ಎರಡು ವರ್ಷದ ಬಳಿಕ ಮೇಯರ್‌ಗೆ ಬಂತು ಗೌನು!

KannadaprabhaNewsNetwork | Published : Jul 3, 2024 12:15 AM

ಸಾರಾಂಶ

ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2022ರಲ್ಲಿ 21ನೇ ಅವಧಿಯ ಮೇಯರ್‌ ಆಗಿದ್ದ ಈರೇಶ ಅಂಚಟಗೇರಿ ಗೌನು ಧರಿಸುವುದನ್ನು ತಿರಸ್ಕರಿಸಿದ್ದರು. ಬ್ರಿಟಿಷ್‌ ಸಂಸ್ಕೃತಿಯ ಗೌನು ಇದು. ಗುಲಾಮಗಿರಿಯ ಸಂಕೇತ. ತಾವೇ ಶ್ರೇಷ್ಠ ಎಂಬುದನ್ನು ತೋರಿಸುತ್ತದೆ. ಪಾಲಿಕೆ ಆಡಳಿತದಲ್ಲಿ ಇಂಥ ಗುಲಾಮಗಿರಿಯ ಸಂಸ್ಕೃತಿ ಸರಿಯಲ್ಲ ಎಂದು ಗೌನು ಧರಿಸುವುದನ್ನು ಬಿಟ್ಟಿದ್ದರು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್‌ ಗೌನು ಧರಿಸಲು ನಿರ್ಧರಿಸಿದ್ದಾರೆ. ಇದರಿಂದ ಎರಡು ವರ್ಷಗಳ ಬಳಿಕ ಮೇಯರ್‌ಗೆ ಗೌನು ಬಂದಂತಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2022ರಲ್ಲಿ 21ನೇ ಅವಧಿಯ ಮೇಯರ್‌ ಆಗಿದ್ದ ಈರೇಶ ಅಂಚಟಗೇರಿ ಗೌನು ಧರಿಸುವುದನ್ನು ತಿರಸ್ಕರಿಸಿದ್ದರು. ಬ್ರಿಟಿಷ್‌ ಸಂಸ್ಕೃತಿಯ ಗೌನು ಇದು. ಗುಲಾಮಗಿರಿಯ ಸಂಕೇತ. ತಾವೇ ಶ್ರೇಷ್ಠ ಎಂಬುದನ್ನು ತೋರಿಸುತ್ತದೆ. ಪಾಲಿಕೆ ಆಡಳಿತದಲ್ಲಿ ಇಂಥ ಗುಲಾಮಗಿರಿಯ ಸಂಸ್ಕೃತಿ ಸರಿಯಲ್ಲ ಎಂದು ಗೌನು ಧರಿಸುವುದನ್ನು ಬಿಟ್ಟಿದ್ದರು. ಅಷ್ಟೇ ಅಲ್ಲದೇ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಯಾರೇ ಬಂದರೂ ಗೌನು ಧರಿಸದೇ ಅವರನ್ನು ಸ್ವಾಗತಿಸಿದ್ದರು. ರಾಷ್ಟ್ರಪತಿಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಗೌನು ಧರಿಸದೇ ಸನ್ಮಾನಿಸಿದ್ದರು. ಮುಂದೆ ಸಾಮಾನ್ಯ ಸಭೆಗಳಲ್ಲೂ ಗೌನು ಧರಿಸದೇ ಪಾಲ್ಗೊಂಡಿದ್ದರು. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಇದರಿಂದ ಎರಡ್ಮೂರು ಸಾಮಾನ್ಯ ಸಭೆಗಳಲ್ಲಿ ಭಾರೀ ಕೋಲಾಹಲ ಉಂಟಾಗಿ ಸಭೆಯೇ ಮೊಟಕುಗೊಂಡಿದ್ದುಂಟು. ಆಡಳಿತ ಪಕ್ಷದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೂ ಅಂಚಟಗೇರಿ ಮಾತ್ರ ಗೌನು ಧರಿಸುವ ಗೋಜಿಗೆ ಹೋಗಲಿಲ್ಲ. ಕೊನೆಗೆ ಸರ್ಕಾರಕ್ಕೆ ಅವರೇ ಪತ್ರ ಬರೆದು ಗೌನು ಧರಿಸುವುದು ಕಡ್ಡಾಯವೇ ಎಂದು ಪ್ರಶ್ನಿಸಿದ್ದರು.

