ಕನ್ನಡಪ್ರಭ ವಾರ್ತೆ, ಬೆಂಗಳೂರು
ಲೋಕಸಭೆ ಚುನಾವಣಾ ನೀತಿ ಸಂಹಿತೆ ಮುಗಿದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ 5 ಇಲಾಖೆಗಳ ಪ್ರಗತಿ ಪರಿಶೀಲಿಸಿದ್ದಾರೆ ಹಾಗೂ ತೆರಿಗೆ, ರಾಜಸ್ವ ಸಂಗ್ರಹ ಹೆಚ್ಚಳ, ಸೋರಿಕೆ ತಡೆಗೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಇದರಲ್ಲಿ ನಿಗದಿತ ಗುರಿ ತಲುಪದಿದ್ದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅಬಕಾರಿ, ವಾಣಿಜ್ಯ, ನೋಂದಣಿ ಮುದ್ರಾಂಕ, ಗಣಿ ಭೂ ವಿಜ್ಞಾನ ಮತ್ತು ಸಾರಿಗೆ ಇಲಾಖೆಗಳು ನಿಗದಿತ ತೆರಿಗೆ, ರಾಜಸ್ವ ಸಂಗ್ರಹದ ಗುರಿ ತಲುಪಲು ಅಧಿಕಾರಿಗಳು ಗರಿಷ್ಠ ಪ್ರಯತ್ನ ಮಾಡಬೇಕು. ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿನ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ಪರಿಗಣಿಸುತ್ತೇನೆ. ಬೇರೆ ಯಾವ ಪ್ರಭಾವಕ್ಕೂ ಮಣೆ ಹಾಕುವುದಿಲ್ಲ. ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿಯೇ ಗುರಿ ನಿಗದಿ ಪಡಿಸಲಾಗಿರುತ್ತದೆ. ಬರುವ ಸೆಪ್ಟಂಬರ್‌ನಲ್ಲಿ ಸಭೆ ನಡೆಸುವ ವೇಳೆ ನಿಗದಿತ ಗುರಿ ತಲುಪದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.ವಾಣಿಜ್ಯ ತೆರಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಅವಕಾಶವಾಗದಂತೆ ನಿಗದಿತ ತೆರಿಗೆ ಸಂಗ್ರಹಕ್ಕೆ ಗರಿಷ್ಠ ಪ್ರಯತ್ನ ಮಾಡಬೇಕು. ಅಂದಾಜು, ಜಾರಿ, ಮೇಲ್ಮನವಿ ತಂಡಗಳು ನಿರಂತರ ಸಹಕಾರದೊಂದಿಗೆ ಕೆಲಸ ಮಾಡಬೇಕೆಂದು ಸೂಚಿಸಿದರು.
ಸಮಗ್ರ ಸರಕು ಸೇವಾ ತೆರಿಗೆ (ಐಜಿಎಸ್‌ಟಿ) ನಕಾರಾತ್ಮಕ ಸೆಟಲ್ ಮೆಂಟ್ ಆಗುವ ಕಡೆ ಇತರೆ ಸರಕುಗಳ ಮೇಲಿನ ತೆರಿಗೆ ಸಂಗ್ರಹವನ್ನು ಚುರುಕುಗೊಳಿಸಬೇಕು. ವೃತ್ತಿ ತೆರಿಗೆ ಸಂಗ್ರಹವನ್ನೂ ಚುರುಕುಗೊಳಿಸಲು ಗುರಿ ನಿಗದಿ ಪಡಿಸಲು ನಿರ್ದೇಶನ ನೀಡಿದರು.ಮೇಲ್ಮನವಿ ಪ್ರಕರಣಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಅಂದಾಜು, ಜಾರಿ, ಮೇಲ್ಮನವಿ ಸಮನ್ವಯ ಸಭೆ ತಿಂಗಳಿಗೆ ಎರಡು ಬಾರಿ ಕಡ್ಡಾಯವಾಗಿ ನಡೆಸಬೇಕು. ಬೆಂಗಳೂರಿನಲ್ಲಿ ಹೆಚ್ಚು ದಾಖಲಾಗುತ್ತಿರುವ ಮೇಲ್ಮನವಿಗಳ ವಿಲೇವಾರಿಗಾಗಿ ಹೆಚ್ಚುವರಿ ಜಂಟಿ ಆಯುಕ್ತರ ಹುದ್ದೆ ಮಂಜೂರಾಗಿದ್ದು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದರು.ಕಿರುಕುಳ ನೀಡಬೇಡಿ:
