ಮತ್ತೆ ಮಳೆಯ ಅಬ್ಬರ, ಪ್ರವಾಹದ ಆತಂಕ

KannadaprabhaNewsNetwork |  
Published : Jul 08, 2024, 12:35 AM IST
ಹೊನ್ನಾವರದ ಕರ್ನಲ್ ಹಿಲ್ ಬಳಿ ಚತುಷ್ಪಥ ಹೆದ್ದಾರಿ ಮೇಲೆ ಕುಸಿದ ಗುಡ್ಡ. | Kannada Prabha

ಸಾರಾಂಶ

ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಭಾರಿ ಮಳೆ ಆರಂಭವಾಯಿತು. ಆಗಾಗ ಬಿರುಗಾಳಿಯೂ ಬೀಸುತ್ತಿದ್ದುದರಿಂದ ಜನಜೀವನದಲ್ಲಿ ವ್ಯತ್ಯಯ ಉಂಟಾಯಿತು.

ಕಾರವಾರ: ಜಿಲ್ಲಾದ್ಯಂತ ಶನಿವಾರ ಇಳಿಮುಖವಾಗಿದ್ದ ಮಳೆ ಭಾನುವಾರ ಮತ್ತೆ ಅಬ್ಬರಿಸುತ್ತಿದೆ. ವ್ಯಾಪಕ ಬಿರುಗಾಳಿ ಮಳೆಯಿಂದಾಗಿ ಮತ್ತೆ ಪ್ರವಾಹ ಭೀತಿ ತಲೆದೋರಿದೆ. ಕುಮಟಾದಲ್ಲಿ ಒಂದು ಮನೆ ಕುಸಿದರೆ, ಇನ್ನೊಂದು ಮನೆಯ ಗೋಡೆ ಉರುಳಿದೆ. ಹೊನ್ನಾವರದಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿದು ಹಾಗೂ ಅರಬೈಲ ಘಟ್ಟದ ಹೆದ್ದಾರಿಯಲ್ಲಿ ಮರ ಉರುಳಿ ಸಂಚಾರಕ್ಕೆ ವ್ಯತ್ಯಯವಾಗಿತ್ತು.

ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಭಾರಿ ಮಳೆ ಆರಂಭವಾಯಿತು. ಆಗಾಗ ಬಿರುಗಾಳಿಯೂ ಬೀಸುತ್ತಿದ್ದುದರಿಂದ ಜನಜೀವನದಲ್ಲಿ ವ್ಯತ್ಯಯ ಉಂಟಾಯಿತು.

ಕಾರವಾರ ಹಾಗೂ ಭಟ್ಕಳದಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿದೆ. ಹೊನ್ನಾವರ, ಕುಮಟಾ ಹಾಗೂ ಅಂಕೋಲಾದಲ್ಲೂ ಆಗಾಗ ಭಾರಿ ಮಳೆಯಾಗುತ್ತಿದೆ. ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಜೋಯಿಡಾದಲ್ಲೂ ನಿರಂತರವಾಗಿ ಮಳೆಯಾಗುತ್ತಿದೆ. ಇತರೆಡೆಗಳಲ್ಲೂ ಆಗಾಗ ಮಳೆಯಾಗುತ್ತಿದೆ.

ಕುಮಟಾದ ಕೋಟೆಗುಡ್ಡೆ ಎಂಬಲ್ಲಿ ಒಂದು ಮನೆ ಕುಸಿದಿದೆ. ಅದಕ್ಕೆ ಹೊಂದಿಕೊಂಡೇ ಇರುವ ಇನ್ನೊಂದು ಮನೆಯ ಗೋಡೆ ಕುಸಿದಿದೆ. ಹೊನ್ನಾವರದ ಕರ್ನಲ್ ಹಿಲ್ ಬಳಿ ಚತುಷ್ಪಥ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದರಿಂದ ಒಂದು ಕಡೆಯಿಂದ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಗಂಟೆಗೂ ಹೆಚ್ಚು ಕಾಲದ ತರುವಾಯ ಮಣ್ಣನ್ನು ತೆರವುಗೊಳಿಸಿ ಎರಡೂ ಕಡೆಯಿಂದ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಅಂಕೋಲಾ ಯಲ್ಲಾಪುರ ನಡುವೆ ಅರಬೈಲ ಘಟ್ಟದಲ್ಲಿ ಹೆದ್ದಾರಿ ಮೇಲೆ ಮರ ಉರುಳಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ನಂತರ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಹೆದ್ದಾರಿ ಮುಕ್ತಗೊಳಿಸಲಾಯಿತು. ಕಾರವಾರದ ಅರಗಾ ಹಾಗೂ ಚೆಂಡಿಯಾದಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಹೊಲ-ಗದ್ದೆಗಳು ಜಲಾವೃತವಾಗಿವೆ. ಭಟ್ಕಳದ ರಂಗೀಕಟ್ಟೆಯಲ್ಲಿ ಚತುಷ್ಪಥ ಹೆದ್ದಾರಿ ಜಲಾವೃತವಾಗಿ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು. ವಾಹನ ಸವಾರರು ಪರದಾಡುವಂತಾಯಿತು. ಸದಾಶಿವಗಡ ಬೆಳಗಾವಿ ಹೆದ್ದಾರಿಯ ಅಣಶಿ ಘಟ್ಟದಲ್ಲಿ ಮಣ್ಣು ಕುಸಿಯುತ್ತಿದೆ. ಇದು ಮುಂದುವರಿದಲ್ಲಿ ಕಾರವಾರ- ಜೋಯಿಡಾ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. 2021ರಲ್ಲಿ ಅಣಶಿ ಘಟ್ಟದಲ್ಲಿ ಭಾರಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಕರಾವಳಿ ತಾಲೂಕುಗಳಲ್ಲಿ ಮೂರು ನಾಲ್ಕು ದಿನಗಳ ಕಾಲ ಬಿಟ್ಟೂ ಬಿಡದೆ ಸುರಿದಿದ್ದ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಕಾಳಜಿ ಕೇಂದ್ರಗಳನ್ನೂ ತೆರೆಯಲಾಗಿತ್ತು. ಶಾಲಾ- ಕಾಲೇಜುಗಳಿಗೆ ರಜೆಯನ್ನೂ ನೀಡಲಾಗಿತ್ತು. ಆದರೆ ಶನಿವಾರ ಮಳೆ ಇಳಿಮುಖವಾಗಿ ಜನತೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಆದರೆ ಭಾನುವಾರ ಬೆಳಗಾಗುತ್ತಿರುವಂತೆ ಮತ್ತೆ ಮಳೆಯ ಆರ್ಭಟ ಶುರುವಾಯಿತು. ಇಂದು 5 ತಾಲೂಕಿನ ಶಾಲೆ- ಕಾಲೇಜಿಗೆ ರಜೆ

ಕಾರವಾರ: ಜಿಲ್ಲೆಯ ಕರಾವಳಿಯ 5 ತಾಲೂಕಿಗೆ ಜು. 8ರಂದು ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಆದೇಶ ಹೊರಡಿಸಿದ್ದಾರೆ. ಈ ತಾಲೂಕಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರ ತಾಲೂಕಿನ ಎಲ್ಲ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!