ಸರ್ಕಾರ ಗೌನು ಧರಿಸುವುದು ಕಡ್ಡಾಯವಲ್ಲ. ಅದು ಮೇಯರ್‌ ಆದವರ ವಿವೇಚನೆಗೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿತ್ತು. ಈ ವಿಚಾರದಲ್ಲಿ ಅಂಚಟಗೇರಿ ಯಶಸ್ವಿ ಕೂಡ ಆಗಿದ್ದರು. ಮಹಾನಗರ ಪಾಲಿಕೆಯಲ್ಲಿ ಗೌನು ತಿರಸ್ಕರಿಸಿದ ಮೊದಲ ಮೇಯರ್‌ ಎಂದು ಹೆಸರು ಪಡೆದಿದ್ದರು. ಇದು ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. ಇದು ಬರೀ ಮಹಾನಗರ ಪಾಲಿಕೆಗಷ್ಟೇ ಸೀಮಿತವಾಗಲಿಲ್ಲ. ಶಿವಮೊಗ್ಗ ಪಾಲಿಕೆಯಲ್ಲೂ ಅಲ್ಲಿನ ಮೇಯರ್‌ ಆಗ ಗೌನು ಧರಿಸುವುದನ್ನು ಬಿಟ್ಟಿದ್ದುಂಟು.

ಅಂಚಟಗೇರಿ ಅವರ ನಂತರ ಮೇಯರ್‌ ಆದ ವೀಣಾ ಬರದ್ವಾಡ ಕೂಡ ಗೌನು ಧರಿಸಿರಲಿಲ್ಲ. ಅಂಚಟಗೇರಿ ಅವರ ಹಾದಿಯೇ ಹಿಡಿದಿದ್ದರು.

ಧರಿಸ್ತಾರಂತೆ:ಇದೀಗ ರಾಮಣ್ಣ ಬಡಿಗೇರ ಎರಡು ದಿನದ ಹಿಂದೆಯಷ್ಟೇ ನೂತನ ಮೇಯರ್‌ ಆಗಿದ್ದಾರೆ. ಇವರು ಗೌನು ಧರಿಸುತ್ತಾರೋ ಇಲ್ವೋ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ನಾನು ಗೌನು ಧರಿಸುತ್ತೇನೆ. ಮೇಯರ್‌ ಎಂದರೆ ಮಹಾನಗರದ ಪ್ರಥಮ ಪ್ರಜೆ. ಅದು ನಮಗೆ ಕೊಡುವ ಗೌರವ ಅಲ್ಲ. ಹುದ್ದೆಗೆ ಕೊಡುವಂತಹ ಗೌರವ. ಹೀಗಾಗಿ ಗೌನು ಧರಿಸುತ್ತೇನೆ ಎಂದು ರಾಮಣ್ಣ ಸ್ಪಷ್ಟಪಡಿಸುತ್ತಾರೆ.

ಬಿಜೆಪಿ ಆಡಳಿತದಲ್ಲಿರುವ ಪಾಲಿಕೆಯಲ್ಲಿ ಬಿಜೆಪಿಯ ಮೇಯರ್‌ ಪರಿಚಯಿಸಿದ್ದ ಹೊಸ ಸಂಪ್ರದಾಯಕ್ಕೆ ಅದೇ ಪಕ್ಷದವರೇ ಮುರಿದಂತಾಗಿದೆ.

ಒಟ್ಟಿನಲ್ಲಿ ಇದೀಗ ಮೇಯರ್‌ ಗೌನು ವಿಷಯ ಮಾತ್ರ ಪಾಲಿಕೆ ಆವರಣದಲ್ಲಿ ಬಹು ಚರ್ಚೆಯ ವಿಷಯವಾಗಿರುವುದಂತೂ ಸತ್ಯ.

