ಆರ್ಟಿಕಲ್‌ 370 ರದ್ದು ಬಳಿಕ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

KannadaprabhaNewsNetwork |  
Published : Sep 01, 2024, 01:52 AM ISTUpdated : Sep 01, 2024, 12:39 PM IST
31ಎಚ್ಎಸ್ಎನ್9 : ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು. | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನ, ಹಳೇಕೋಟೆ ಗ್ರಾಮದ, ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಡೆ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. 

 ಹಾಸನ :  ನಾಲ್ಕು ತಿಂಗಳ ಬಳಿಕ ಮಾವಿನಕೆರೆ ಬೆಟ್ಟಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡರು ಕಡೆ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬೆಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಹೊಳೆನರಸೀಪುರದ ಹೇಮಾವತಿ ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಆಗಮಿಸಿದ ಎಚ್.ಡಿ.ದೇವೇಗೌಡರು, ಬಳಿಕ ರಸ್ತೆ ಮಾರ್ಗವಾಗಿ ಹೊಳೆನರಸೀಪುರ ತಾಲೂಕಿನ, ಹಳೇಕೋಟೆ ಗ್ರಾಮದ, ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು.

ದೇವೇಗೌಡರಿಗೆ ಅರ್ಚಕರು ಪೂರ್ಣಕುಂಭ ಸ್ವಾಗತ ಕೋರಿದರು. ದೊಡ್ಡಗೌಡರ ಪುತ್ರ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಮೊಮ್ಮಗ ಹಾಗೂ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ಬಳಿಕ ಸುದ್ದಿಗಾರರೊಂದಿಗೆ ದೇವೇಗೌಡರು ಮಾತನಾಡಿ, ಕಾಶ್ಮೀರದಲ್ಲಿರುವ ಶಿವನ ದೇವಾಲಯಕ್ಕೆ 230 ಮೆಟ್ಟಿಲು ಇದೆ. ಹತ್ತುವುದು ಕಷ್ಟ, ನಾನು ಮೂವತ್ತು ಮೆಟ್ಟಿಲು ಹತ್ತಿದೆ. ಆಮೇಲೆ ಆಗಲಿಲ್ಲ, ಆಗ ಸಿಆರ್‌ಪಿಎಫ್‌ ಯೋಧರು ಡೋಲಿ ಮೂಲಕ ನನ್ನನ್ನು ಹೊತ್ತು ದೇವಾಲಯಕ್ಕೆ ಕರೆದುಕೊಂಡು ಹೋದಾಗ ಪೂಜೆ ಸಲ್ಲಿಸಿದೆ. ನಾಥದ್ವಾರದಲ್ಲಿ ಕೃಷ್ಣನ ದೇವಾಲಯ ಇದ್ದು, ಬಹಳ ಪ್ರಸಿದ್ಧವಾದ ದೇವಾಲಯ ಅದು, ಅಲ್ಲಿಗೂ ಹೋಗಿದ್ದೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ:

ಮೋದಿಯವರು 370 ಆರ್ಟಿಕಲ್‌ ರದ್ದು ಮಾಡಿದ್ದಾರೆ. ಮೋದಿಯವರು ಬಂದ ಮೇಲೆ ಭಯೋತ್ಪಾದಕರನ್ನು ನಿಯಂತ್ರಣ ಮಾಡಿದ್ದಾರೆ. ಈಗ ಭಯಮುಕ್ತ ವಾತಾವರಣ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಮೋದಿ ಮತ್ತು ಶಾ ಕಠಿಣವಾದ ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹಿಂದೆ ನಡೆಯುತ್ತಿದ್ದ ಅಕ್ರಮವನ್ನು ಸ್ವಲ್ಪ ಮಟ್ಟಿಗೆ ಸುಧಾರಣೆ ಮಾಡಿದ್ದಾರೆ. ಜನ ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ, ಈಗ ಅಲ್ಲಿ ಚುನಾವಣೆ ನಡೆಯುತ್ತಿದೆ. ಮೋದಿಯವರು, ಅಮಿತ್‌ ಶಾ 370 ಆರ್ಟಿಕಲ್ ತೆಗೆದ ಮೇಲೆ ಜನಸಾಮಾನ್ಯರು ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ. ಓಟು ಯಾರಿಗೆ ಹಾಕ್ತಾರೋ ಬಿಡ್ತರೋ ಕೇಳಬಾರದು. ಮೋದಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ, ನೆಮ್ಮದಿಯಿಂದ ಅಲ್ಲಿನ ಜನರು ಮತ ಹಾಕುತ್ತಾರೆ ಎಂದರು.

ಕಾಂಗ್ರೆಸ್‌ನಿಂದ ರಾಜಭವನ ಚಲೋ ವಿಚಾರದ ಪ್ರಶ್ನೆಗೆ ಉತ್ತರಿಸಿ, ಅದರ ಬಗ್ಗೆ ಈಗ ನಾನು ಮಾತನಾಡಲ್ಲ. ಮುಂದೆ ಮಾತನಾಡುವ ಕಾಲ ಬರುತ್ತೆ, ನಿಮ್ಮ ಮುಂದೆ ಬರುತ್ತದೆ ಎಂದರು.

ರಂಗನಾಥನ ಆಶೀರ್ವಾದದಿಂದ ಇನ್ನೂ ನಾಲ್ಕಾರು ವರ್ಷ ರಾಜಕೀಯ ಮಾಡುತ್ತೇನೆ. ಹಾಸನ ನನ್ನ ಜಿಲ್ಲೆ, ನನ್ನ ಹುಟ್ಟೂರು, ಸ್ವಂತ ಕ್ಷೇತ್ರ ಇದನ್ನು ಹೇಗೆ ಮರೆಯಲಿ? ಸದ್ಯಕ್ಕೆ ತಾತ್ಕಾಲಿಕವಾಗಿ ನಾನು ಜಿಲ್ಲಾ ಪ್ರವಾಸ ಮಾಡಲ್ಲ. ಕೆಲವು ದಿನಗಳ ನಂತರ ನಿಮಗೆ ತಿಳಿಸಿ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.

ಜೊತೆಯಲ್ಲಿ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್, ಮುಖಂಡರಾದ ಅರಸೀಕೆರೆ ಸಂತೋಷ್, ಜೆಡಿಎಸ್ ವಕ್ತಾರ ಹೊಂಗೆರೆ ರಘು ಇದ್ದರು.

 ಟೈಂ ಬರುತ್ತೆ ಆಗ ಮಾತಾಡ್ತೀನಿ.

ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ವಿಚಾರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾನು ಕರ್ನಾಟಕದ ಯಾವುದೇ ವಿಷಯಗಳ ಬಗ್ಗೆ ಈಗ ಮಾತನಾಡುವುದಿಲ್ಲ. ಟೈಂ ಬರುತ್ತೆ ಆಗ ಮಾತಾಡ್ತೀನಿ. ಹಾಸನಕ್ಕೆ ಬರ್ತೀನಿ, ರಾಜ್ಯಾದ್ಯಂತ ಪ್ರವಾಸ ಮಾಡುವೆನು. ಮಂಡಿ ನೋವು ಬಿಟ್ಟರೆ ಆರೋಗ್ಯ ಸರಿಯಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

.ಅಂಗಾಂಗಗಳ ದಾನ ಮಾಡಿಸಾರ್ಥಕತೆ ಮೆರೆದ ಕುಟುಂಬ
ಹೊಸ ವರ್ಷದ ಸಂಭ್ರಮಕ್ಕೆ ಪೊಲೀಸ್‌ ಭದ್ರತೆ