ಅನಿರ್ದಿಷ್ಟಾವಧಿಗೆ ಮತ್ತೆ ಶಿರಾಡಿ ಬಂದ್‌

KannadaprabhaNewsNetwork |  
Published : Jul 31, 2024, 01:09 AM IST
30ಎಚ್ಎಸ್ಎನ್3ಎ : ಕುಂಬರಡಿ ಗ್ರಾಮ ಸಮೀಪ ಹಾರ್ಲೇಕೂಡಿಗೆ-ನಡಹಳ್ಳಿ ರಸ್ತೆ ಕುಸಿದಿರುವುದು.  | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ೭೫ರ ದೊಡ್ಡತಪ್ಪಲೆ ಗ್ರಾಮದ ಸಮೀಪ ಮತ್ತೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್‌, ಟಿಪ್ಪರ್‌, ಎರಡು ಕಾರುಗಳು ಸೇರಿದಂತೆ ಆರು ವಾಹನಗಳು ಮಣ್ಣಿನಲ್ಲಿ ಸಿಲುಕಿದ್ದು ವಾಹನದಲ್ಲಿದ್ದವರೆಲ್ಲರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ. ಮತ್ತೆ ಅನಿರ್ದಿಷ್ಟಾವಧಿಗೆ ಶಿರಾಡಿ ಬಂದ್‌ ಘಾಟ್‌ ಸಂಚಾರ ಬಂದ್‌ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನಲ್ಲಿ ಬಿಡದೇ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ತಾಲೂಕು ತತ್ತರಿಸಿದೆ. ಶನಿವಾರ ಸಂಪೂರ್ಣ ಬಿಡುವು ನೀಡಿದ್ದ ಮಳೆ ಭಾನುವಾರ ತುಂತುರಾಗಿ ಸುರಿಯುತಿತ್ತು. ಆದರೆ, ಸೋಮವಾರ ಮಧ್ಯಾಹ್ನದಿಂದ ಮತ್ತೆ ಬಿರುಸುಗೊಂಡ ಪರಿಣಾಮ ಮತ್ತೆ ಭೂಕುಸಿತದಿಂದಾಗಿ ಶಿರಾಡಿಯಲ್ಲಿ ಅನಿರ್ದಿಷ್ಟಾವಧಿಗೆ ಸಂಚಾರ ಬಂದ್‌ ಆಗಿದೆ.

ರಾಷ್ಟ್ರೀಯ ಹೆದ್ದಾರಿ ೭೫ರ ದೊಡ್ಡತಪ್ಪಲೆ ಗ್ರಾಮದ ಸಮೀಪ ಮತ್ತೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್‌, ಟಿಪ್ಪರ್‌, ಎರಡು ಕಾರುಗಳು ಸೇರಿದಂತೆ ಆರು ವಾಹನಗಳು ಮಣ್ಣಿನಲ್ಲಿ ಸಿಲುಕಿದ್ದು ವಾಹನದಲ್ಲಿದ್ದವರೆಲ್ಲರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ. ಕಳೆದ ವಾರ ಸಹ ಇದೇ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಮಾರುತಿ ವ್ಯಾನ್‌ ಒಂದು ಮಣ್ಣಿನಡಿ ಸಿಲುಕಿದ್ದು ಇಬ್ಬರು ಗಾಯಗೊಂಡಿದ್ದರು.ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಹೆದ್ದಾರಿಯ ಎರಡು ಬದಿಯಲ್ಲಿ ಹತ್ತಾರು ಕಿ.ಮೀ. ವಾಹನಗಳು ಸರತಿಸಾಲಿನಲ್ಲಿ ನಿಂತಿದ್ದು ಘಾಟ್‌ರಸ್ತೆಯಲ್ಲಿ ಮಳೆಯ ನಡುವೆ ಊಟತಿಂಡಿ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಇದೇ ಪ್ರದೇಶದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಿರಂತರ ಭೂಕುಸಿತ ಸಂಭವಿಸುತ್ತಿದ್ದು ನಿರಂತರವಾಗಿ ಮಣ್ಣು ತೆರವುಗೊಳಿಸಲಾಗುತ್ತಿದೆಯಾದರೂ ಮಳೆ ಹೆಚ್ಚಾದಂತೆ ಭೂಕುಸಿತ ಸಹ ಹೆಚ್ಚಾಗಿದೆ. ಹೆಚ್ಚಿನ ಅನಾಹುತ ಸಂಭವಿಸಿದಂತೆ ಹೆದ್ದಾರಿ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದ್ದು ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ.