ಅಬಕಾರಿ ಇಲಾಖಾ ಪ್ರಗತಿ ಪರಿಶೀಲನೆ ವೇಳೆ ಅಬಕಾರಿ ಪರವಾನಗಿ ನವೀಕರಣಕ್ಕೆ ಅಧಿಕಾರಿಗಳು ಕಿರುಕುಳ ನೀಡಬಾರದು. ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಕಳ್ಳಸಾಗಣೆ ಮೂಲಕ ನುಸುಳುವ ಮದ್ಯವನ್ನು ತಡೆಗಟ್ಟಬೇಕು ಎಂದು ಸೂಚಿಸಿದರು.ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಕಾರಣದಿಂದ ತೆರಿಗೆ ಸಂಗ್ರಹ ಬೆಳವಣಿಗೆ ದರ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಮಾಹಿತಿ ನೀಡಿದರು. ಇದಕ್ಕೆ ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿಯೇ ಗುರಿ ನಿಗದಿ ಪಡಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಭರ್ತಿ ಮಾಡಬೇಕು. ಇಲಾಖೆಯಲ್ಲಿ ಕಾನ್ಸ್‌ಟೇಬಲ್, ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಾಗೂ ವಾಹನಗಳ ಅಗತ್ಯತೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ, ಅಬಕಾರಿ ಇಲಾಖೆಯ ಆಯುಕ್ತ ಡಾ . ರವಿಶಂಕರ್ ಉಪಸ್ಥಿತರಿದ್ದರು.
ಜಿಐಎಸ್ ಆಸ್ತಿ ವಿವರದಿಂದ ತೆರಿಗೆ ಸೋರಿಕೆ ತಡೆಗಟ್ಟಿ:ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿಗಳು, ಜಿಐಎಸ್ ಆಧಾರಿತ ಆಸ್ತಿಗಳ ವಿವರ ಹಾಗೂ ಮಾರ್ಗಸೂಚಿ ದರ ನಿಗದಿಯನ್ನು ಜಾರಿಗೊಳಿಸುವ ಮೂಲಕ ತೆರಿಗೆ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಗಮನ ಹರಿಸಿ. ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಇಲಾಖೆಯಲ್ಲಿ ಈ ವರೆಗಿನ ತೆರಿಗೆ ಸಂಗ್ರಹ ನಿಗದಿತ ಗುರಿಗೆ ಶೇ.110 ರಷ್ಟಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಹಾಗೂ ಆಡಳಿತ ಸುಧಾರಣಾ ಕ್ರಮಗಳಿಂದ ಹೆಚ್ಚಿನ ತೆರಿಗೆ ಸಂಗ್ರಹದ ನಿರೀಕ್ಷೆ ಇದೆ. 2023-24 ನೇ ಸಾಲಿನಲ್ಲಿ 20 ಸಾವಿರ ಕೋಟಿ ರು. ಗುರಿಗೆ ಎದುರಾಗಿ 20,287.30 ಕೋಟಿ ರು. ರಾಜಸ್ವ ಸಂಗ್ರಹವಾಗಿದೆ. ದಸ್ತಾವೇಜುಗಳ ನೋಂದಣಿಯನ್ನು ಡಿಜಿಟಲ್ ಆಗಿ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಜಾರಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು.ಗಣಿ ಹರಾಜು ಪ್ರಕ್ರಿಯೆ ಆರಂಭಿಸಿ:
ಗಣಿ ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಹರಾಜಿಗೆ ಲಭ್ಯವಿರುವ ಗಣಿಗಳ ಹರಾಜು ಪ್ರಕ್ರಿಯೆಯನ್ನು ಕೂಡಲೇ ಕೈಗೆತ್ತಿಕೊಳ್ಳಿ. ಡ್ರೋನ್ ಸರ್ವೇ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳುವ ಮೂಲಕ ಕ್ರಷರ್‌ಗಳ ರಾಜಸ್ವ ಸಂಗ್ರಹ ಸೋರಿಕೆ ತಡೆಗಟ್ಟಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ರಾಜಸ್ವ ಸಂಗ್ರಹ ಚುರುಕುಗೊಳಿಸಿ. ಉಪ ಖನಿಜ ರಾಜಸ್ವ ಸಂಗ್ರಹ ಹೆಚ್ಚಿಸಲು ಕ್ರಮ ಕೈಗೊಳ್ಳಿ. ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಂದಾಯ ಇಲಾಖೆ ಲ್ಯಾಂಡ್ ಬ್ಯಾಂಕ್ ಸೃಜಿಸಿದಲ್ಲಿ, ಅರಣ್ಯ ಪರಿಹಾರ ಭೂಮಿ ನೀಡಲು ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಇಲಾಖೆಯ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ, ನಿರ್ದೇಶಕ ಗಿರೀಶ್ ಉಪಸ್ಥಿತರಿದ್ದರು.
