ಎರಡನೇ ಹಂತದ ಎಚ್‌ಎಸ್‌ಆರ್‌ ಲೇಔಟ್‌ ಮೆಟ್ರೋ ನಿಲ್ದಾಣಕ್ಕೆ ಮರ ಕತ್ತರಿಸಲು ಒಪ್ಪಿಗೆ

KannadaprabhaNewsNetwork |  
Published : Sep 05, 2024, 02:23 AM ISTUpdated : Sep 05, 2024, 07:40 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಎರಡನೇ ಹಂತದ ಎಚ್‌ಎಸ್‌ಆರ್ ಲೇಔಟ್ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ಅನುಮತಿ ನೀಡಿದೆ.

 ಬೆಂಗಳೂರು :  ಎರಡನೇ ಹಂತದ ಎಚ್‌ಎಸ್‌ಆರ್ ಲೇಔಟ್ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ಅನುಮತಿ ನೀಡಿದೆ.

ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳನ್ನು ಕತ್ತರಿಸುತ್ತಿರುವುದನ್ನು ಆಕ್ಷೇಪಿಸಿ ದತ್ತಾತ್ರೇಯ ಟಿ.ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್‌ ಟ್ರಸ್ಟ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಅನುಮತಿ ನೀಡಿದೆ.

ಈ ವೇಳೆ ಬಿಎಂಆರ್‌ಸಿಎಲ್ ಪರ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ಆಗರದಿಂದ ಇಬ್ಬಲೂರು ಮಾರ್ಗದ ಎಚ್‌ಎಸ್‌ಆರ್ ಲೇಔಟ್ ಮೆಟ್ರೋ ರೈಲು ನಿಲ್ದಾಣದ ಆಗಮನ ಮತ್ತು ನಿರ್ಗಮನ ಭಾಗದಲ್ಲಿ ಬರುವ 20 ಮರಗಳನ್ನು ಸ್ಥಳಾಂತರಿಸಲು 41 ಮರಗಳನ್ನು ತೆರವುಗೊಳಿಸಲು ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 2024ರ ಜು.20ರಂದು ಅನುಮತಿ ನೀಡಿ ಅಧಿಕೃತ ಜ್ಞಾಪನಾ ಪತ್ರ ನೀಡಿದ್ದಾರೆ. ಅದೇ ರೀತಿ ತೆರವುಗೊಳಿಸಲು ಅನುಮತಿಸಿರುವ 41 ಮರಗಳ ಪೈಕಿ 21 ಮರಗಳು ಯೋಜನಾ ಪ್ರದೇಶದಲ್ಲಿ ಬರಲಿವೆ. ಇನ್ನುಳಿದ 20 ಮರಗಳು ಒಆರ್‌ಆರ್ ನಂಬರ್ 140ರಿಂದ ಒಆರ್‌ಆರ್ ನಂಬರ್ 175ರ ಮಧ್ಯೆ ಹೊರವರ್ತುಲ ರಸ್ತೆಯ ಎಡ ಮತ್ತು ಬಲಬದಿ ಬರಲಿವೆ. ಹಾಗಾಗಿ, ಮರಗಳ ತೆರವು ಹಾಗೂ ಸ್ಥಳಾಂತರಕ್ಕೆ ಅನುಮತಿ ನೀಡಬೇಕು ಎಂದು ಕೋರಿದರು.

ಅರ್ಜಿದಾರರ ಪರ ವಕೀಲ ಪ್ರದೀಪ್ ನಾಯಕ್‌, ಬಿಎಂಆರ್‌ಸಿಎಲ್‌ ಮನವಿಗೆ ನಮ್ಮ ಆಕ್ಷೇಪವಿಲ್ಲ. ಸ್ಥಳಾಂತರಗೊಳಿಸಿದ ಮರಗಳನ್ನು ಎಲ್ಲಿ ಸ್ಥಳಾಂತರಿಸಲಾಗಿದೆ. ಅವುಗಳು ವಸ್ತುಸ್ಥಿತಿ ಮತ್ತು ಬಾಳಿಕೆ ಹಾಗೂ ತೆರವುಗೊಳಿಸಿದ ಮರಗಳಿಗೆ ಒಂದು ಮರಕ್ಕೆ ಪರ್ಯಾಯವಾಗಿ 10 ಮರಗಳನ್ನು ನೆಡಬೇಕು ಎಂದು ಹೈಕೋರ್ಟ್ ಹೇಳಿದೆ. ಆ ಬಗ್ಗೆ ಪ್ರತಿ ಮೂರು ತಿಂಗಳಿಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಆ ಕುರಿತು ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಸಂರಕ್ಷಣಾಧಿಕಾರಿ 2024ರ ಜು.20ರಂದು ಹೊರಡಿಸಿರುವ ಅಧಿಕೃತ ಜ್ಞಾಪನಾ ಪತ್ರದಂತೆ 20 ಮರಗಳನ್ನು ಸ್ಥಳಾಂತರಿಸಲು ಮತ್ತು 41 ಮರಗಳನ್ನು ತೆರವುಗೊಳಿಸಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