮರಣೆ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬೇಂದ್ರೆ ಜ್ಞಾನಯಜ್ಞ ವಿಶೇಷ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಬೇಂದ್ರೆ ಕಂಡ ಕನಕದಾಸರ ಅಪ್ರತಿಮ ಬೆಳಗು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಬೇಂದ್ರೆ ಅವರು ಒಂದು ಯುಗದ ಕವಿಯಾಗಿ ಮಾಡಿದ ಸಾಧನೆ ಅಪ್ರತಿಮ. ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ ಹಲವು ಕೃತಿಗಳು ಯುವಜನಾಂಗಕ್ಕೆ ಮಾದರಿ. ಬೇಂದ್ರೆ ಅವರು ಬರೆದ ಬೇಂದ್ರೆ ಕಂಡ ಕನಕದಾಸರ ಅಪ್ರತಿಮ ಬೆಳಗು ಕೃತಿಯು 5 ದಶಕಗಳ ಬಳಿಕ ಬಿಡುಗಡೆಗೊಂಡು ನಾಡಿಗೆ ಸಮರ್ಪಣೆಯಾಗಿರುವುದು ಅಭಿನಂದನಾರ್ಹ ಎಂದರು.

ಧಾರವಾಡದ ಬಸವ ಶಾಂತಿ ಮಿಷನ್‌ ಅಧ್ಯಕ್ಷ ಮಹದೇವ ಹೊರಟ್ಟಿ ಮಾತನಾಡಿ, ಬೇಂದ್ರೆ ಅವರು ಯುಗಪುರುಷರು. ಅವರು ತಮ್ಮ ಕೃತಿಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ವಿಡಂಬನಾತ್ಮಕವಾಗಿ ತಿಳಿಸುವ ಮೂಲಕ ಜನರನ್ನು ಸರಿದಾರಿಗೆ ತರಲು ಪ್ರಯತ್ನಿಸಿದವರು. ಇಂತಹ ಮಹನೀಯರ ಕವನಗಳು ಸದಾಕಾಲ ಜನಮಾನಸದಲ್ಲಿ ಉಳಿಯುವಂತಾಗಬೇಕು. ಆಕಾಶವಾಣಿ ಕೇಂದ್ರದ ಮೂಲಕ ಪದೇ ಪದೇ ಬೇಂದ್ರೆ ಅವರ ಕವನಗಳು ಪ್ರಸ್ತುತಪಡಿಸುವಂತಾಗಲಿ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಡಾ. ಕೆ.ಎಸ್‌. ಶರ್ಮಾ, ಬೇಂದ್ರೆ ಅವರು ಸದಾಕಾಲ ಸ್ಮರಣೀಯ ಕವಿಗಳು. ಅವರು ಬರೆದು ಪ್ರಕಟಗೊಳ್ಳದೇ ಉಳಿದ ಸಮಗ್ರ ಕವಿತೆಗಳನ್ನು ಬೇಂದ್ರೆ ಪ್ರತಿಷ್ಠಾನದಿಂದ ಪ್ರಕಟಿಸಲು ನಿರ್ಧರಿಸಲಾಗಿದೆ. 5 ದಶಕಗಳ ಹಿಂದೆ ಬೇಂದ್ರೆ ಅವರು ಕನಕದಾಸರ ಬಗ್ಗೆ ಬರೆದ ಕೃತಿಯನ್ನು ಈಗ ಪ್ರಕಟಿಸಲಾಗಿದೆ. ಇದೇ ರೀತಿ ಹಲವು ಅಪ್ರಕಟಿತ ಕೃತಿಗಳ ಅನ್ವೇಷಣೆ ನಡೆಸಿ ನಾಡಿಗೆ ಪರಿಚಯಿಸುವ ಕಾರ್ಯ ಮಾಡಲಾಗುವುದು ಎಂದರು.

ಇದೇ ವೇಳೆ ಬೇಂದ್ರೆ ಅವರ ಪಂಚ ಕವನ ಸಂಗ್ರಹಗಳಾದ ನಾಕುತಂತಿ, ಕುಣಿಯೋಣು ಬಾ, ಬೇಂದ್ರೆ ಜೀವನ ಪರಿಚಯ, ಹಾಡು ಪಾಡು, ದ.ರಾ. ಬೇಂದ್ರೆಯವರೊಡನೆ ಮೂರು ಸಂದರ್ಶನ ಇವುಗಳ ಮರುಮುದ್ರಿಕ ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು.

ಈ ವೇಳೆ ಪ್ರೊ. ಕೆ.ಎಸ್‌. ಕೌಜಲಗಿ, ಎನ್‌.ಬಿ. ಕುಲಕರ್ಣಿ, ಸುಜಾತ ಗುರವ, ಸುಮಿತ್ರಾ ಕೆ, ಸುಲೋಚನಾ ಪೋತ್ನಿಸ್, ಪುನರ್ವಸು ಬೇಂದ್ರೆ ಸೇರಿದಂತೆ ಹಲವರಿದ್ದರು.

ಪ್ರಶಸ್ತಿ ಪ್ರದಾನ ಮುಂದೂಡಿಕೆ

ಇಬ್ಬರು ಸಾಧಕರಾದ ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ ಮಹಾನ್‌ ಶಿಕ್ಷಣ ತಜ್ಞ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ ಅವರಿಗೆ ಮಹಾನ್‌ ರಾಜನೀತಿ ತಜ್ಞ ಎಂಬ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಫೆ. 27ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಲಾಗಿದೆ. ಇದನ್ನು ಕಾರ್ಯಕ್ರಮದಲ್ಲಿ ಕೆ.ಎಸ್‌. ಶರ್ಮಾ ತಿಳಿಸಿದರು.

Share this article