ಪಾಲಿಕೆ ಹಿನ್ನೆಲೆ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ತನ್ನದೇ ಆದ ಇತಿಹಾಸವಿದೆ. ಪಾಲಿಕೆಯಾಗಿ ರಚನೆಯಾಗುವ ಮುನ್ನ ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಪುರಸಭೆಗಳಿದ್ದವು. 1855ರಲ್ಲಿ ಹುಬ್ಬಳ್ಳಿ ಪುರಸಭೆ ಅಸ್ತಿತ್ವಕ್ಕೆ ಬಂದಿತು. ಜಿಲ್ಲೆಯ ಕಲೆಕ್ಟರ್‌ಗಳೇ ಅಧ್ಯಕ್ಷರಾಗಿದ್ದರು. ಆಗ ಬರೀ 18 ಸದಸ್ಯರಿದ್ದರು. ಈ ಸದಸ್ಯರೆಲ್ಲರೂ ಸರ್ಕಾರದಿಂದ ನಾಮನಿರ್ದೇಶಿತರಾಗಿರುತ್ತಿದ್ದರು. 1856ರಲ್ಲಿ ಧಾರವಾಡ ಪುರಸಭೆ ಅಸ್ತಿತ್ವಕ್ಕೆ ಬಂದಿತ್ತು. ಹೀಗೆ 1962ರ ವರೆಗೂ ಪ್ರತ್ಯೇಕ ಪುರಸಭೆಗಳೇ ಇದ್ದವು. 1962ರಲ್ಲಿ ಪ್ರತ್ಯೇಕವಾಗಿದ್ದ ಈ ಪುರಸಭೆಗಳನ್ನು ಒಗ್ಗೂಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಂದು ರಚಿಸಿತು. 1962ರಿಂದ ಈ ವರೆಗೆ ಬರೋಬ್ಬರಿ 41 ಮೇಯರ್‌ಗಳನ್ನು ಪಾಲಿಕೆ ಕಂಡಿದೆ. ಜಿ.ಆರ್‌. ನಲವಡಿ ಮೊದಲ ಮೇಯರ್‌. ಇವರು ಚುನಾಯಿತ ಸದಸ್ಯರಾಗಿರಲಿಲ್ಲ. ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿದ್ದವರು. 1968ರಿಂದ ಚುನಾಯಿತ ಸದಸ್ಯರೇ ಮೇಯರ್‌ ಗಿರಿ ಅನುಭವಿಸಿದ್ದಾರೆ. ಅಲ್ಲಿಂದ ಈ ವರೆಗೆ ಪಾಂಡುರಂಗ ಪಾಟೀಲ, ಐ.ಎಂ. ಜವಳಿ, ಎಸ್‌.ಎಸ್‌. ಶೆಟ್ಟರ್‌, ವೀರಣ್ಣ ಸವಡಿ, ಅನಿಲಕುಮಾರ ಪಾಟೀಲ ಹೀಗೆ 41 ಮೇಯರ್‌ಗಳನ್ನು ಕಂಡಂತಹ ಪಾಲಿಕೆಯಿದು. ರಾಮಣ್ಣ ಬಡಿಗೇರ್‌ 42ನೇ ಮೇಯರ್‌ ಆಗಿದ್ದಾರೆ.ಮೇಯರ್‌ ಹುದ್ದೆಗೆ ತನ್ನದೇ ಆದ ಗೌರವವಿದೆ. ಗೌನು ಧರಿಸುವುದು ಆ ಹುದ್ದೆಗೆ ಕೊಡುವ ಗೌರವ ಸೂಚಕ. ಹಿಂದೆ ಅಂಚಟಗೇರಿ, ಬರದ್ವಾಡ ಏಕೆ ಬಿಟ್ಟಿದ್ದರು ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಆದರೆ ನಾನು ಮಾತ್ರ ಗೌನು ಧರಿಸುತ್ತೇನೆ ಎಂದು ಮೇಯರ್‌ ರಾಮಣ್ಣ ಬಡಿಗೇರ ಹೇಳಿದರು.

Share this article