ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಜಿಲ್ಲೆಯಾದ್ಯಂತ ತೀವ್ರ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿ, ಕಾರ್ಮಿಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಉದ್ಯೋಗ ಖಾತ್ರಿ ಲಭ್ಯವಿದೆ, ಆದರೆ ಪಟ್ಟಣಗಳಲ್ಲಿ ವಾಸಿಸುವ ಕೃಷಿ ಕೂಲಿ ಕಾರ್ಮಿಕರಿಗೆ ನರೇಗಾವೂ ಇಲ್ಲ, ಬರಗಾಲ ಕಾಮಗಾರಿಯೂ ಇಲ್ಲ. ಹಾಗಾಗಿ ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗದೇ ಅನ್ಯ ಮಾರ್ಗವಿಲ್ಲದಂತಾಗಿದೆ.
ಪಪಂ ವ್ಯಾಪ್ತಿಯಲ್ಲಿ ಇಲ್ಲ: ಕೇಂದ್ರ ಸರ್ಕಾರ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ನೀಡುವಲ್ಲಿ ಜಾರಿಗೆ ತಂದಿರುವ ನರೇಗಾ ಯೋಜನೆ ಸದ್ಯಕ್ಕೆ ಗ್ರಾಪಂ ಮಟ್ಟದಲ್ಲಿ ಮಾತ್ರ ಅನುಷ್ಠಾನವಾಗುತ್ತಿದೆ. ಆದರೆ ಪಟ್ಟಣ ಮತ್ತು ನಗರಗಳಲ್ಲಿ ಯೋಜನೆ ಇಲ್ಲ, ಬರಗಾಲದಂತಾ ವಿಷಮ ಪರಿಸ್ಥಿತಿಯಲ್ಲಿ ಅವರಿಗೆ ಕೂಲಿ ಎನ್ನುವುದು ಮರೀಚಿಕೆಯಾಗಲಿದೆ. ಹಾಗಾಗಿ ಆ ಪ್ರದೇಶಗಳಲ್ಲಿ ವಾಸಿಸುವ ಕೃಷಿ ಕೂಲಿ ಕಾರ್ಮಿಕರು ಕೆಲಸ ಅರಸಿ ಬೇರೆಡೆ ತೆರಳಬೇಕಾದ ವಿಷಮ ಸ್ಥಿತಿ ನಿರ್ಮಾಣವಾಗಿದೆ.ಜಿಲ್ಲೆಯ 3 ಕಡೆ ಸಮಸ್ಯೆ:ಜಿಲ್ಲೆಯ ನರೇಗಲ್ಲ, ಮುಳಗುಂದ ಹಾಗೂ ರೋಣ ಪಟ್ಟಣಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೊರತೆ ಕಾಡುತ್ತಿದೆ. ಈ ಮೂರು ಪಟ್ಟಣಗಳು ಕೃಷಿ ಪ್ರಧಾನವಾಗಿದ್ದು, ಪ್ರತಿಯೊಂದು ಪಟ್ಟಣಗಳಲ್ಲಿಯೂ ಶೇ 75ಕ್ಕಿಂತಲೂ ಹೆಚ್ಚಿನ ನಿವಾಸಿಗಳು ಕೃಷಿಕರಾಗಿದ್ದಾರೆ. ಈ ಪಟ್ಟಣಗಳಲ್ಲಿ ಕೃಷಿಯೇ ದುಡಿಮೆಯ ಮೂಲ ಆಧಾರವಾಗಿದೆ. ಆದರೆ ಮಳೆ ಕೊರತೆಯಿಂದಾಗಿ ಹೊಲಗಳಲ್ಲಿ ಕೆಲಸವಿಲ್ಲದೇ ಸಾವಿರಾರು ಕೃಷಿ ಕೂಲಿ ಕಾರ್ಮಿಕರ ಕುಟುಂಬಗಳು ತೊಂದರೆ ಎದುರಿಸುತ್ತಿವೆ.
