- ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ
- ‘ನಟ್, ಬೋಲ್ಟ್’ ಹೇಳಿಕೆ ವಿರುದ್ಧದ ಟೀಕೆಗೆ ಕಿಡಿ----
ಆಹ್ವಾನಿಸಿಲ್ಲ ಎಂಬುದು ಸುಳ್ಳುಚಿತ್ರೋತ್ಸವಕ್ಕೆ ತಮಗೆ ಆಹ್ವಾನ ಬಂದಿಲ್ಲ ಎಂದು ಚಿತ್ರರಂಗದ ಕೆಲವರು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಆರೋಪ. ಎಲ್ಲರಿಗೂ ಆಹ್ವಾನ ಪತ್ರಿಕೆ ತಲುಪಿಸಿದ್ದೇವೆ. ಆಹ್ವಾನ ಪತ್ರಿಕೆ ತೆಗೆದುಕೊಂಡು ಹೋದಾಗ ಕೆಲವರು ಮನೆಯಲ್ಲಿ ಇರಲಿಲ್ಲ, ಕೆಲವರು ಮನೆಗಳಿಗೆ ಬೀಗ ಹಾಕಿದ್ದರು. ಯಾರು ಮನೆಗಳಲ್ಲಿ ಇರಲಿಲ್ಲವೋ ಅವರಿಗೆ ಆಹ್ವಾನ ಪತ್ರಿಕೆ ತಲುಪಿಸುವುದು ತಡವಾಗಿದೆ.- ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ----ಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನಿಸಿಲ್ಲನಟ ಕಿಚ್ಚ ಸುದೀಪ್ ಅವರಿಗೆ ಚಲನಚಿತ್ರೋತ್ಸವಕ್ಕೆ ಅಕಾಡೆಮಿ ಹಾಗೂ ಸಾಧು ಕೋಕಿಲ ಅವರಿಂದ ಯಾವುದೇ ಆಹ್ವಾನ ತಲುಪಿಲ್ಲ, ಸುದೀಪ್ ಅಷ್ಟೆ ಅಲ್ಲ, ಯಶ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರಿಗೆ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ತಲುಪಿಲ್ಲ, ಇಲ್ಲಿ ಉಪ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ. ಎಲ್ಲಾ ಕಲಾವಿದರಿಗೂ ಹೀಗೆ ಆಗಿದೆ.- ಚಕ್ರವರ್ತಿ ಚಂದ್ರಚೂಡ್, ಸುದೀಪ್ ಆಪ್ತಡಿಕೆಶಿ ಕಿಡಿನುಡಿ
- ನಾನು ರಾಜ್ಯದ ಹಿತಕ್ಕೋಸ್ಕರ ಮಾತನಾಡಿದ್ದೇನೆ- ಚಲನಚಿತ್ರೋತ್ಸವ ಯಾರಿಗಾಗಿ ಮಾಡಿರೋದು?
- ನನಗೂ ಚಿತ್ರರಂಗ ಉಳಿಯಬೇಕೆಂಬ ಆಸೆಯಿದೆ- ಮಾತು ಒರಟಾಗಿರಬಹುದು, ಆದ್ರೆ ಸತ್ಯ ಹೇಳಿದ್ದೇನೆ
- ಶೈಲಿ ಸರಿಯಿಲ್ಲದಿದ್ದರೆ ಸರಿಪಡಿಸಿಕೊಳ್ತೇನೆ: ಡಿಸಿಎಂ--ಕನ್ನಡಪ್ರಭ ವಾರ್ತೆ ಬೆಂಗಳೂರು
‘ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ. ಅವರು ಬೆಳೆಯಬೇಕು ಎಂದರೆ ಸರ್ಕಾರ ಹಾಗೂ ಜನ ಬೇಕು. ನಾನು ಅವರಿಗೆಲ್ಲ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ನಾನು ರಾಜ್ಯದ ಹಿತಕ್ಕಾಗಿ ಮಾತನಾಡಿದ್ದೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.ನಟ್ಟು-ಬೋಲ್ಟು ವಿಚಾರವಾಗಿ ವಿಪಕ್ಷಗಳು ಹಾಗೂ ಕೆಲ ಚಿತ್ರರಂಗದ ಪ್ರಮುಖರ ಟೀಕೆಗೆ ವಿಧಾನಸೌಧಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ಅವರು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಟೀಕೆ ಮಾಡಲಿ ಎಂದೇ ನಾನು ಹೇಳಿಕೆ ನೀಡಿದ್ದು. ನಾನು ಅವರಿಗೆಲ್ಲ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ, ಸಹಾಯ ಪಡೆದವರಿಗೆ ಗೊತ್ತಿದೆ. ನಾನು ಅವರಿಗೆ ರಾಜ್ಯದ ಹಿತಕ್ಕಾಗಿ ಹೇಳಿದ್ದೇನೆ. ನೆಲ, ಜಲ, ಭಾಷೆ ಉಳಿಯಬೇಕು ಎಂದ ಅವರು, ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವ ಯಾರಿಗಾಗಿ ಮಾಡಿರೋದು? ಅವರ ಕ್ಷೇತ್ರದ ಬಗ್ಗೆ ಅವರೇ ಪ್ರಚಾರ ಮಾಡಿಕೊಳ್ಳದಿದ್ದರೆ ನಾವು ಬೆಳಗ್ಗೆ, ಸಂಜೆ ಪ್ರಚಾರ ಮಾಡಿಕೊಳ್ಳಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.