ನಿರಂತರ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಲವೆಡೆ ಭೂಕುಸಿತ ಸಂಭವಿಸಿದ್ದರೆ, ನೀರಿನ ಹರಿವು ಇಳಿಕೆಗೊಂಡಿದ್ದ ಎಲ್ಲ ನದಿಗಳಲ್ಲಿ ಮತ್ತೆ ಪ್ರವಾಹ ಸೃಷ್ಟಿಯಾಗಿದೆ. ಕಳೆದ ಗುರುವಾರ ಹಾಗೂ ಶುಕ್ರವಾರದ ಮಳೆಗೆ ಪ್ರವಾಹ ಸೃಷ್ಟಿಯಾಗಿದ್ದರಿಂದ ಪಟ್ಟಣದ ಅಜಾದ್ ರಸ್ತೆಯ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿತ್ತು. ಇದರಿಂದಾಗಿ ತಾಲೂಕು ಆಡಳಿತ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿತ್ತು. ಪರಿಣಾಮ, ಮನೆಯ ಸಾಮಗ್ರಿಗಳೊಂದಿಗೆ ವಿವಿಧೆಡೆ ತೆರಳಿದ್ದ ಸ್ಥಳೀಯರು ಎರಡು ದಿನಗಳ ಮಳೆ ಬಿಡುವು ನೀಡಿದ್ದರಿಂದ ಮನೆಯ ಸಾಮಗ್ರಿಗಳೊಂದಿಗೆ ವಾಪಸ್ಸಾಗಿದ್ದರು. ಆದರೆ, ಮತ್ತೆ ಪ್ರವಾಹ ಮನೆಬಾಗಿಲಿಗೆ ಬಂದಿರುವುದರಿಂದ ಮತ್ತೆ ಮನೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೇತುವೆ ಮುಳುಗಡೆ: ತಾಲೂಕಿನ ಮಠಸಾಗರ- ಕೃಷ್ಣಪುರ ಸಂಪರ್ಕ ಸೇತುವೆಯ ಮೇಲೆ ಸುಮಾರು ಆರು ಅಡಿಯಷ್ಟು ನೀರು ಹರಿಯುತ್ತಿದ್ದು ಸಮೀಪದ ಅಡಿಕೆ ಹಾಗೂ ಕಾಫಿ ತೋಟ ಸಂಪೂರ್ಣ ಮುಚ್ಚಿಹೋಗಿದ್ದು ಕೊಟ್ಯಂತರ ರು. ನಷ್ಟ ಸಂಭವಿಸಿದೆ. ಸೇತುವೆ ಮುಳುಗಡೆಯಿಂದ ಕೃಷ್ಣಾಪುರ ಸೇರಿದಂತೆ ಮತ್ತೆರಡು ಗ್ರಾಮಗಳು ರಸ್ತೆ ಸಂಪರ್ಕವಿಲ್ಲದೆ ದ್ವೀಪಗಳಾಗಿವೆ. ಪಟ್ಟಣದಿಂದ ಹೆಬ್ಬಸಾಲೆ ಹಾಗೂ ಹೆನ್ನಲಿ ಗ್ರಾಮ ಸಂಪರ್ಕ ರಸ್ತೆ ಹೇಮಾವತಿಯ ಪ್ರವಾಹದಿಂದ ಮತ್ತೆ ಮುಚ್ಚಿಹೋಗಿದೆ. ಸ್ಥಳಕ್ಕೆ ತಾಲೂಕಿನ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