ಸಾರಿಗೆ ಇಲಾಖೆ 13 ಸಾವಿರ ಕೋಟಿ ಸಂಗ್ರಹ ಗುರಿ:ಸಾರಿಗೆ ಇಲಾಖೆಗೆ ಈ ಬಾರಿ 13 ಸಾವಿರ ಕೋಟಿ ರು. ರಾಜಸ್ವ ಸಂಗ್ರಹದ ಗುರಿ ನೀಡಿದ್ದು, ಗರಿಷ್ಠ ಗುರಿ ತಲುಪಲು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಸಿದ್ದರಾಮಯ್ಯ ಸೂಚಿಸಿದರು. ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಇಲಾಖೆಗೆ ನೀಡಿರುವ ರಾಜಸ್ವದ ಗುರಿ ತಲುಪುವ ಭರವಸೆ ನೀಡಿದರು. ಅಶೋಕ್ ‘ಗ್ಯಾರಂಟಿ’ ಏಟಿಗೆ ಸಿದ್ದು ಎದಿರೇಟು:
ರಾಜ್ಯ ಹಾಗೂ ದೇಶದ ಜನತೆ ಸೋಲಿಸಿದ್ದು ಮೋದಿ ಗ್ಯಾರಂಟಿಯೇ ಹೊರತು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಅಲ್ಲ, ರಾಜಕೀಯ ಲಾಭದ ಉದ್ದೇಶದಿಂದ ಗ್ಯಾರಂಟಿ ಯೋಜನೆ ತಂದಿಲ್ಲ ಗ್ಯಾರಂಟಿ ಯೋಜನೆ ಮುಂದುವರೆಯುತ್ತದೆ, ರಾಜ್ಯದ ಆರ್ಥಿಕ ಸ್ಥಿತಿಯೂ ಸುಭದ್ರವಾಗಿದ್ದು, ಸಾಲ ಮಾಡಿ ಸಂಬಳ ಕೊಡುವ ಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ತಿರುಗೇಟು ನೀಡಿದ್ದಾರೆ.ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ತಂದುಕೊಟ್ಟಿಲ್ಲ ಎಂಬ ಆರ್. ಅಶೋಕ್ ಅವರ ಹೇಳಿಕೆಗೆ ಪ್ರಕಟಣೆಯ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು ಆಗಾಗ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಾ ಜನರಿಗೆ ಮನರಂಜನೆ ನೀಡುತ್ತಿರುತ್ತಾರೆ. ಅವರ ಹೇಳಿಕೆ ಇತ್ತೀಚಿನ ಸಂಶೋಧನೆಯಾಗಿದೆ. ಗ್ಯಾರಂಟಿ ಯೋಜನೆ ಬಗ್ಗೆ ತಮಗೆ ಹಾಗೂ ತಮ್ಮಪಕ್ಷಕ್ಕೆ ಯಾಕೆ ಇಷ್ಟೊಂದು ಸಿಟ್ಟು, ಮತ್ಸರ, ಫಲಾನುಭವಿಗಳಾದ ಬಡವರು, ಮಹಿಳೆಯರು, ಯುವಜನರ ಬಗ್ಗೆ ಯಾಕೆ ಇಷ್ಟೊಂದು ದ್ವೇಷ, ಅಸಹನೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ಹಾಗೂ ಇತ್ತೀಚಿನ ಲೋಕಸಭಾ ಚುನಾವಣೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಮತಪ್ರಮಾಣದ ಅಂತರ ಕೇವಲ 0.63 ಆಗಿದೆ, ಹೀಗಿರುವಾಗ ಗೆದ್ದವರು ಯಾರು, ಜೆಡಿಎಸ್ ಪಕ್ಷದ ಪಾದಕ್ಕೆ ಬಿದ್ದರೂ 26 ಸ್ಥಾನಗಳಿಂದ 17 ಸ್ಥಾನಕ್ಕೆ ನಿಮ್ಮ ಪಕ್ಷ ಕುಸಿಯುವುದನ್ನು ತಪ್ಪಿಸಲು ಆಗಲಿಲ್ಲ. ಒಂದು ಸ್ಥಾನದಿಂದ 9 ಸ್ಥಾನಕ್ಕೆ ಏರುವುದನ್ನು ನಿಮಗೆ ತಪ್ಪಿಸಲು ಆಗಲಿಲ್ಲ. ಮೊದಲು ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದಿದ್ದಾರೆ.