ಹಳೆಯ ಬಾಕಿ ಚುಕ್ತಾ ಮಾಡಿದರೆ ಮಾತ್ರ ಸಕ್ಕರೆ ಕಾರ್ಖಾನೆ ಆರಂಭಿಸಲು ಒಪ್ಪಿಗೆ

KannadaprabhaNewsNetwork | Published : Oct 13, 2023 12:15 AM

ಸಾರಾಂಶ

ಕಬ್ಬು ಕಟಾವು ಹಂಗಾಮು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗುರುವಾರ ಹಳಿಯಾಳದ ಮರಾಠ ಭವನದಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಿತು. ಧಾರವಾಡ, ಮುಂಡಗೋಡ, ಅಳ್ನಾವರ, ದಾಂಡೇಲಿ, ಜೋಯಿಡಾ ಹಾಗೂ ಅಕ್ಕಪಕ್ಕದ ತಾಲೂಕುಗಳ ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಹಳಿಯಾಳ

ಪಟ್ಟಣದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ಪಾವತಿಸಬೇಕಾಗಿದ್ದ 2022-23ನೇ ಸಾಲಿನ ಬಾಕಿ ₹150 ಹಾಗೂ 2016-17ನೇ ಸಾಲಿನ ₹305 ಪಾವತಿಸಿಯೇ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಬೇಕು ಎಂಬ ನಿರ್ಣಯವನ್ನು ಕಬ್ಬು ಬೆಳೆಗಾರರು ಸರ್ವಾನುಮತದಿಂದ ಕೈಗೊಂಡಿದ್ದಾರೆ. ಗುರುವಾರ ಮರಾಠ ಭವನದಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಿತು. ಧಾರವಾಡ, ಮುಂಡಗೋಡ, ಅಳ್ನಾವರ, ದಾಂಡೇಲಿ, ಜೋಯಿಡಾ ಹಾಗೂ ಅಕ್ಕಪಕ್ಕದ ತಾಲೂಕುಗಳ ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು. ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹಳಿಯಾಳ ತಾಲೂಕು ಕಬ್ಬು ಬೆಳೆಗಾರರ ಸಂಘದವರು ಸಭೆ ಆಯೋಜಿಸಿದ್ದರು.

ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಪ್ರಸ್ತುತ ಕೃಷಿ ಬೇಸಾಯದ ಪರಿಸ್ಥಿತಿಯನ್ನು ಅವಲೋಕಿಸಿದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ವಿ. ಘಾಡಿ, ಧಾರವಾಡ ಜಿಲ್ಲಾ ಅಧ್ಯಕ್ಷ ನಿಜಗುಣಿ ಕೆಲಗೇರಿ, ಉಪಾಧ್ಯಕ್ಷ ಉಳವಪ್ಪ ಬಳಿಗೇರ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟೆ, ತಾಲೂಕು ಅಧ್ಯಕ್ಷ ಶಂಕರ ಕಾಜಗಾರ, ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಮುಖಂಡರಾದ ಪ್ರಕಾಶ ಪಾಕ್ರೆ, ರೈತ ಮುಖಂಡ ನಾಗೇಂದ್ರ ಜಿವೋಜಿ, ಸುರೇಶ ಶಿವಣ್ಣನವರ ಹಾಗೂ ಇತರರು ಕಾರ್ಖಾನೆಯ ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು. ಈ ಬಾರಿ ಕಬ್ಬಿನ ಇಳುವರಿಯು ಕಡಿಮೆಯಾಗಿದ್ದರಿಂದ ಕಬ್ಬು ಖರೀದಿಸಲು ಕಾರ್ಖಾನೆಗಳು ಪೈಪೋಟಿ ನಡೆಸಿದ್ದು, ಅದಕ್ಕಾಗಿ ಕಬ್ಬು ಬೆಳೆಗಾರರು ಕಬ್ಬು ಕೊಟ್ಟು ಮೋಸ ಹೋಗಬಾರದು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕಳೆದ ವರ್ಷ ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ನಡೆಸಿದ 54 ದಿನಗಳ ಆಹೋರಾತ್ರಿ ಹೋರಾಟ, ಉಪವಾಸ ಸತ್ಯಾಗ್ರಹ, ಸೇರಿದಂತೆ ಪ್ರತಿಭಟನೆಗೆ ಸಂಬಂಧಿಸಿದಂತೆ ವಿವಿಧ ರೈತ ಮುಖಂಡರ ಮೇಲೆ ದಾಖಲಾಗಿರುವ ಪ್ರಕರಣಗಳ ಬೆಳವಣಿಗೆಗಳನ್ನು ಸಭೆಯಲ್ಲಿ ಮೆಲಕು ಹಾಕಲಾಯಿತು. ಹಳಿಯಾಳ ಪಿಎಸ್‌ಐ ವಿನೋದ ರೆಡ್ಡಿ, ಕ್ರೈಮ್ ಪಿಎಸ್‌ಐ ಅಮೀನ್ ಅತ್ತಾರ ಹಾಗೂ ಸಿಬ್ಬಂದಿ ಆಗಮಿಸಿದ್ದರು.

ಪ್ರಮುಖರಾದ ಪ್ರಮುಖರಾದ ಪುಂಡಲೀಕ್ ಗೋಡೆಮನಿ, ಸಾತೋರಿ ಗೋಡೆಮನಿ, ರಾಮದಾಸ ಬೆಳಗಾಂವಕರ, ಅನ್ವರ ಪುಂಗಿ, ಇಮ್ತಿಯಾಜ ಮನಿಯಾರ ಹಾಗೂ ಇತರರು ಇದ್ದರು.ನಿರ್ಣಯಗಳು:

ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಕೊನೆಯಲ್ಲಿ ಕಬ್ಬು ಬೆಳೆಗಾರರು ಒಕ್ಕೂರಲಿನಿಂದ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಿದರು.

1. ಕಳೆದ ಸಾಲಿನಲ್ಲಿ ಸರ್ಕಾರ ಘೋಷಿಸಿದ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ ₹150 ಪಾವತಿಸಬೇಕು.

2. 2016-17ನೇ ಸಾಲಿನಲ್ಲಿ ಕಾರ್ಖಾನೆಯವರು ಘೋಷಿಸಿದ ಪ್ರತಿ ಟನ್ ಕಬ್ಬಿಗೆ ₹305 ಬಾಕಿ ಹಣವನ್ನು ಪಾವತಿಸಬೇಕು.

3. ಈ ಎಲ್ಲ ಬಾಕಿ ಹಣವನ್ನು ಕಬ್ಬು ಬೆಳೆಗಾರರ ಖಾತೆಗೆ ಜಮಾ ಮಾಡಬೇಕು.

4. 2017ರಿಂದ 2022-23ರ ವರೆಗೆ ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಟ ಮಾಡಲು ಆಕರಿಸಿದ ದರವನ್ನು ಪರಿಶೀಲಿಸಿ ಹೆಚ್ಚುವರಿಯಾಗಿ ಆಕರಿಸಿದ ಹಣವನ್ನು ರೈತರಿಗೆ ಪಾವತಿಸಬೇಕು.

5. 2023-24ನೇ ಸಾಲಿನ ಎಫ್‌ಆರ್‌ಪಿ ದರ ನಿಗದಿಯಾದ ಮೇಲೆ ರೈತರೊಂದಿಗೆ ಕಾರ್ಖಾನೆಯವರು ದ್ವಿಪಕ್ಷೀಯ ಒಪ್ಪಂದ ಮಾಡಬೇಕು.

Share this article