ಕೃಷಿ ಪತ್ತಿನ ಸಂಘದ ಚುನಾವಣೆ : ಸಚಿವ ಚಲುವರಾಯ ಸ್ವಾಮಿ ಪುತ್ರ ಸಚ್ಚಿನ್‌ಗೆ ಗೆಲುವು

KannadaprabhaNewsNetwork |  
Published : Apr 14, 2025, 01:15 AM ISTUpdated : Apr 14, 2025, 12:50 PM IST
13ಕೆಎಂಎನ್ ಡಿ35 | Kannada Prabha

ಸಾರಾಂಶ

ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚ್ಚಿನ್ ಭರ್ಜರಿ ಗೆಲುವು ಸಾಧಿಸಿದ್ದಾರೆ.  

  ನಾಗಮಂಗಲ : ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚ್ಚಿನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಸಾಲಗಾರರ ಕ್ಷೇತ್ರದ 9 ಸ್ಥಾನಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಜೆಡಿಎಸ್‌ಗೆ ತೀವ್ರ ಮುಖಭಂಗ ಉಂಟಾಗಿದೆ.

ಸಂಘದ ಆಡಳಿತ ಮಂಡಳಿ 12 ಮಂದಿ ನಿರ್ದೇಶಕರ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಜವರಪ್ಪ ಮತ್ತು ಧನಂಜಯ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 10 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದರು.

ಸಾಲಗಾರರಲ್ಲದ ಕ್ಷೇತ್ರದ ಒಟ್ಟು 444 ಮತದಾರರ ಪೈಕಿ 426 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಸಚಿವ ಚಲುವರಾಯಸ್ವಾಮಿ ಪುತ್ರ ಸಚ್ಚಿನ್ 260 ಮತ ಪಡೆದು ಗೆಲುವು ಸಾಧಿಸಿದರೆ, ಜೆಡಿಎಸ್ ಬೆಂಬಲಿತ ರಾಮು 160 ಮತ ಪಡೆದು ಪರಾಭವಗೊಂಡರು. 3 ಮತಗಳು ತಿರಸ್ಕೃತಗೊಂಡಿದ್ದವು.

ಸಾಲಗಾರರ ಕ್ಷೇತ್ರದ 9 ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಒಟ್ಟು 21 ಮಂದಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಒಟ್ಟು 789 ಮತದಾರರ ಪೈಕಿ 710 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಕಾಂಗ್ರೆಸ್ ಬೆಂಬಲಿತ ಕೆ.ಜೆ.ಉಮೇಶ್‌ (519), ಜೆ.ಪಿ.ಉಮೇಶ್‌ (484), ಬಿ.ಎಂ.ಪ್ರಕಾಶ್ (410), ರಜನಿ (432), ಟಿ.ಎಚ್.ರಾಜು (328), ಶಿವಣ್ಣ (414), ಎನ್.ಡಿ.ಸಣ್ಣದೇವೇಗೌಡ (384), ಸವಿತ (424) ಹಾಗೂ ಹನುಮಂತೇಗೌಡ (386) ಮತ ಪಡೆದು ಗೆಲುವು ಸಾಧಿಸಿದರೆ ಜೆಡಿಎಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.

ಸಂಘದ ಚುನಾವಣೆಯಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚ್ಚಿನ್ ಅವರನ್ನು ಶತಾಯಗತಾಯ ಸೋಲಿಸಲೇಬೆಕೆಂದು ಹಠಕ್ಕೆ ಬಿದ್ದಿದ್ದ ಜೆಡಿಎಸ್ ನಾಯಕರು ಸಂಘದ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಎಡೆಬಿಡದೆ ಭೇಟಿ ಕೊಟ್ಟು ಮತದಾರರ ಮನವೋಲಿಸಿ ಚುನಾವಣಾ ತಂತ್ರಗಾರಿಕೆ ನಡೆಸಿದ್ದರು. ಆದರೆ, ಜೆಡಿಎಸ್ ನಾಯಕರ ತಂತ್ರಕ್ಕೆ ಫಲ ಸಿಗಲಿಲ್ಲ.

ಸಂಘದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘದ ಮುಂಭಾಗದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬೃಹತ್ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಜೊತೆಗೆ ಸಚ್ಚಿನ್ ಅವರನ್ನು ಹೊತ್ತು ಮೆರವಣಿಗೆ ಮಾಡಿ ಸಚಿವ ಎನ್. ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಮುಖಂಡರಾದ ಸುನಿಲ್‌ಲಕ್ಷ್ಮೀಕಾಂತ್, ರವಿ, ಉದಯಕಿರಣ್, ಲೋಕೇಶ್, ಮಂಜುನಾಥಗೌಡ, ಎಂ.ಪ್ರಸನ್ನ, ದಾಸೇಗೌಡ, ಶಶಿಗೌಡ, ಸಂಘದ ಸಿಇಓ ಹರೀಶ್ ಸೇರಿದಂತೆ ಸಹಸ್ರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದು ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ಇದು ನನ್ನ ಗೆಲುವಲ್ಲ ಜನರ ಗೆಲುವು:

ನಂತರ ಸಚ್ಚಿನ್ ಮಾತನಾಡಿ, ಸಂಘದಲ್ಲಿ ಸದಸ್ಯತ್ವ ಹೊಂದಿರುವ ಬ್ರಹ್ಮದೇವರಹಳ್ಳಿ ಮತ್ತು ಮಣ್ಣಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮತದಾರರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಹೋರಾಟ, ಬೆಂಬಲ ಮತ್ತು ಆಶೀರ್ವಾದದಿಂದ ಮೊದಲ ಚುನಾವಣೆಯಲ್ಲಿಯೇ ಗೆದ್ದು ಮೊದಲ ಮೆಟ್ಟಿಲಿನಲ್ಲಿಯೇ ಯಶಸ್ಸು ಕಂಡಿದ್ದೇನೆ ಎಂದರು.

ಇದು ನನ್ನ ಗೆಲುವಲ್ಲ ಜನರ ಗೆಲುವು. ಜನರ ನಂಬಿಕೆ ವಿಶ್ವಾಸಕ್ಕೆ ಕಳಂಕ ಬಾರದಂತೆ ಸಂಘದ ಮೂಲಕ ಸದಸ್ಯರಿಗೆ ಸಿಗಬಹುದಾದ ಎಲ್ಲಾ ಬಗೆಯ ಸಾಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಸಚ್ಚಿನ್ ತಿಳಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...