ಚಿತ್ರರಂಗದವರಿಗೆ ಆಹ್ವಾನವನ್ನೇ ನೀಡಿಲ್ಲ ಎನ್ನುವ ನಾಗಾಭರಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಆಹ್ವಾನ ನೀಡದೇ ಇರಬಹುದು. ಈ ಬಗ್ಗೆ ನಮ್ಮ ಇಲಾಖೆಯ ತಪ್ಪಿದೆಯೋ ಅಥವಾ ಇನ್ಯಾರ ತಪ್ಪಿದೆಯೋ ಗೊತ್ತಿಲ್ಲ. ಆದರೆ ಈ ಕಾರ್ಯಕ್ರಮ ಅವರದ್ದು. ಟೀಕೆ ಮಾಡಿದರೆ ನನಗೆ ಬೇಸರವಿಲ್ಲ. ನಾವು ತಪ್ಪು ಮಾಡಿದ್ದರೆ ಸರಿ ಮಾಡಿಕೊಳ್ಳೋಣ, ಅವರು ತಪ್ಪು ಮಾಡಿದ್ದರೆ ಅವರು ಸರಿಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.ಬಂದಿರುವ ಯೋಗ ಉಳಿಸಿಕೊಂಡು ಹೋಗಲಿ:
ಒಂದೆರಡು ಸಿನಿಮಾಗಳಿಂದ ಚಿತ್ರರಂಗಕ್ಕೆ ಉತ್ತಮ ಯೋಗ ಬಂದಿದೆ. ಬಂದಿರುವ ಯೋಗವನ್ನು ಉಳಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ. ನಾನು ನನ್ನ ಹಿತವಚನವನ್ನು ಹಳ್ಳಿ ಭಾಷೆಯಲ್ಲಿ ಒರಟಾಗಿ ಹೇಳಿದ್ದೇನೆ. ನನಗೂ ಚಿತ್ರರಂಗ ಉಳಿಯಬೇಕು ಎನ್ನುವ ಆಸೆಯಿದೆ. ನನ್ನ ಮಾತು ಒರಟಾಗಿರಬಹುದು. ಆದರೆ ನನಗೆ ಬಣ್ಣ ಕಟ್ಟಿ ಮಾತನಾಡುವುದು ಬರುವುದಿಲ್ಲ. ನಾನು ನೇರವಾಗಿಯೇ ಮಾತನಾಡುತ್ತೇನೆ. ಶೈಲಿ ಸರಿ ಇಲ್ಲದಿದ್ದರೆ ಸರಿಪಡಿಸಿಕೊಳ್ಳುತ್ತೇನೆ. ಆದರೆ ಸತ್ಯವನ್ನೇ ಹೇಳಿದ್ದೇನೆ ಎಂದರು.ರಾಜ್‌ಕುಮಾರ್ ಇವರಿಗೆ ಮಾದರಿ ಅಲ್ಲವೇ?:
ಮೇಕೆದಾಟು ಹೋರಾಟ ಕಾಂಗ್ರೆಸ್ ರೂಪಿಸಿದ ಹೋರಾಟ. ಚಿತ್ರರಂಗದವರು ಹೇಗೆ ಭಾಗವಹಿಸಲು ಸಾಧ್ಯ ಎಂಬ ಪ್ರಶ್ನೆಗೆ, ರಾಜ್ಯದ ನೆಲ, ಜಲ ಭಾಷೆ ರಕ್ಷಣೆಗೆ ಹೋರಾಟ ಮಾಡಬೇಕು. ಹಾಗಾದರೆ ಕಳಸಾ ಬಂಡೂರಿ ಹೋರಾಟಕ್ಕೆ ಚಿತ್ರರಂಗದವರು ಏಕೆ ಹುಬ್ಬಳ್ಳಿಗೆ ಹೋದರು? ರಾಜಕುಮಾರ್ ಅವರು ಪಕ್ಷ ಭೇದ ಮರೆತು ಹೋರಾಟಕ್ಕೆ ಏಕೆ ಬರುತ್ತಿದ್ದರು? ಹಾಗಾದರೆ ಈಗಿನ ಚಿತ್ರರಂಗದ ಜವಾಬ್ದಾರಿ ಏನು? ರಾಜಕುಮಾರ್ ಅವರು ಇವರಿಗೆ ಮಾದರಿ ಅಲ್ಲವೇ ಎಂದು ಪ್ರಶ್ನಿಸಿದರು.ರಾಜೇಂದ್ರ ಸಿಂಗ್ ಬಾಬು ವಿರುದ್ಧ ಕಿಡಿ:
ಶಿವಕುಮಾರ್ ಅಧಿಕಾರದ ದರ್ಪದಿಂದ ಹೇಳಿಕೆ ನೀಡಿದ್ದಾರೆ ಎಂಬ ಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹೇಳಿಕೆಗೆ, ರಾಜೇಂದ್ರ ಸಿಂಗ್ ಬಾಬು ನನ್ನ ಗೆಳೆಯ. ಅವರನ್ನು ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದ್ದೆವು. ಅಧಿಕಾರ ದರ್ಪ ಇದ್ದ ಕಾರಣಕ್ಕೇ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದು. ದರ್ಪ ಸುಮ್ಮನೆ ಬರುವುದಿಲ್ಲ. ಜನರು ಕೊಟ್ಟ ಅಧಿಕಾರದಿಂದ ಬರುತ್ತದೆ. ಆ ಅಧಿಕಾರದಿಂದಲೇ ರಾಜೇಂದ್ರಸಿಂಗ್ ಅಂತಹವರಿಗೆ ಅಧಿಕಾರ ಕೊಟ್ಟಿದ್ದು ಎಂದು ಹೇಳಿದರು.----