ಕೇಂದ್ರ ಸರ್ಕಾರದ ದುರಾಡಳಿತದಿಂದ ನೆಲ ಹಿಡಿದಿರುವ ಜನತೆಗೆ ನೆರವಾಗಲು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ ಅದು ನಮ್ಮ ಬದ್ಧತೆ ಮತ್ತು ರಾಜ್ಯದ ಜನರ ಮೇಲಿನ ಬದ್ಧತೆಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಬೇಕು ಎಂಬ ಆಸೆ ನಿಮಗಿದ್ದರೂ ಅದು ಈಡೇರುವುದಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿರುತ್ತದೆ. ನಿಮಗೆ ಬರುವ ಸಂಬಳದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ನನ್ನ ಗಮನಕ್ಕೆ ತನ್ನಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.ಹುಸಿ ಕಾಳಜಿ:
ದಲಿತರ ಬಗ್ಗೆ ನಿಮ್ಮ ಕಾಳಜಿ ಎನ್ನುವುದಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಒಬ್ಬ ದಲಿತ ಇಲ್ಲವೇ ಹಿಂದುಳಿದ ವರ್ಗದ ಸಮುದಾಯದ ನಾಯಕನಿಗೆ ಅವಕಾಶ ನೀಡದಿರುವುದೇ ಸಾಕ್ಷಿಯಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಿ, ಅವರ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸಂಪನ್ಮೂಲದ ಶೇ. 25ರಷ್ಟನ್ನು ಮೀಸಲು ಇಟ್ಟವರು ನಾವು. ನಿಮಗೆ ದಮ್ಮು-ತಾಕತ್ ಇದ್ದರೆ ಈ ಕಾಯ್ದೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರಲು ಪ್ರಧಾನಿ ಮೋದಿ ಅವರಿಗೆ ತಿಳಿಸಿ ನಂತರ ನಮ್ಮ ಬಗ್ಗೆ ಮಾತನಾಡಿ ಎಂದು ಮುಖ್ಯಮಂತ್ರಿಗಳು ಸವಾಲು ಹಾಕಿದ್ದಾರೆ.ಯುವತಿ ಹತ್ಯೆ ಕೇಸಿಂದ ಹುಬ್ಬಳ್ಳಿ ಭಾಗದಲ್ಲಿ ಕೈಗೆ ಹಿನ್ನಡೆ:ಡಿ.ಕೆ. ಸುರೇಶ್ ಸೋತಿದ್ದಾರೆ ನಿಜ, ಆದರೆ ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕೋಡಿ, ದಾವಣಗೆರೆ, ಕಲಬುರಗಿ ಮತ್ತು ರಾಯಚೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಮ್ಮ ಅಭ್ಯರ್ಥಿಗಳು ಸೋಲಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಅಮಾಯಕ ಹೆಣ್ಣುಮಗಳ ಹತ್ಯೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಪರಿಣಾಮ ನಮಗೆ ಆ ಭಾಗದಲ್ಲಿ ಹಿನ್ನಡೆಯಾಯಿತು. ಇಲ್ಲದಿದ್ದರೆ ನಿಮ್ಮ ಪಕ್ಷ ಒಂದಂಕಿಗೆ ಇಳಿಯಿತು. ನಿಮ್ಮ ದೆಹಲಿ ನಾಯಕರ ರೀತಿಯಲ್ಲಿ ಸುಳ್ಳು ಹೇಳಬೇಡಿ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.