ಕೃಷಿ ಸಮಸ್ಯೆ, ಸವಾಲುಗಳಿಗೆ ಬೇಕಿದೆ ಪರಿಹಾರ: ಕುಲಪತಿ ಡಾ. ಸುರೇಶ

KannadaprabhaNewsNetwork |  
Published : Dec 26, 2024, 01:05 AM IST
25ಡಿಡಬ್ಲೂಡಿ4ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯು ಎಡಿಮ್ ಆಗ್ರೋ ಇಂಡಸ್ಟ್ರೀಸ್‌ ಇಂಡಿಯಾ ಸಹಯೋಗದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಸಸಿಗೆ ನೀರುಣಿಸಿ ಉದ್ಘಾಟಿಸಲಾಯಿತು.  | Kannada Prabha

ಸಾರಾಂಶ

ಕೃಷಿ ಒಂದು ವಿಜ್ಞಾನ. ರೈತರು ಸಾಂಪ್ರದಾಯಿಕ ಕೃಷಿಗೆ ಬದಲಾಗಿ ವೈಜ್ಞಾನಿಕ ನಿಖರ ಕೃಷಿ ಮಾಡಬೇಕಾಗಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು, ರೈತರು ಸಂಘಟಿತರಾಗಿ ಬೇಡಿಕೆಗೆ ಅನುಗುಣವಾದ ಬೆಳೆ, ರೈತ ಉತ್ಪಾದಕ ಸಂಸ್ಥೆ ಮೂಲಕ ಬೆಳೆಗಳ ಮೌಲ್ಯವರ್ಧನೆ ಮಾಡಿ ರೈತರೇ ಉದ್ದಿಮೆದಾರರಾಗಬೇಕು.

ಧಾರವಾಡ:

ಹವಾಮಾನ ವೈಪರೀತ್ಯದ ಈ ದಿನಗಳಲ್ಲಿ ಕೃಷಿ ಕ್ಲಿಷ್ಟಕರವಾಗಿದ್ದು, ಸಮಸ್ಯೆಗಳು, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್‌.ವಿ. ಸುರೇಶ ಹೇಳಿದರು.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯು ಎಡಿಮ್ ಆಗ್ರೋ ಇಂಡಸ್ಟ್ರೀಸ್‌ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಮಾತನಾಡಿದರು.

ಹಸಿರು ಕ್ರಾಂತಿಯ ಮೂಲಕ ಭಾರತ ಆಹಾರ ಭದ್ರತೆ ಪಡೆದ ರಾಷ್ಟ್ರಗಳಲ್ಲಿ ಒಂದಾದರೂ ಏಕ ಬೆಳೆ ಪದ್ಧತಿ, ಹನಿ ನೀರಾವರಿ ಹಾಗೂ ಹೆಚ್ಚು ರಸಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲದ ಕೊರತೆ ಉಂಟಾಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಆಳದ ಕೊಳವೆ ಬಾವಿ ನೀರಿನಲ್ಲಿನ ಫ್ಲೋರೈಡ್ ಮತ್ತು ಇತರೆ ಲವಣಾಂಶ, ಸವಳು ಜವಳು ಸಮಸ್ಯೆ ಕೃಷಿ ಭೂಮಿಯನ್ನು ಬರಡಾಗಿಸುತ್ತಿವೆ. ಅತಿ ಸಣ್ಣ ಹಿಡುವಳಿಗಳು, ಕೃಷಿ ಯಂತ್ರೋಪಕರಣಗಳ ದುಬಾರಿ ವೆಚ್ಚ, ಕೃಷಿ ಕಾರ್ಮಿಕರ ಕೊರತೆ, ರೈತನ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಕಾರಣದಿಂದಾಗಿ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾಗಿಲ್ಲ ಎಂದರು.

ಕೃಷಿ ಒಂದು ವಿಜ್ಞಾನ. ರೈತರು ಸಾಂಪ್ರದಾಯಿಕ ಕೃಷಿಗೆ ಬದಲಾಗಿ ವೈಜ್ಞಾನಿಕ ನಿಖರ ಕೃಷಿ ಮಾಡಬೇಕಾಗಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು, ರೈತರು ಸಂಘಟಿತರಾಗಿ ಬೇಡಿಕೆಗೆ ಅನುಗುಣವಾದ ಬೆಳೆ, ರೈತ ಉತ್ಪಾದಕ ಸಂಸ್ಥೆ ಮೂಲಕ ಬೆಳೆಗಳ ಮೌಲ್ಯವರ್ಧನೆ ಮಾಡಿ ರೈತರೇ ಉದ್ದಿಮೆದಾರರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ, ರೈತರ ಹಿಂದಿನ ಸುಸ್ಥಿರ ಬದುಕನ್ನು ಇಂದಿನ ವಾಣಿಜ್ಯೀಕರಣ ಅಸ್ತವ್ಯಸ್ಥವಾಗಿಸಿದೆ. ರೈತ ಕೃಷಿಗಾಗಿ ಮಾಡಿದ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಉತ್ಪನ್ನಗಳ ಬೆಳೆ ಕಡಿಮೆಯಾಗಿದೆ. ಇದರಿಂದ ಒಕ್ಕಲುತನ ಸಂಕಷ್ಟದಲ್ಲಿದೆ ಎಂದ ಅವರು, ರಾಷ್ಟ್ರ ಮತ್ತು ರಾಜ್ಯಕ್ಕೆ ಸಮಗ್ರ ಕೃಷಿ ನೀತಿಯ ಅವಶ್ಯಕತೆ ಇದೆ ಎಂದರು.

ಕೃಷಿ ತಜ್ಞ ಎಚ್.ಆರ್. ಪ್ರಕಾಶ ರೈತರು ನೀರಿನ ಮಹತ್ವ ಅರಿತುಕೊಳ್ಳಬೇಕು. ನೀರಿಗೂ ಆರ್ಥಿಕ ಬೆಲೆ ಇದೆ ಮತ್ತು ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ನೀರೇ ಪೂರಕ ಎಂದು ಹೇಳಿದರು.

ಪ್ರಗತಿಪರ ರೈತರಾದ ಹೊನ್ನಾಪೂರದ ನಾಗವ್ವ ಮಾರಿಹಾಳ ಮತ್ತು ಜಮಖಂಡಿಯ ಹುಲ್ಯಾಳದ ರುದ್ರಪ್ಪ ಝಲಪಿ ಅವರನ್ನು ಸನ್ಮಾನಿಸಲಾಯಿತು. ಎಡಿಮ್‌ ಅಗ್ರೋದ ರಕ್ಷಿತಾ ಕೆ.ಆರ್. ಡಾ. ಮೋಹನ್ ನಾಯಕ, ಡಾ. ರಘುಪ್ರಸಾದ, ಡಾ. ಮಹಾದೇವ ಮೂರ್ತಿ, ಹಾವೇರಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳ ರೈತರು ಇದ್ದರು. ಪ್ರಭಾಕರ ಹಾದಿಮನಿ ಸ್ವಾಗತಿಸಿದರು. ಮಹದೇವಗೌಡ ಹುತ್ತನಗೌಡರ ನಿರೂಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