ಮಕ್ಕಳಿಲ್ಲದೇ ಮಧ್ಯಾಹ್ನದ ಬಿಸಿಯೂಟ ಸ್ಥಗಿತ

KannadaprabhaNewsNetwork |  
Published : May 25, 2024, 12:45 AM ISTUpdated : May 25, 2024, 10:19 AM IST
ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಶಾಲೆಯ ಬಿಸಿಯೂಟಕ್ಕೆ ಬಂದಿರುವುದು | Kannada Prabha

ಸಾರಾಂಶ

ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಬೇಸಿಗೆ ರಜೆಯಲ್ಲಿ ಲಕ್ಷಾಂತರ ಮಕ್ಕಳ ಅನುಕೂಲಕ್ಕಾಗಿ ಸರ್ಕಾರವು ಶಾಲಾ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಅಧಿಕಾರಿಗಳಿಗೆ ಬಿಸಿಯೂಟ ಮುಂದುವರಿಸುವಂತೆ ಆದೇಶಿಸಿತು. 

ಶಶಿಕಾಂತ ಮೆಂಡೆಗಾರ

 ವಿಜಯಪುರ : ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಬೇಸಿಗೆ ರಜೆಯಲ್ಲಿ ಲಕ್ಷಾಂತರ ಮಕ್ಕಳ ಅನುಕೂಲಕ್ಕಾಗಿ ಸರ್ಕಾರವು ಶಾಲಾ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಅಧಿಕಾರಿಗಳಿಗೆ ಬಿಸಿಯೂಟ ಮುಂದುವರಿಸುವಂತೆ ಆದೇಶಿಸಿತು. ಈ ಹಿಂದೆ ಬೇಸಿಗೆ ರಜೆಯಲ್ಲಿ ಅದೆಷ್ಟೋ ಮಕ್ಕಳು ಕೂಲಿ ಕೆಲಸಕ್ಕೆ ಹೋದರೆ, ತಂದೆ-ತಾಯಿಗಳು ಕೆಲಸ ಅರಸಿ ಗುಳೆ ಹೋಗುತ್ತಿದ್ದರು.

ಹೀಗಾಗಿ ಪಾಲಕರು ಕೂಲಿ ಕೆಲಸಕ್ಕೆ ಹೋದರೂ ಮಕ್ಕಳಿಗೆ ಅನಾನುಕೂಲ ಆಗಬಾರದು ಎಂದು ಸಿಎಂ ಸಿದ್ದರಾಮಯ್ಯನ ಅವರು ಸರ್ಕಾರಿ ಶಾಲೆಗಳಲ್ಲಿ ನಿತ್ಯ ಬಿಸಿಯೂಟ ಮುಂದುವರಿಸಿದ್ದರು. ಏಪ್ರಿಲ್ 10ಕ್ಕೆ ಶಾಲೆಗಳು ರಜೆ ನೀಡಿದ್ದು, ಮೇ 29ಕ್ಕೆ ಮರು ಆರಂಭಗೊಳ್ಳಲಿವೆ. ಈ ಅವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಪೂರೈಸಲು ಸೂಚಿಸಲಾಗಿತ್ತು.

ಒಪ್ಪಿಗೆ ನೀಡಿದ್ದ ಮಕ್ಕಳು ಬರುತ್ತಿಲ್ಲ:  ಬೇಸಿಗೆ ರಜೆ ವೇಳೆ ಎಷ್ಟು ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕೆ ಬರುತ್ತಾರೆ ಎಂದು ಶಾಲೆಗಳು ರಜೆ ಕೊಡುವ ಮೊದಲೇ ವಿದ್ಯಾರ್ಥಿಗಳಿಂದ ಒಪ್ಪಿಗೆ ಪತ್ರ ಪಡೆದಿದ್ದವು. ಆರಂಭದಲ್ಲಿ ಉತ್ಸಾಹದಿಂದಲೇ ಶಾಲೆಯಲ್ಲಿನ ಬಿಸಿಯೂಟಕ್ಕೆ ಬರುತ್ತಿದ್ದ ಮಕ್ಕಳು ದಿನ ಕಳೆದಂತೆ ನಿರ್ಲಕ್ಷ್ಯ ಮಾಡಿದ್ದಾರೆ. ಇನ್ನೂ ಕೆಲವು ಕಡೆ ಒಪ್ಪಿಗೆ ಪತ್ರ ಕೊಟ್ಟಿರುವ ಮಕ್ಕಳ ಪಾಲಕರು ಬೇರೆಡೆ ಉದ್ಯೋಗ ಅರಸಿ ಗುಳೆ ಹೋಗಿದ್ದರಿಂದ, ಬೇಸಿಗೆ ರಜೆಗೆ ಬೇರೆ ಬೇರೆ ಕಡೆಗೆ ತೆರಳಿದ್ದಾರೆ. ಹೀಗಾಗಿ ಅವರೊಟ್ಟಿಗೆ ಮಕ್ಕಳು ಹೋಗಿದ್ದಾರೆ. ಇದರಿಂದ ಅರ್ಧಕ್ಕರ್ಧ ಶಾಲೆಗಳಲ್ಲಿ ಬಿಸಿಯೂಟ ಬಂದ್ ಆಗಿದೆ. ಮಕ್ಕಳೇ ಇಲ್ಲದ ಮೇಲೆ ಬಿಸಿಯೂಟ ಯಾರಿಗೆ ಕೊಡಬೇಕು ಎಂದುಕೊಂಡು ಸ್ಥಗಿತವಾಗಿದೆ.

