ಕನ್ನಡಪ್ರಭ ವಾರ್ತೆ ರಾಮನಗರ
ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ 5 ವರ್ಷ ಇರುತ್ತಾರೊ, 10 ವರ್ಷ ಇರುತ್ತಾರೊ ಗೊತ್ತಿಲ್ಲ. ಸಿದ್ದರಾಮಯ್ಯರವರ ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಕೊಡಬೇಕು ಎಂಬುದಷ್ಟೇ ನಮ್ಮ ಒತ್ತಾಯ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.ಬಿಡದಿಯ ಅಬ್ಬನಕುಪ್ಪೆ ಮುಖ್ಯರಸ್ತೆಯಿಂದ ಇಟ್ಟಮಡು ರಸ್ತೆಗೆ 1 ಕೋಟಿ ರುಪಾಯಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬಲ ಇದಿಯೋ, ಇಲ್ಲವೋ ಅಂತ ನಾನು ಹೇಳುವುದಿಲ್ಲ. ಎಲ್ಲರಿಗೂ ಎಲ್ಲಾ ರೀತಿಯ ಬಲ ಇರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸ್ವಲ್ಪ ಹೆಚ್ಚಿನ ಶಾಸಕರ ಬಲ ಇರಬಹುದು. ಅದರ ನಂತರ ಸ್ಥಾನ ಡಿ.ಕೆ. ಶಿವಕುಮಾರ್ ಅವರಿಗಿದೆ ಎಂದರು.5 ವರ್ಷ ನಾನೇ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬಲ ಕಡಿಮೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಬಲಾಬಲದ ಪ್ರಶ್ನೆ ಬರಲ್ಲ. ಇದು ಕಾಂಗ್ರೆಸ್ ಪಕ್ಷ, ಇಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ, ಹೈಕಮಾಂಡ್ ತೀರ್ಮಾನದ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ. ಅದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ ಎಂದು ಹೇಳಿದರು.
ನಾವು ಹೇಳೋದು ಇಷ್ಟೇ, ಸಿದ್ದರಾಮಯ್ಯ ನಂತರ ನಮ್ಮ ನಾಯಕರಿಗೆ ಅವಕಾಶ ಸಿಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹೇಳಿಕೆ ವಿಚಾರದಲ್ಲಿ ಅವರಿಗೆ ಯಾರೂ ನೋಟಿಸ್ ಕೊಡಲು ಆಗುವುದಿಲ್ಲ. ಅದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತೆ. ಸಿದ್ದರಾಮಯ್ಯನವರು ಉತ್ತಮವಾದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಅವರ ನಂತರ ನಮಗೆ ಅವಕಾಶ ಸಿಗುತ್ತದೆ ಎಂದು ಭಾವಿಸಿದ್ದೇವೆ ಎಂದು ತಿಳಿಸಿದರು.ಮುಂದೆಯೂ ನನ್ನ ನಾಯಕತ್ವದಲ್ಲೇ ಚುನಾವಣೆ ಎಂಬ ಸಿಎಂ ಸಿದ್ದರಾಮಯ್ಯರವರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಹೌದು ಅವರ ನಾಯಕತ್ವವೂ ಬೇಕು, ನಾವು ಸಿದ್ದರಾಮಯ್ಯ ಬಿಟ್ಟು ಚುನಾವಣೆ ಮಾಡೋಕೆ ಆಗುತ್ತಾ.?
ಎಲ್ಲರ ನಾಯಕತ್ವವೂ ಇಲ್ಲಿ ಮುಖ್ಯ. ಡಿಕೆಶಿ, ಖರ್ಗೆ ಎಲ್ಲರ ನೇತೃತ್ವ ಬೇಕು. ಕಾಂಗ್ರೆಸ್ ಪಕ್ಷ ಸರ್ವಜನಾಂಗದ ಶಾಂತಿಯ ತೋಟ. ಒಂದು ಜಾತಿಯನ್ನ ನಂಬಿಕೊಂಡು ರಾಜಕಾರಣ ಮಾಡುವ ಪಕ್ಷ ಅಲ್ಲ. ಎಲ್ಲಾ ವರ್ಗದ ಜನರ ನಾಯಕತ್ವ ಇದಕ್ಕಿದೆ ಎಂದು ತಿಳಿಸಿದರು.ನಾವು ಸುರ್ಜೇವಾಲ ಜೊತೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದೇವೆ.ಶ್ರೀಗಳು, ಮುಖಂಡರು, ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವ ಅಭಿಪ್ರಾಯ ಇದೆ. ಪಕ್ಷಕ್ಕಾಗಿ ಅವರು ಶ್ರಮಪಟ್ಟಿದ್ದಾರೆ. ಹಾಗಾಗಿ ಅವರಿಗೆ ಅವಕಾಶ ಸಿಗಬೇಕು ಎನ್ನುವುದು ಜನಜನಿತ. ಸಾರ್ವಜನಿಕರು ಈ ವಿಚಾರ ಚರ್ಚೆ ಮಾಡುತ್ತಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ನಾಳೆಯೇ ಮುಖ್ಯಮಂತ್ರಿ ಮಾಡಿ ಅಂತ ನಾವು ಕೇಳಲ್ಲ. ಸಿದ್ದರಾಮಯ್ಯರ ನಂತರದ ಸ್ಥಾನ ಡಿ.ಕೆ.ಶಿವಕುಮಾರ್ ಗೆ ಸಿಗಬೇಕು. ಅದನ್ನು ಹೈಕಮಾಂಡ್ ಹೇಳಬೇಕು ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಮಾಡಬೇಕೊ ಬೇಡವೊ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ನಮಗೂ ಮಂತ್ರಿ ಆಗಬೇಕು ಎನ್ನುವ ಆಸೆ ಇದೆ. ಆದರೆ, ಇದಕ್ಕೆ ಹೈಕಮಾಂಡ್ ಒಪ್ಪಬೇಕಲ್ಲ ಎಂದು ಬಾಲಕೃಷ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಪುರಸಭೆ ಸದಸ್ಯರಾದ ಸಿ.ಉಮೇಶ್ , ಶ್ರೀನಿವಾಸ್ , ಪದ್ಮಾವತಿ ಬೆಟ್ಟಸ್ವಾಮಿ, ರಾಮಚಂದ್ರಯ್ಯ, ಕಾಂಗ್ರೆಸ್ ಮುಖಂಡರಾದ ಎಲ್.ಚಂದ್ರಶೇಖರ್ ,ಬೆಟ್ಟಸ್ವಾಮಿ, ಲೋಕೇಶ್, ಯೋಗಾನಂದ್, ಅಬ್ಬನಕುಪ್ಪೆ ಆನಂದ್, ಮತ್ತಿತರರು ಹಾಜರಿದ್ದರು.
---11ಕೆಆರ್ ಎಂಎನ್ 2.ಜೆಪಿಜಿ
ಬಿಡದಿಯ ಅಬ್ಬನಕುಪ್ಪೆ ಮುಖ್ಯರಸ್ತೆಯಿಂದ ಇಟ್ಟಮಡು ರಸ್ತೆಗೆ 1 ಕೋಟಿ ರುಪಾಯಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ಶಾಸಕ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು.