ಬೆಂಗಳೂರು ನಗರದಲ್ಲಿ ಮತ್ತೆ ಮಳೆರಾಯನ ಆರ್ಭಟ

KannadaprabhaNewsNetwork | Published : Oct 20, 2024 1:58 AM

ಸಾರಾಂಶ

ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ ಜೋರಾಗಿದ್ದು, ಎಲ್ಲೆಡೆ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಅಲ್ಲಕಾಲ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಆರಂಭವಾಗಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು ಬೆಂಗಳೂರು ಮಳೆ ಸುದ್ದಿ, ಬೆಂಗಳೂರು ಮಳೆ, ಬೆಂಗಳೂರು ಹವಾಮಾನ, ಬೆಂಗಳೂರು ತಾಪಮಾನ, ಭಾರತೀಯ ಹವಾಮಾನ ಇಲಾಖೆ,

ರಾಜಧಾನಿ ಬೆಂಗಳೂರಿನಲ್ಲಿ ಕಳೆದೆರಡು ದಿನ ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಶನಿವಾರ ಆರ್ಭಟಿಸಿದೆ. ಮಳೆಯಿಂದ ಮರ ಧರೆಗುರುಳಿ, ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ಪರದಾಡಿದರು.

ಶನಿವಾರ ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿ, ಅಲ್ಲಲ್ಲಿ ಮಳೆ ಸುರಿಯಿತು. ಮಧ್ಯಾಹ್ನ ಕೆಲ ಸಮಯ ಬಿಸಿಲಿನ ವಾತಾವರಣ ಕಂಡಿತಾದರೂ ಹೆಚ್ಚು ಸಮಯ ಇರಲಿಲ್ಲ. ಸಂಜೆಯಾಗುತ್ತಿದಂತೆ ಧಾರಾಕಾರವಾಗಿ ಮಳೆ ಸುರಿಯಿತು.

ಮೆಜೆಸ್ಟಿಕ್, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಕೆ.ಆರ್. ಮಾರ್ಕೆಟ್, ಹೆಬ್ಬಗೋಡಿ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಸಂಪಂಗಿರಾಮನಗರ, ಚಾಲುಕ್ಯ ಸರ್ಕಲ್, ವಿಧಾನಸೌಧ, ಹೆಬ್ಬಾಳ, ಜಕ್ಕೂರು, ಬಾಣಸವಾಡಿ, ವಿದ್ಯಾರಣ್ಯಪುರ, ಮಾರತ್ ಹಳ್ಳಿ, ಕೋರಮಂಗಲ, ಬಿಟಿಎಂ ಲೇಔಟ್, ಜಯನಗರ, ಮಲ್ಲೇಶ್ವರ, ಬಸವೇಶ್ವರನಗರ, ರಾಜಾಜಿನಗರ, ಚಾಮರಾಜಪೇಟೆ, ಸದಾಶಿವನಗರ, ರಾಮಮೂರ್ತಿನಗರ, ಕೆ.ಆರ್. ಪುರ, ರಾಜರಾಜೇಶ್ವರಿನಗರ ಮತ್ತಿತರ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ ಮತ್ತು ಸಂಜೆ ಮಳೆ ಸುರಿದಿದೆ.

ಎಡಬಿಡದೇ ಧಾರಾಕಾರವಾಗಿ ಸುರಿದ ಭಾರೀ ಮಳೆ ಪರಿಣಾಮ ನಗರದ ರಸ್ತೆಗಳಿಗೆ ನೀರು ನುಗ್ಗಿ ಕೆರೆಯಂತಾಗಿದ್ದವು. ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು. ರಾಜಾಜಿನಗರದ ಶಿವನಹಳ್ಳಿ ಸಿಗ್ನಲ್‌ ಬಳಿ ರಸ್ತೆಗೆ ಅಡ್ಡಲಾಗಿ ಮರದ ರೆಂಬೆ ಕೊಂಬೆಗಳು ಬಿದ್ದಿದ್ದು, ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಪಾಲಿಕೆ ಸಿಬ್ಬಂದಿ ತೆರವು ಕಾರ್ಯ ಕೈಗೊಂಡಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾದರೆ, ಮೇಲ್ಸುತೇವೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ನಗರದ ಕೆಲವು ಅಂಡರ್‌ಪಾಸ್‌ಗಳಲ್ಲಿ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಆದರೆ, ಕೆಲವು ನಿಮಿಷ ಮಳೆ ಬಿದ್ದು ನಂತರ ನೀರು ಹರಿಯುವಿಕೆ ಕಡಿಮೆಯಾಗಿತ್ತು.

ಬಾಕ್ಸ್...

ತಗ್ಗು ಪ್ರದೇಶದ ಜನತೆಗೆ ಎಚ್ಚರ

ಮುಂದಿನ ಎರಡು ದಿನ ಮಳೆಯಾಗುವ ಮೂನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್, ಸಾಯಿಲೇಔಟ್, ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್, ಚೌಡಪ್ಪ ಲೇಔಟ್ ಸೇರಿ ಇತರೆ ಬಡಾವಣೆಗಳ ಜನತೆ ಎಚ್ಚರಿಕೆ ಇರಬೇಕಿದೆ. ರಾತ್ರೋರಾತ್ರಿ ಮಳೆಯಿಂದಾಗಿ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಿಬಿಎಂಪಿ ಸಿಬ್ಬಂದಿಯನ್ನು ಪಂಪ್ ಸೆಟ್‌ಗಳ ಸಮೇತ ನಿಯೋಜನೆ ಮಾಡಲಾಗಿದೆ.ಬಾಕ್ಸ್...

ನಾಳೆ ಯೆಲ್ಲೋ ಅಲರ್ಟ್‌

ದಕ್ಷಿಣ ಒಳನಾಡಿನಲ್ಲಿ ಮುಂದಿನ ನಾಲ್ಕು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅ.21ರ ಸೋಮವಾರ 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ. ಅಕ್ಟೋಬರ್ 1 ರಿಂದ 19 ರವರೆಗೆ ಬೆಂಗಳೂರಿನಲ್ಲಿ ವಾಡಿಕೆಯಂತೆ 105 ಮಿಮೀ ಬದಲು 160 ಮಿಮೀ ಸುರಿದಿದೆ.ಬಾಕ್ಸ್...

ಜಕ್ಕೂರಲ್ಲಿ 4.3 ಸೆಂ.ಮೀ. ಮಳೆ

ನಗರದಲ್ಲಿ ಸರಾಸರಿ 1.4 ಸೆಂ.ಮೀ ಮಳೆಯಾಗಿದೆ. ಜಕ್ಕೂರಿನಲ್ಲಿ ಅತಿ ಹೆಚ್ಚು 4.3 ಸೆಂ.ಮೀ ಮಳೆಯಾಗಿದೆ. ಹೊರಮಾವು 3.2, ವಿದ್ಯಾರಣ್ಯಪುರ 3, ವನ್ನಾರ್‌ ಪೇಟೆ, ಕೊಡಿಗೆಹಳ್ಳಿಯಲ್ಲಿ ತಲಾ 2.8, ವಿ.ನಾಗೇನಹಳ್ಳಿ, 2.7, ಚೌಡೇಶ್ವರಿ, ಈಸ್ಟ್‌ ಬಾಣಸವಾಡಿ ತಲಾ 2.5, ಪುಲಕೇಶಿನಗರದಲ್ಲಿ 2.1 ಸೆ.ಮೀ ಮಳೆಯಾದ ವರದಿಯಾಗಿದೆ.

Share this article