ಊಟಕ್ಕೆ ಬರುತ್ತಿರುವವರು ಎಷ್ಟು ಮಕ್ಕಳು?:  ಬೇಸಿಗೆ ರಜೆಯಲ್ಲಿ ಬಿಸಿಯೂಟಕ್ಕೆ ಬರುತ್ತೇವೆ ಎಂದು ಒಪ್ಪಿಗೆ ಕೊಟ್ಟವರಲ್ಲಿ ಅರ್ಧಕ್ಕೂ ಹೆಚ್ಚು ಮಕ್ಕಳು ಬರುತ್ತಿಲ್ಲ. ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಸೇರಿ 2309 ಶಾಲೆಗಳಿದ್ದು, ಅದರಲ್ಲಿ 1400 ಶಾಲೆಗಳಿಂದ ಬಿಸಿಯೂಟಕ್ಕೆ ಬೇಡಿಕೆ ಬಂದಿತ್ತು. 1 ರಿಂದ 10ನೇ ತರಗತಿವರೆಗಿನ 2.56 ಲಕ್ಷ ಮಕ್ಕಳಲ್ಲಿ, 1.40 ಲಕ್ಷ ಮಕ್ಕಳ ಪಾಲಕರು ಬಿಸಿಯೂಟಕ್ಕೆ ಮಕ್ಕಳನ್ನು ಕಳುಹಿಸುತ್ತೇವೆ ಎಂದು ಒಪ್ಪಿಗೆ ಪತ್ರ ಕೊಟ್ಟಿದ್ದರು. ಆದರೆ ಪ್ರಸ್ತುತವಾಗಿ ಕೇವಲ 83 ಸಾವಿರ ಮಕ್ಕಳು ಮಾತ್ರ ಬಿಸಿಯೂಟಕ್ಕೆ ಬರುತ್ತಿದ್ದಾರೆ.

ಯಾಕೆ ಬರುತ್ತಿಲ್ಲ ಮಕ್ಕಳು?:

ಪಾಲಕರು ಗುಳೆ ಹೋದ ಸಂದರ್ಭದಲ್ಲಿ ಹಾಗೂ ಕೂಲಿ ಕೆಲಸಕ್ಕೆ ಹೋಗುವವರ ಮಕ್ಕಳು ಒಪ್ಪಿಗೆ ಪತ್ರ ಕೊಟ್ಟಿದ್ದರು. ಕೇವಲ ಮಧ್ಯಾಹ್ನದ ಬಿಸಿಯೂಟ ಶಾಲೆಗಳಲ್ಲಿ ಸಿಗುವುದರಿಂದ ಬೆಳಗ್ಗೆ, ರಾತ್ರಿ ಊಟಕ್ಕೆ ಸಮಸ್ಯೆ, ಗುಳೆ ಹೋಗುವವರ ಮಕ್ಕಳಿಗೆ ವಸತಿ ಸಮಸ್ಯೆ ತಲೆದೋರಿದ್ದರಿಂದ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಈ ಹಿನ್ನೆಲೆ ಒಪ್ಪಿಗೆ ಪತ್ರ ಕೊಟ್ಟರೂ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂಬುದು ಗೊತ್ತಾಗಿದೆ.

ಸರ್ಕಾರವೇನೋ ಮಧ್ಯಾಹ್ನದ ಬಿಸಿಯೂಟ ಕೊಡುತ್ತಿದೆ. ಆದರೆ ಇನ್ನುಳಿದ ಸಮಯಗಳಲ್ಲಿ ನಾವು ಮನೆಯಲ್ಲಿ ಇಲ್ಲದಿರುವುದರಿಂದ ಮಕ್ಕಳಿಗೆ ತೊಂದರೆ ಆಗುವ ಹಿನ್ನೆಲೆ ಜೊತೆಗೆ ಕರೆದುಕೊಂಡು ಬಂದಿದ್ದೇವೆ. ನಾವು ಕೆಲಸ ಮಾಡುವ ಸ್ಥಳದಲ್ಲಿ ಅಥವಾ ಸಂಬಂಧಿಕರ ಮನೆಗಳಲ್ಲಿ ಬಿಟ್ಟು ಕೆಲಸ ಮಾಡುತ್ತಿದ್ದೇವೆ.

- ಅನ್ನಪೂರ್ಣ ಚಿಕ್ಕೊಂಡ, ಮಗುವಿನ ತಾಯಿ.

ಸರ್ಕಾರದ ಸೂಚನೆಯಂತೆ ಆರಂಭದಲ್ಲಿ ಬಹಳಷ್ಟು ಮಕ್ಕಳು ಬಿಸಿಯೂಟ ಸೇವಿಸಲು ಬರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಇದೀಗ ಒಪ್ಪಿಗೆ ಕೊಟ್ಟ ಮಕ್ಕಳಲ್ಲೂ ಅರ್ಧದಷ್ಟು ಮಕ್ಕಳು ಶಾಲೆಗಳಿಗೆ ಬಾರದ ಹಿನ್ನೆಲೆ, ಯಾವ ಯಾವ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲವೋ ಅಂತಹ ಶಾಲೆಗಳಲ್ಲಿ ಬಿಸಿಯೂಟ ನಿಲ್ಲಿಸಲಾಗಿದೆ. ನಿತ್ಯ ಮಕ್ಕಳು ಬರುವ ಶಾಲೆಗಳಲ್ಲಿ ತಪ್ಪದೆ ಅನ್ನ-ಸಾರು ಬಿಸಿಯೂಟ ನೀಡಲಾಗುತ್ತಿದೆ.

- ಶಂಕರ ಕುಂಬಾರ, ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ವಿಭಾಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