ಹಿಂಗಾರು ಬಿತ್ತನೆ ವಿಳಂಬವಾದರೂ ಕೃಷಿ ಚಟುವಟಿಕೆ ಚುರುಕು

KannadaprabhaNewsNetwork | Published : Nov 13, 2024 12:00 AM

ಸಾರಾಂಶ

ಮಳೆಯಿಂದ ಮುಂಗಾರು ಬೆಳೆ ನಾಶವಾದರೂ ರೈತರು ಕೈಕಟ್ಟಿ ಕುಳಿತುಕೊಳ್ಳದೆ ಮತ್ತೆ ಹಿಂಗಾರು ಬಿತ್ತನೆಯತ್ತ ಮುಖ ಮಾಡಿದ್ದಾರೆ. ರೈತರು ಸಾಲ ಮಾಡಿ ಹಿಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ. ಈಗಾಗಲೇ ರೈತರು ಟ್ರ್ಯಾಕ್ಟರ್‌ ಯಂತ್ರೋಪಕರಣಗಳಿಂದ ಕಡಲೆಬೀಜ ಅತಿ ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಲ್ಲಿ ತೊಡಗಿದ್ದಾರೆ.

ಈಶ್ವರ ಜಿ. ಲಕ್ಕುಂಡಿ

ನವಲಗುಂದ:

ತಾಲೂಕಿನಾದ್ಯಂತ ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಹಿಂಗಾರು ಬಿತ್ತನೆ ವಿಳಂಬವಾಗಿತ್ತು. ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದರಿಂದ ರೈತರು ಹಿಂಗಾರು ಬಿತ್ತನೆಯೂ ಎಲ್ಲಿ ಸ್ಥಗಿತವಾಗುತ್ತದೆಯೋ ಎಂಬ ಭಯದಲ್ಲಿ ಮುಳುಗಿದ್ದರು. ನಂತರ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ರೈತರು ಬಿತ್ತನೆಯ ಕಾರ್ಯ ಚುರುಕುಗೊಳಿಸಿದ್ದಾರೆ. ವಿಳಂಬವಾದರೂ ಕೂಡ ಕಡಲೆ, ಜೋಳ ಸೇರಿದಂತೆ ಅನೇಕ ಬೀಜಗಳ ಬಿತ್ತನೆಗೆ ಮುಂದಾಗಿದ್ದಾರೆ.

ಮಳೆಯಿಂದ ಮುಂಗಾರು ಬೆಳೆ ನಾಶವಾದರೂ ರೈತರು ಕೈಕಟ್ಟಿ ಕುಳಿತುಕೊಳ್ಳದೆ ಮತ್ತೆ ಹಿಂಗಾರು ಬಿತ್ತನೆಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಮುಂಗಾರು ಬಿತ್ತನೆಯಲ್ಲಿ ಬೆಳೆಗಳು ಪ್ರವಾಹ ಹಾಗೂ ಮಳೆಯಿಂದ ಹಾನಿಯಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವಾದರೂ ರೈತರು ತಮ್ಮ ಕಾಯಕವನ್ನು ಬಿಡದೆ ಮುಂದುವರಿಸಿದ್ದಾರೆ.

ಈಗಾಗಲೇ ಮುಂಗಾರು ಬಿತ್ತನೆಗೆ ಅಂತ ಸಾಲ, ಸೋಲ ಮಾಡಿ ಬಿತ್ತನೆ ಮಾಡಿ ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿಯೇ ಪ್ರಕೃತಿ ವಿಕೋಪದಿಂದ ಬೆಳೆದಿರುವ ಹೆಸರು, ಹತ್ತಿರ, ಗೋವಿನಜೋಳ, ಮೆಣಸಿನಕಾಯಿ, ಈರುಳ್ಳಿ, ಶೇಂಗಾ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿ ಹೋಗಿವೆ.