ಒಕ್ಕಲುತನ ಬಿಟ್ಟರೆ ಬೇರೆ ಗೊತ್ತಿಲ್ಲ: ಮುಳಗುಂದ, ರೋಣ ಹಾಗೂ ನರೇಗಲ್ಲ, ಪುರಸಭೆ ಪಟ್ಟಣ ಪಂಚಾಯ್ತಿಗಳಾಗಿ ಮೇಲ್ದರ್ಜೆಗೇರಿವೆ. ಅದು ಕೇವಲ ಜನಸಂಖ್ಯೆಯ ಆಧಾರದಲ್ಲಿ ಮಾತ್ರ, ಆದರೆ ಈ ಪಟ್ಟಣಗಳಲ್ಲಿ ವಾಸಿಸುವವರಿಗೆ ಒಕ್ಕಲುತನ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇಲ್ಲಿ ಯಾವುದೇ ಕೈಗಾರಿಕೆಯೂ ಇಲ್ಲ. ಉತ್ತಮ ಮಳೆಯಾದಲ್ಲಿ ಕೃಷಿ ಕಾಯಕದಲ್ಲಿ ಕೈತುಂಬಾ ಕೆಲಸವಿರುತ್ತದೆ. ಆದರೆ ಮಳೆ ಕೊರತೆ, ಹೊಲಗಳಲ್ಲಿ ಬಿತ್ತನೆ ಇಲ್ಲದೇ ಕೆಲಸವಿಲ್ಲ. ಇತ್ತ ಉದ್ಯೋಗ ಖಾತ್ರಿಯೂ ಸಿಗುತ್ತಿಲ್ಲ ಹಾಗಾಗಿ ಈ ಪಟ್ಟಣಗಳ ಬಡ ಕೃಷಿ ಕೂಲಿ ಕಾರ್ಮಿಕರು ಮತ್ತೆ ಗುಳೆ ಹೋಗಿ ತುತ್ತಿನ ಚೀಲ ತುಂಬಿಸಿಕೊಳ್ಳುವಂತಾಗಿದೆ.ಜನಸಂಖ್ಯೆ: ರೋಣ, 25000, ಮುಳಗುಂದ 20000, ನರಗೇಲ್ಲ 15000 ಜನಸಂಖ್ಯೆಯನ್ನು ಹೊಂದಿದ್ದು, ಒಟ್ಟು ಮೂರು ಪಟ್ಟಣಗಳು ಸೇರಿ 31 ಸಾವಿರ ಕುಟುಂಬಗಳಿದ್ದು, ಕಂದಾಯ ಇಲಾಖೆಯ ಖಾತೆಗಳ ಆಧಾರದಲ್ಲಿ 15 ಸಾವಿರಕ್ಕೂ ಅಧಿಕ ಕೃಷಿ ಕುಟುಂಬಗಳಿವೆ. 35 ಸಾವಿರಕ್ಕೂ ಅಧಿಕ ಜನರು (ರೈತ ಸಂಘದ ಮಾಹಿತಿ) ಕೃಷಿ ಕೂಲಿ ಕಾರ್ಮಿಕರಾಗಿದ್ದು, ಅವರೆಲ್ಲಾ ಒಂದೆಡೆ ಬರಗಾಲ, ಇನ್ನೊಂಡೆಡೆ ಉದ್ಯೋಗ ಖಾತ್ರಿ ಇಲ್ಲದೇ ಸಿಗದೇ ಪರದಾಡುತ್ತಿದ್ದಾರೆ.
ಮುಳಗುಂದ ಪಟ್ಟಣ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿಯೂ ಸಾವಿರಾರು ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರಿದ್ದಾರೆ. ಬರಗಾಲ ಪರಿಸ್ಥಿತಿಯಲ್ಲಿ ಪಟ್ಟಣಗಳಲ್ಲಿ ವಾಸಿಸುವ ಕೃಷಿ ಕೂಲಿ ಕಾರ್ಮಿಕರಿಗೆ ಬರಗಾಲ ಯೋಜನೆ ಸಿಗಬೇಕು ಇಲ್ಲವೇ ಕೇವಲ ಗ್ರಾಪಂಗಳ ವ್ಯಾಪ್ತಿಯಲ್ಲಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಪಟ್ಟಣ ಪ್ರದೇಶಕ್ಕೂ ವಿಸ್ತರಿಸಬೇಕು. ನಮ್ಮ ಸಮಸ್ಯೆ ಕೂಡಲೇ ಬಗೆಹರಿಸಬೇಕು ಎಂದು ಮುಳಗುಂದದ ಯುವ ರೈತ ಮಹಾಂತೇಶ ಗುಂಜಾಳ ಹೇಳಿದರು.ಉದ್ಯೋಗ ಖಾತ್ರಿ ಯೋಜನೆಯ ನಿಯಮದ ಆಧಾರದಲ್ಲಿ ಗ್ರಾಪಂಗಳಲ್ಲಿ ಮಾತ್ರ ನರೇಗಾ ಯೋಜನೆ ಲಭ್ಯವಾಗಲಿದೆ. ಪಟ್ಟಣ ಪ್ರದೇಶಗಳಲ್ಲಿನ ಕೃಷಿ ಕೂಲಿ ಕಾರ್ಮಿಕರಿಗೆ ಅಲ್ಪ ತೊಂದರೆಯಾಗುತ್ತಿದೆ. ಈ ವಿಷಯವನ್ನು ರೈತರು ಕೇಂದ್ರ ಬರ ಅಧ್ಯಯನ ತಂಡದ ಗಮನಕ್ಕೂ ತಂದಿದ್ದಾರೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.