ಬಳ್ಳಾರಿ: ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಭರ್ಜರಿಗೆ ಗೆಲುವು ಸಾಧಿಸಿದ್ದಾರೆ. ಚುನಾವಣೋತ್ತರ ಸಮೀಕ್ಷೆಯಿಂದ ಜಯದ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು 87 ಸಾವಿರ ಮತಗಳ ಅಂತರದಲ್ಲಿ ಸೋಲುಂಡು ಮುಖಭಂಗ ಅನುಭವಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಬಿ.ಶ್ರೀರಾಮುಲುಗೆ ಲೋಕಸಭಾ ಚುನಾವಣೆ ರಾಜಕೀಯ ನೆಲೆ ನೀಡಲಿದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಬಿಜೆಪಿ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಶ್ರೀರಾಮುಲುಗೆ ಸತತ ಸೋಲಿನ ಪೆಟ್ಟು ಬಿದ್ದಿದೆ.
ನಿರಂತರ ಮುನ್ನಡೆ: ನಗರದ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಿತು.12ನೇ ಸುತ್ತಿನಲ್ಲಿ ಬಿಜೆಪಿ 5 ಸಾವಿರ ಲೀಡ್ ಪಡೆದುಕೊಂಡಿದ್ದು ಬಿಟ್ಟರೆ, ಉಳಿದ ಸುತ್ತುಗಳಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು. ನಿರಂತರ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಾದಿ ಸುಗಮಗೊಳಿಸಿಕೊಂಡರು. ಬೆಳಗ್ಗೆ 9 ಗಂಟೆಗೆ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ 3940 ಮತಗಳ ಮುನ್ನಡೆ ಸಾಧಿಸಿತು. ನಂತರದಲ್ಲಿ ಗೆಲುವಿನ ಅಂತರವನ್ನು ಹಿಗ್ಗಿಸಿಕೊಳ್ಳುತ್ತಾ ಸಾಗಿತು. 6ನೇ ಸುತ್ತಿನಲ್ಲಿ ಕಾಂಗ್ರೆಸ್ 50 ಸಾವಿರ ಮತಗಳ ಮುನ್ನಡೆ ದಾಟಿ ಗೆಲುವಿನ ಸುಳಿವು ನೀಡಿತು. ಮಧ್ಯಾಹ್ನ 1 ಗಂಟೆ ವೇಳೆಗೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಾತ್ರಿಯಾಯಿತು.
ವಿಜಯೋತ್ಸವದ ವೇದಿಕೆ ತೆರವು: ಚುನಾವಣೋತ್ತರ ಸಮೀಕ್ಷೆಯನ್ನು ನಂಬಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಎಸ್ಪಿ ವೃತ್ತದಲ್ಲಿರುವ ಬಿಜೆಪಿ ಹಳೆಯ ಕಚೇರಿ ಮುಂಭಾಗ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ವೇದಿಕೆ ನಿರ್ಮಾಣ, ನೂರಾರು ಜನರಿಗೆ ಸಿಹಿಯೂಟ, ಮೆರವಣಿಗೆ, ಹಾಲಿನ ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಾದಿಯತ್ತ ಮುನ್ನುಗ್ಗುತ್ತಿದ್ದಂತೆಯೇ ವೇದಿಕೆಯನ್ನು ತೆರವುಗೊಳಿಸಿದರು.
20 ವರ್ಷದ ಬಳಿಕ ಗೆಲುವು ಕಂಡ ಕಾಂಗ್ರೆಸ್: 2004ರಿಂದ ಸತತ ಗೆಲುವಿನ ರುಚಿ ಕಂಡಿದ್ದ ಬಿಜೆಪಿ ಈ ಬಾರಿ ಸೋಲಿನ ಕಹಿ ಉಂಡಿದೆ. 2004ರಲ್ಲಿ ಜನಾರ್ದನ ರೆಡ್ಡಿಯ ಹಿರಿಯ ಸಹೋದರ ಜಿ.ಕರುಣಾಕರ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದು ಬಿಜೆಪಿಯ ಮೊದಲ ಗೆಲುವಾಗಿತ್ತು.
ರೆಡ್ಡಿ ಪ್ರಭಾವ ಕೆಲಸ ಮಾಡಲಿಲ್ಲ:
ಅಣ್ಣ-ತಂಗಿ ಸೋಲು: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ಕ್ಷೇತ್ರದಿಂದ ವೈಎಸ್ಸಾರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತಾ ಅವರು ಸೋಲುಂಡಿದ್ದಾರೆ. ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಪಾರ್ಥಸಾರಥಿ ವಿರುದ್ಧ ಜೆ.ಶಾಂತಾ ಭಾರೀ ಅಂತರದ ಸೋಲು ಅನುಭವಿಸಿದ್ದಾರೆ. ಈ ಚುನಾವಣೆಯಲ್ಲಿ ಅಣ್ಣ-ತಂಗಿ ಸಂಸತ್ ಪ್ರವೇಶಿಸಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಸಂಸದರಾಗುವ ಆಸೆಗೆ ನೀರೆರಚಿದಂತಾಗಿದೆ.