೨೦೦ ಮೀಟರ್ ರಸ್ತೆ ಕುಸಿತ: ಇನ್ನೂ ಕಳೆದ ಶುಕ್ರವಾರ ಹಾರ್ಲೇ-ನಡಹಳ್ಳಿ ಗ್ರಾಮ ಸಂಪರ್ಕಿಸುವ ಕಾಂಕ್ರೀಟ್‌ ರಸ್ತೆಯ ಅಡಿಭಾಗದಲ್ಲಿ ಮಣ್ಣು ಕುಸಿದು ಅಪಾಯದ ಮುನ್ಸೂಚನೆ ನೀಡಿತ್ತು. ಆದರೆ, ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ಸುಮಾರು ೨೦೦ ಮೀಟರ್ ರಸ್ತೆ ಸುಮಾರು ನೂರು ಅಡಿಗಳ ಆಳದವರಗೆ ಕೊಚ್ಚಿಹೋಗಿದ್ದು ನಡಹಳ್ಳಿ,ದೇಖ್ಲಾ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಬಂದ್ ಆಗಿದೆ.

ಸ್ಥಳಕ್ಕೆ ಉಪಾವಿಭಾಗಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಹೆದ್ದಾರಿ ೧೦೭ರ ಬಾಗರವಳ್ಳಿ ಗ್ರಾಮದ ಸಮೀಪ ಭೂಕುಸಿತ ಸಂಭವಿಸಿದ್ದು, ರಸ್ತೆ ಅಪಾಯದ ಸ್ಥಿತಿ ತಲುಪಿದೆ. ಇದೇ ರಸ್ತೆಯ ಹೆತ್ತೂರು ಗ್ರಾಮದ ಸಮೀಪ ಶುಕ್ರವಾರ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ಮತ್ತೆ ಭೂಮಿ ಕುಸಿದಿದ್ದು ರಾಜ್ಯ ಹೆದ್ದಾರಿ ಅಪಾಯದ ಸ್ಥಿತಿ ತಲುಪಿದೆ. ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಕಿ ಮುಚ್ಚುವ ಮೂಲಕ ಮಳೆ ನೀರು ಪ್ರವೇಶಿಸದಂತೆ ಎಚ್ಚರಿಕೆ ವಹಿಸಲಾಗಿದೆ.

ಯಸಳೂರು ಗ್ರಾಮದ ದೊಡ್ಡ ಭತ್ತದ ಗದ್ದೆ ಬಯಲು ಹೇಮಾವತಿಯ ಹಿನ್ನೀರಿಗೆ ಸಂಪೂರ್ಣ ಮುಳುಗಡೆಯಾಗಿದೆ. ಈ ಭತ್ತದ ಗದ್ದೆಯಲ್ಲಿ ನೂರು ಎಕರೆಗೂ ಅಧಿಕ ಗದ್ದೆಗಳಲ್ಲಿ ನಾಟಿ ಮಾಡಲಾಗಿದ್ದು, ಅಪಾರ ನಷ್ಟ ಸಂಭವಿಸಿದೆ.