ರೈತರು ಸಾಲ ಮಾಡಿ ಹಿಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ. ಈಗಾಗಲೇ ರೈತರು ಟ್ರ್ಯಾಕ್ಟರ್‌ ಯಂತ್ರೋಪಕರಣಗಳಿಂದ ಕಡಲೆಬೀಜ ಅತಿ ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಲ್ಲಿ ತೊಡಗಿದ್ದಾರೆ. ಕೆಲವು ರೈತರು ರೈತ ಸಂಪರ್ಕ ಕೆಂದ್ರಗಳಲ್ಲಿ ಹಣ ನೀಡಿ ಕಡಲೆ ಬೀಜಗಳನ್ನು ಖರೀದಿ ಮಾಡಿದರೆ, ಇನ್ನು ಕೆಲವರು ತಮ್ಮ ಹತ್ತಿರ ಬಿಡಿಗಾಸು ಇಲ್ಲದಿರುವುದರಿಂದ ಖಾಸಗಿ ಆಗ್ರೋಗಳಲ್ಲಿ ಸಾಲ ಮಾಡಿ ಬೀಜ, ಗೊಬ್ಬರ ಖರೀದಿ ಮಾಡಿ ಬಿತ್ತನೆ ಮಾಡಲು ಮುಂದಾಗಿದ್ದಾರೆ.

ರೈತರು ಕೇವಲ 1 ಎಕರೆ ಬಿತ್ತನೆ ಮಾಡಲು ಸುಮಾರು ₹12-15 ಸಾವಿರಗಳಷ್ಟು ಬಿತ್ತನೆಗೆ ಖರ್ಚಾಗುತ್ತದೆ. ಆದರೆ, ಬೀಜಗಳ ಬಿತ್ತನೆ ವಿಳಂಬವಾಗಿದ್ದರಿಂದ ಮುಂದಿನ ದಿನಗಳಲ್ಲಿ ಕೀಟಬಾಧೆ, ಕಾಯಿಕೊರಕ ಸೇರಿದಂತೆ ಅನೇಕ ರೋಗಗಳಿಗೆ ಎಲ್ಲಿ ತುತ್ತಾಗುತ್ತವೆಯೋ ಎಂಬ ಭಯದಲ್ಲಿಯೇ ಬಿತ್ತನೆ ಮಾಡುತ್ತಿದ್ದಾರೆ.

30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ

ನವಲಗುಂದ ತಾಲೂಕಿನಲ್ಲಿ ಹಿಂಗಾರು ಬಿತ್ತನೆ ಕ್ಷೇತ್ರ 56 ಸಾವಿರ ಹೆಕ್ಟೇರ್ ಪ್ರದೇಶವಿದೆ. ಹಿಂಗಾರು ಬಿತ್ತನೆಯಲ್ಲಿ ಕಡಲೆ, ಜೋಳ, ಗೋಧಿ ಸೇರಿದಂತೆ ಅನೇಕ ಬೀಜಗಳನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ. ಈಗಾಗಲೇ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಕಡಲೆ ಬಿತ್ತನೆ ಮಾಡಲಾಗಿದೆ. ಇನ್ನುಳಿದ ಕಡೆಗಳಲ್ಲಿ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ ಎಂದು ಕೃಷಿ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.

ನವಲಗುಂದ ತಾಲೂಕಿನಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈಗ ಹಿಂಗಾರು ಬಿತ್ತನೆಯಲ್ಲೂ ಒಂದು ತಿಂಗಳು ವಿಳಂಬವಾಗಿದೆ. ಬಿತ್ತಿದ ಬೆಳೆಗಳು ಬದಲಾದ ವಾತಾವರಣಕ್ಕೆ ರೋಗಗಳಿಗೆ ತುತ್ತಾಗುತ್ತವೆಯೋ ಎಂಬ ಭಯದಲ್ಲಿದ್ದೇವೆ ಎಂದು ಯುವ ರೈತ ಮೈಲಾರೆಪ್ಪ ವೈದ್ಯ ಹೇಳಿದರು.

Share this article