ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮುರು
ಕಳೆದ ಬೀಕರ ಬರಗಾಲ ಇಡೀ ತಾಲೂಕಿನ ರೈತಾಪಿ ವರ್ಗದ ಬದುಕನ್ನು ಕಸಿದುಕೊಂಡಿತ್ತು. ಜೀವ ಜಲವಿಲ್ಲದೆ ಕೆರೆ ಕಟ್ಟೆಗಳು ಒಣಗಿ ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದ ರೈತರಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದೆ.
ಉತ್ತಮ ಮಳೆಯಿಂದ ದೇವಸಮುದ್ರ ಹಾಗೂ ರಾಂಪುರ ಸುತ್ತಲಿನ ಗ್ರಾಮಗಳಲ್ಲಿ ಕೆರೆ ಕಟ್ಟೆಗಳಿಗೆ ಜೀವ ಜಲ ಬಂದಿದೆ. ರಾಂಪುರ ಸಮೀಪದ ಗುಂಡೇರಹಳ್ಳ ತುಂಬಿ ಹರಿಯುತ್ತಿದ್ದು, ದೇವಸಮುದ್ರ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಕೋನಾಪುರ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಸಿದ್ದಾಪುರ ಕೆರೆಗೆ ನೀರು ಹರಿದು ಬಂದಿದ್ದು ಎಲ್ಲೆಡೆ ಕಳೆ ತುಂಬಿದೆ.ತಾಲೂಕಿನ ಕಸಬಾ ಹೋಬಳಿಗೆ ಹೋಲಿಕೆ ಮಾಡಿಕೊಂಡಲ್ಲಿ ದೇವಸಮುದ್ರ ಹೋಬಳಿ ವ್ಯಾಪ್ತಿಯ ರಾಂಪುರ ಮತ್ತು ದೇವಸಮುದ್ರ ಸುತ್ತಲಿನ ಹಳ್ಳಿಗಳಲ್ಲಿ ಬಾರಿ ಮಳೆಯಾಗಿದ್ದು, ಕೃಷಿ ಹೊಂಡ, ಕೆರೆ ಕಟ್ಟೆಗಳಿಗೆ ಅಪಾರ ನೀರು ಹರಿದು ಬಂದಿದೆ. ಕಸಬಾ ಹೋಬಳಿಯಲ್ಲಿ ರಾಯಾಪುರ ಹೊರತು ಪಡಿಸಿದರೆ ಉಳಿದೆಡೆ ಸಾಧಾರಣ ಮಳೆಯಾಗಿದೆ.
ತಾಲೂಕಿನಲ್ಲಿ ಈ ಬಾರಿ 32,500 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಿದ್ದು, ಅದರಲ್ಲಿ ಶೇಂಗಾ 22 ಸಾವಿರ ಹೆಕ್ಟೇರ್ ಇದೆ. ಹತ್ತಿ 950 ಹೆಕ್ಟೇರ್ ಬಿತ್ತನೆ ಗುರಿ ಇದ್ದರೂ ಗುರಿಗಿಂತಲೂ ಹೆಚ್ಚು ಬಿತ್ತನೆಯಾಗುತ್ತಿದೆ.ಮೆಕ್ಕೆ ಜೋಳ 750 ಜೋಳ 900, ಸಿರಿ ಧಾನ್ಯ 500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಹತ್ತಿ ಗುರಿಗಿಂತಲೂ 2 ಸಾವಿರಕ್ಕೂ ಹೆಚ್ಚಿನ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ತಾಲೂಕಿನಲ್ಲಿ ಶನಿವಾರ ರಾತ್ರಿ ಮೊಳಕಾಲ್ಮುರು 11.4, ರಾಯಾಪುರ 57.8, ಬಿಜಿಕೆರೆ 7.8, ರಾಂಪುರ 65.1, ದೇವಸಮುದ್ರ 70 ಮಿ ಮೀ ಮಳೆಯಾಗಿದೆ. ಇದರಿಂದಾಗಿ ರೈತರಲ್ಲಿ ಹರ್ಷ ವ್ಯಕ್ತವಾಗುತ್ತಿದ್ದು, ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ.