ಕನ್ನಡಪ್ರಭ ವಾರ್ತೆ ಬೇಲೂರು
ಜಮೀನಿಗೆ ಹೋಗುವ ರಸ್ತೆಯ ಜಾಗವನ್ನು ಮುಚ್ಚಿದ್ದು ಕೇಳಲು ಹೋದರೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಾನೂನುಬದ್ಧವಾಗಿ ಹೋರಾಡಲು ಸರ್ವೆ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ರೈತರೊಬ್ಬರು ವಿಷದ ಬಾಟಲಿ ಹಿಡಿದು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ತಾಲೂಕಿನ ಕರೆಕಟ್ಟೆಹಳ್ಳಿ ಗ್ರಾಮದ ನಾಗರತ್ನಮ್ಮ ಕೊಂ ವೀರೇಗೌಡರ ಪುತ್ರ ಗುರುಮೂರ್ತಿ ಅವರು ನಮಗೆ ನ್ಯಾಯ ಸಿಗದಿದ್ದರೆ ಕಂದಾಯ ಇಲಾಖೆ ಮುಂದೆ ವಿಷ ಸೇವಿಸುವುದಾಗಿ ಪ್ರತಿಭಟನೆ ನಡೆಸಿದರು. ತಾಲೂಕಿನ ಕರೆಕಟ್ಟೆಹಳ್ಳಿ ಗ್ರಾಮದ ಸರ್ವೆ ನಂಬರ್ ೯೮/೯೯ ಹಾಗೂ ೬೫ರಲ್ಲಿ ಗಾಡಿ ಜಾಡು ನಕಾಶೆ ರಸ್ತೆ ಇದ್ದರೂ ಕೆಲ ಬಲಾಢ್ಯರು ಅದನ್ನು ಒತ್ತುವರಿ ಮಾಡಿಕೊಂಡಿದ್ದು ಸುಮಾರು ೪೦ರಿಂದ ೫೦ ರೈತ ಕುಟುಂಬದವರಿಗೆ ತಿರುಗಾಡಲು ರಸ್ತೆ ಇಲ್ಲದೆ ತಮ್ಮ ಜಾನುವಾರುಗಳೊಂದಿಗೆ ತಮ್ಮ ಜಮೀನಿಗೆ ಹೋಗದ ಸ್ಥಿತಿ ಉಂಟಾಗಿದೆ. ಅದನ್ನು ಕೇಳಲು ಹೋದರೆ ನಮ್ಮ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು.ಈಗಾಗಲೇ ಸುಮಾರು ಐದಾರು ಬಾರಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಸರ್ವೆ ಇಲಾಖೆಯಲ್ಲಿ ಬಾರಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಇಲ್ಲಿಯ ರಾಮಕೃಷ್ಣ ಅವರಿಗೆ ದಂಡಾಧಿಕಾರಿಗಳು ಜಾಗ ಪರಿಶೀಲಿಸಿ ಸಂಪೂರ್ಣ ಮಾಹಿತಿ ನೀಡುವಂತೆ ಒತ್ತುವರಿದಾರರಿಗೆ ನೋಟಿಸ್ ನೀಡುವಂತೆ ಎಚ್ಚರಿಕೆ ನೀಡಿದ್ದರೂ ಇದರ ಬಗ್ಗೆ ರಾಮಕೃಷ್ಣ ಅವರು ತಲೆಕೆಡಿಸಿಕೊಳ್ಳದೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಪ್ರತಿ ಬಾರಿ ಇಲ್ಲಿಗೆ ಬಂದಾಗ ಭರವಸೆ ನೀಡಿ ನಮ್ಮನ್ನು ಸಾಗುಹಾಕುತ್ತಿದ್ದಾರೆ . ಒತ್ತುವರಿದಾರರು ಬಲಾಡ್ಯರು ಆಗಿರುವುದರಿಂದ ಈ ಅಧಿಕಾರಿಗಳು ಶಾಮೀಲಾಗಿ ನಮಗೆ ತೊಂದರೆಕೊಡುತ್ತಿದ್ದು ಇದರಿಂದ ಮನನೊಂದು ನಮಗೆ ನ್ಯಾಯ ಸಿಗದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿ ಎಂದು ತಮ್ಮ ಅಳಲು ತೋಡಿಕೊಂಡರು.ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಆದೇಶ ಮಾತನಾಡಿ, ಒಬ್ಬ ಮಾಜಿ ಶಾಸಕರ ಗ್ರಾಮದಲ್ಲಿ ಒಬ್ಬ ಬಡ ರೈತನಿಗೆ ಇಷ್ಟು ತೊಂದರೆಯಾಗುತ್ತಿದೆ ಎಂದರೆ ಇನ್ನು ಉಳಿದವರ ಕಥೆ ಏನು. ರೈತರ ಸಮಸ್ಯೆಗಳು ಸಾಕಷ್ಟಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ರೈತರ ಸಮಸ್ಯೆಗಳ ಆಲಿಸುವುದನ್ನು ಬಿಟ್ಟು ದೇವಸ್ಥಾನದ ಬಾಗಿಲು ಕಾಯಲು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇನ್ನು ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇದರ ಬಗ್ಗೆ ಕೂಡಲೇ ಶಾಸಕರು ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
* ಹೇಳಿಕೆರೈತರ ಸಮಸ್ಯೆಗಳು ಇದ್ದಾಗ ನಮಗೆ ಮಾಹಿತಿ ನೀಡಬೇಕು. ಈಗಾಗಲೇ ಎಲ್ಲಾ ಅಧಿಕಾರಿಗಳು ಹಾಸನಾಂಬೆ ದೇಗುಲದಲ್ಲಿ ಇರುವುದರಿಂದ ನಾನೇ ಖುದ್ದಾಗಿ ಈ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ಸಿಗುವಂತಹ ಕೆಲಸ ಮಾಡುತ್ತೇನೆ. ಇಲ್ಲಿ ನಮಗೆ ರೈತರ ಹಿತ ಮುಖ್ಯ ಹೊರತು ಬೇರೆ ವಿಷಯಗಳಿಗೆ ನಾವು ಕಿವಿಗೊಡುವುದಿಲ್ಲ. ದಂಡಾಧಿಕಾರಿಗಳು ಹಾಗೂ ಸರ್ವೆ ಅಧಿಕಾರಿಗಳಿಗೆ ಸೂಚಿಸಿ ಕೂಡಲೇ ಸ್ಥಳ ಪರಿಶೀಲಿಸುವಂತೆ ಹೇಳಿದ್ದೇನೆ. ಎಚ್ ಕೆ ಸುರೇಶ್ , ಶಾಸಕ