ರೈಲ್ವೆ ಹಳಿ ದುರಸ್ತಿ ಮುಂದಕ್ಕೆ: ಶಿರಾಡಿಘಾಟ್‌ನಲ್ಲಿ ಕಳೆದ ೧೨ ಗಂಟೆಯಲ್ಲಿ ೩೪೦ ಮೀ.ಮೀಟರ್ ಮಳೆಯಾಗಿದೆ. ಇದರಿಂದಾಗಿ ತಾಲೂಕಿನ ಕಡಗರಹಳ್ಳಿ ಸಮೀಪ ಭೂಕುಸಿತ ಸಂಭವಿಸಿ ಹಾನಿಗೊಂಡಿರುವ ರೈಲ್ವೆ ಹಳಿ ದುರಸ್ಥಿಗೆ ಸಮಸ್ಯೆಯಾಗಿದ್ದು ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿದೆಡೆಯಿಂದ ರೈಲ್ವೆ ಹಳಿ ದುರಸ್ತಿಗಾಗಿ ೭೦೦ ಕಾರ್ಮಿಕರನ್ನು ಕರೆಸಲಾಗಿದೆ. ಆದರೆ, ದುರಸ್ತಿ ಕಾರ್ಯಕ್ಕೆ ಮಳೆ ತೀವ್ರ ಪ್ರಮಾಣದಲ್ಲಿ ಅಡ್ಡಿ ಉಂಟುಮಾಡಿದ್ದು ಕುಸಿದ ಹಳಿಯ ಸಮೀಪ ನದಿಯಂತೆ ಮಳೆ ನೀರು ಹರಿಯುತ್ತಿರುವುದರಿಂದ ದುರಸ್ತಿ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. * ಬಾಕ್ಸ್‌: ಡೀಸಿ ವಿರುದ್ಧ ಶಾಸಕರ ಆಕ್ರೋಶ:

ಸಕಲೇಶಪುರ ತಾಲೂಕಿನಲ್ಲಿ ಹೆಚ್ಚಿರುವ ಮಳೆಯ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಶಾಸಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಆದರೆ, ಜಿಲ್ಲಾಧಿಕಾರಿ ಶಾಸಕರ ಮನವಿಗೆ ಕವಡೆಕಾಸಿನ ಕಿಮ್ಮತ್ತು ನೀಡಲಿಲ್ಲ. ಇದರಿಂದ ಬೇಸತ್ತ ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಲ್ಲಿ ಮನವಿ ಮಾಡಿದ್ದು, ಮಳೆಯಿಂದ ಏನೇ ಅನಾಹುತವಾದರು ಜಿಲ್ಲಾಧಿಕಾರಿಯೆ ಹೊಣೆ ಎಂದು ಕಿಡಿಕಾರಿದ್ದಾರೆ.

ಜಿಲ್ಲಾಧಿಕಾರಿ ಮಾತುಗಳನ್ನು ಹಲವರು ಖಂಡಿಸಿದ್ದು ಯಾವುದೇ ಮಾಹಿತಿಗಾಗಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದರೂ ಸಾರ್ವಜನಿಕರೊಂದಿಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದೂ ದೂರಿದ್ದಾರೆ.

* ಬಾಕ್ಸ್‌: ದೇಗುಲದಲ್ಲಿ ನಾಗರ ಹಾವು ಪ್ರತ್ಯಕ್ಷ

ಪಟ್ಟಣದ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನಕ್ಕೆ ನುಗ್ಗಿದ್ದ ಪ್ರವಾಹ, ಇಳಿಕೆ ಕಂಡಿದ್ದರಿಂದ ದೇವಸ್ಥಾನ ಆಡಳಿತ ಮಂಡಳಿ ದೇವಾಲಯ ಸ್ವಚ್ಛಗೊಳಿಸುವ ಕೆಲಸ ನಡೆಸಿತ್ತು. ಆದರೆ, ಮತ್ತೆ ಪ್ರವಾಹ ದೇವಸ್ಥಾನವನ್ನು ಆವರಿಸಿದೆ. ಈ ಮಧ್ಯೆ ದೇವಾಲಯದಲ್ಲಿ ನಾಗರ ಹಾವೊಂದು ಕಂಡು ಬಂದಿದ್ದು ಜನರು ನೂಕುನುಗ್ಗಲಿನಲ್ಲಿ ನಾಗರ ಹಾವನ್ನು ಕಣ್ತುಂಬಿಕೊಂಡರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